Supreme Court of India
Supreme Court of India 
ಸುದ್ದಿಗಳು

ಸಿಎಎ ವಿರೋಧಿ ಪ್ರತಿಭಟನೆ: ಮಂಗಳೂರು ಗಲಭೆಯ ಆಪಾದನೆ ಹೊರಿಸಲಾದ 21 ಮಂದಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

Bar & Bench

ಕಳೆದ ವರ್ಷ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಘಟಿಸಿದ್ದ ಗಲಭೆಯಲ್ಲಿ ಭಾಗಿಯಾಗಿದ್ದರು ಎಂದು ಆಪಾದಿಸಲಾದ 21 ಮಂದಿಯನ್ನು ಬಿಡುಗಡೆ ಮಾಡುವಂತೆ ಈಚೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠವು ಆರೋಪಿತರಿಗೆ ಕಳೆದ ಫೆಬ್ರುವರಿಯಲ್ಲಿ ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ದಾಖಲಿಸಿಕೊಂಡಿತು.

CJI SA Bobde and Justices AS Bopanna and V Ramasubramanian

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಪೀಠವು ಹೀಗೆ ಹೇಳಿತು;

“ಆರೋಪಿತರು ಘಟನಾ ಸ್ಥಳದಲ್ಲಿದ್ದರು ಎಂಬುದನ್ನು ಮೇಲ್ನೋಟಕ್ಕೆ ಊಹಿಸುವುದು ಸಾಧ್ಯವಿಲ್ಲ ಎನ್ನುವ ಹೈಕೋರ್ಟ್ ಅಭಿಪ್ರಾಯವನ್ನು ಪರಿಗಣಿಸಿ, ಹೈಕೋರ್ಟ್ ಅಭಿಪ್ರಾಯವನ್ನು ಅಂತಿಮ ಸತ್ಯ ಎಂದು ತೀರ್ಮಾನಿಸದೆ ಹೋದರೂ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶಿಸುವುದು ಸಮ್ಮತ ಎಂದು ನಮಗನ್ನಿಸಿದೆ...”.

ಅರ್ಜಿದಾರರು ಪ್ರತಿ ಸೋಮವಾರ ವಾರಬಿಟ್ಟು ವಾರ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಬೇಕು. ಯಾವುದೇ ಸಭೆ/ಸಮಾರಂಭದಲ್ಲಿ ಭಾಗವಹಿಸುವಂತಿಲ್ಲ ಹಾಗೂ ಆರೋಪಿತರು ತಲಾ ₹25 ಸಾವಿರ ಮೊತ್ತದ ಬಾಂಡ್ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಹೈಕೋರ್ಟ್‌ ಮೇಲ್ನೋಟಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಅದು ಯಾವುದೇ ಕಾರಣಕ್ಕೂ ಎಂಥದೇ ಅನಿಶ್ಚಿತ ಸಂದರ್ಭದಲ್ಲೂ ವಿಚಾರಣೆಯ ಮೇಲೆ ಪ್ರಭಾವ ಬೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ಫೆಬ್ರುವರಿಯಲ್ಲಿ ಆರೋಪಿತರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲಿನ ದಾಳಿಯನ್ನು ಮುಚ್ಚಿಡಲು ಮಂಗಳೂರು ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ ಎಂದಿತ್ತು.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾದ ಜಾನ್ ಮೈಕೆಲ್ ಕುನ್ಹಾ ಅವರು ಆದೇಶ ನೀಡುವ ಸಂದರ್ಭದಲ್ಲಿ ಹೀಗೆ ಹೇಳಿದ್ದರು,

“... ಮನಬಂದಂತೆ ಮುಗ್ಧರನ್ನು ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಪೊಲೀಸರ ಲೋಪಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡುವ ಪ್ರಯತ್ನ ಕಂಡುಬರುತ್ತಿದೆ. ಪೊಲೀಸರಿಂದಲೇ ಕೊಲೆಯಾದವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 307ರ ಪ್ರಕರಣ ದಾಖಲಿಸಿರುವುದು ಪೊಲೀಸರ ಅತ್ಯುತ್ಸಾಹದಿಂದ ಸಾಬೀತಾಗಿದೆ.”

ಕರ್ನಾಟಕ ಹೈಕೋರ್ಟ್ ಆದೇಶದಿಂದ ತೃಪ್ತಗೊಳ್ಳದ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ನಲ್ಲಿ ಆದೇಶ ಪ್ರಶ್ನಿಸಿತ್ತು.

ಸಿಆರ್‌ಪಿಸಿ ಸೆಕ್ಷನ್ 144 ಉಲ್ಲಂಘಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಅರ್ಜಿದಾರರನ್ನು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಲಾಗಿತ್ತು. ಸಿಎಎ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ 24 ಗಂಟೆಗಳ ಕಾಲ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು.

ಅಕ್ರಮವಾಗಿ 1,500-2,000 ಮುಸ್ಲಿಮ್ ಯುವಕರು ಒಟ್ಟಾಗಿ ಸೇರುವ ಮೂಲಕ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಲು ಪಿತೂರಿ ನಡೆಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಅರ್ಜಿದಾರರ ವಿರುದ್ಧ ಭಾರತ ದಂಡ ಸಂಹಿತೆಯಡಿ ಕೊಲೆ ಯತ್ನ (ಸೆಕ್ಷನ್ 307), ಅಕ್ರಮವಾಗಿ ಗುಂಪು ಗೂಡುವುದು (ಸೆಕ್ಷನ್ 143) ಮತ್ತು ಕ್ರಿಮಿನಲ್ ಪಿತೂರಿ (ಸೆಕ್ಷನ್ 120B) ಪ್ರಕರಣ ದಾಖಲಿಸಲಾಗಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ರಾಜ್ಯ ಸರ್ಕಾರದ ಪರ ವಾದಿಸಿದರೆ ಅರ್ಜಿದಾರರನ್ನು ಹಿರಿಯ ವಕೀಲ ಆರ್ ಬಸಂತ್ ಪ್ರತಿನಿಧಿಸಿದ್ದರು.