Akhil Gogoi and Supreme Court 
ಸುದ್ದಿಗಳು

ರೈತ ನಾಯಕ, ಶಾಸಕ ಅಖಿಲ್ ಗೊಗೊಯ್‌ಗೆ ಜಾಮೀನು ನೀಡಿದ ಸುಪ್ರೀಂ: ಆರೋಪ ಮುಕ್ತಗೊಳಿಸಲು ನಕಾರ

ಗೊಗೊಯ್ ಅವರನ್ನು ಆರೋಪ ಮುಕ್ತಗೊಳಿಸಲು ನಿರಾಕರಿಸಿದ್ದ ಗುವಾಹಟಿ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ಎತ್ತಿಹಿಡಿದಿದೆ.

Bar & Bench

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಭಾಷಣ ಮಾಡಿದ್ದಕ್ಕಾಗಿ ಮತ್ತು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ಅಸ್ಸಾಮಿನ ರೈತ ನಾಯಕ ಹಾಗೂ ಸಿಬ್‌ಸಾಗರ್‌ ವಿಧಾನಸಭಾ ಕ್ಷೇತ್ರದ ಶಾಸಕ ಅಖಿಲ್‌ ಗೊಗೊಯ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಜಾಮೀನು ನೀಡಿದೆ [ಅಖಿಲ್‌ ಗೊಗೊಯ್‌ ಮತ್ತು ಸರ್ಕಾರ (ಎನ್‌ಐಎ) ಇನ್ನಿತರರ ನಡುವಣ ಪ್ರಕರಣ].

ಗೊಗೊಯ್ ಅವರನ್ನು ಆರೋಪ ಮುಕ್ತಗೊಳಿಸಲು ನಿರಾಕರಿಸಿದ್ದ ಗುವಾಹಟಿ ಹೈಕೋರ್ಟ್ ಆದೇಶವನ್ನು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್‌  ಅವರಿದ್ದ ಪೀಠ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶದ ವಿರುದ್ಧ ಗೊಗೊಯ್‌ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾರ್ಚ್ 20 ರಂದು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.

ಕಳೆದ ಫೆಬ್ರವರಿಯಲ್ಲಿ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರತಿಕ್ರಿಯೆ ಕೇಳಿ ನೋಟಿಸ್‌ ನೀಡಿತ್ತು. ವಿಚಾರಣೆ ಮುಗಿಯುವವರೆಗೆ ಗೊಗೊಯ್‌ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದೇ ಎಂಬ ಅಂಶಕ್ಕೆ ನೋಟಿಸ್‌ ಸೀಮಿತವಾಗಿತ್ತು.

ಬಿಡುಗಡೆ ಆದೇಶದ ನಂತರ ಜಾಮೀನಿನ ಮೇಲೆ ಹೊರಗಿರುವ ಗೊಗೊಯ್‌ ಅವರು ತಮ್ಮ ಸ್ವಾತಂತ್ರ್ಯ ದುರುಪಯೋಗಪಡಿಸಿಕೊಂಡ ಆರೋಪಗಳಿಲ್ಲ ಎಂದು ಗೊಗೊಯ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಹುಝೆಫಾ ಅಹ್ಮದಿ ವಾದಿಸಿದರು.

ಗೊಗೊಯ್ ಅವರು ಯುದ್ಧ ತರಬೇತಿಗಾಗಿ ಜನರನ್ನು ಕಳಿಸಿದ್ದ ಸಿಪಿಐ (ಮಾವೋವಾದಿ) ಸಂಘಟನೆ ಎಂದಿಗೂ ರಾಜಕೀಯ ಪಕ್ಷವಾಗಿರಲಿಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಆಕ್ಷೇಪಿಸಿದರು. ಇದೇ ವೇಳೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ವಕೀಲ ಕನು ಅಗರವಾಲ್ ಅವರೊಂದಿಗೆ ವಾದ ಮಂಡಿಸಿ "ಗೊಗೊಯ್‌ ವಿರುದ್ಧ ಯುಎಪಿಎ ಕಾಯಿದೆ ಅಡಿ ಪ್ರಕರಣ ದಾಖಲಿಸಿರುವುದು ಅವರು ಸಿಎಎ ವಿರೋಧಿಸಿ ಪ್ರತಿಭಟನೆ ಮಡಿದ್ದಾರೆಂದಲ್ಲ ಬದಲಿಗೆ ಭಯೋತ್ಪಾದಕ ವಿಧಾನ ಬಳಸಿ ಮತ್ತು ಚುನಾಯಿತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಅತಿ ಗಂಭೀರ ಅಪರಾಧಕ್ಕಾಗಿ" ಎಂದರು.

ಗೊಗೊಯ್ ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಗುವಾಹಟಿಯ ಎನ್‌ಐಎ ವಿಶೇಷ ನ್ಯಾಯಾಲಯ  ಜುಲೈ 2021ರಲ್ಲಿ ಮುಕ್ತಗೊಳಿಸಿತ್ತು. ಆದರೆ ತೀರ್ಪನ್ನು ಈ ವರ್ಷದ ಫೆಬ್ರವರಿ 9 ರಂದು ಹೈಕೋರ್ಟ್ ರದ್ದುಗೊಳಿಸಿತ್ತು. ಜೊತೆಗೆ ಗೊಗೊಯ್‌ ವಿರುದ್ಧ ಆರೋಪ ನಿಗದಿಪಡಿಸುವ ಕುರಿತು ಹೊಸದಾಗಿ ಪರಿಗಣಿಸುವಂತೆ ಸೂಚಿಸಿ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ಮರಳಿಸಿತ್ತು. ಇದನ್ನು ಪ್ರಶ್ನಿಸಿ ಗೊಗೊಯ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.