ಸುದ್ದಿಗಳು

ಭೀಮಾ ಕೋರೆಗಾಂವ್ ಪ್ರಕರಣ: ಪ್ರೊ. ಶೊಮಾ ಸೇನ್‌ಗೆ ಸುಪ್ರೀಂ ಕೋರ್ಟ್ ಜಾಮೀನು

Bar & Bench

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಹಾಗೂ ಪ್ರಾಧ್ಯಾಪಕಿ ಶೊಮಾ ಸೇನ್‌ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ [ಶೋಮಾ ಕಾಂತಿ ಸೇನ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಕೆಯ ಜಾಮೀನಿಗೆ ವಿರೋಧ ವ್ಯಕ್ತಪಡಿಸಿಲ್ಲ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ (ಯುಎಪಿಎ) ಜಾಮೀನಿಗೆ ಕಠಿಣ ಷರತ್ತುಗಳು ಅನ್ವಯಿಸುವುದಿಲ್ಲ ಎಂಬುದನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ವೈದ್ಯಕೀಯ ಪರಿಸ್ಥಿತಿಗಳ ಜೊತೆಗೆ ಶೊಮಾ ಅವರಿಗೆ ವಯಸ್ಸಾಗಿದ್ದು ವಿಚಾರಣೆ ವಿಳಂಬವಾಗಿರುವುದನ್ನು ಕಂಡಿದ್ದೇವೆ.  ಆಕೆಗೆ ಜಾಮೀನಿನ ಮೇಲೆ ಬಿಡುಗಡೆಯಾಗುವ ಸೌಲಭ್ಯ ನಿರಾಕರಿಸಬಾರದು ಎಂದು ನ್ಯಾಯಾಲಯ ನುಡಿದಿದೆ.

ತನ್ನ ಅವಲೋಕನವು ಪ್ರಾಥಮಿಕ ಸ್ವರೂಪದ್ದು ಮಾತ್ರವಾಗಿದ್ದು ಪ್ರಕರಣ ಸಾಕ್ಷಿಗಳ ಪರೀಕ್ಷೆಗೆ ಒಳಪಟ್ಟಿದ್ದು ಸೇನ್‌ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಅದು ಸ್ಪಷ್ಟಪಡಿಸಿದೆ.

ಸೇನ್ ಮಹಾರಾಷ್ಟ್ರ ತೊರೆಯುವಂತಿಲ್ಲ ಮತ್ತು ಪಾಸ್‌ಪೋರ್ಟ್‌ ಒಪ್ಪಿಸಬೇಕು. ತನ್ನ ವಾಸಸ್ಥಳ, ಮೊಬೈಲ್‌ ಸಂಖ್ಯೆ ಬಗ್ಗೆ ಆಕೆ ಎನ್‌ಐಎಗೆ ತಿಳಿಸಬೇಕು. ಮೊಬೈಲ್‌ ಹಾಗೂ ಅದರ ಜಿಪಿಎಸ್‌ ಸದಾ ಸಕ್ರಿಯವಾಗಿರಬೇಕು ಅದು ಚಾರ್ಜ್‌ ಆಗಿರುವಂತೆ ನೋಡಿಕೊಳ್ಳಬೇಕು. ಆಕೆ ಇರುವ ಸ್ಥಳವನ್ನು ಪತ್ತೆ ಹಚ್ಚಲು ಸಾಧ್ಯವಾಗುವಂತೆ ಎನ್‌ಐಎ ಅಧಿಕಾರಿಯ ಫೋನ್‌ ಜೊತೆ ಆಕೆಯ ಫೋನ್‌ ಜೋಡಣೆ ಮಾಡಬೇಕು ಎಂಬ ಷರತ್ತುಗಳನ್ನು ಜಾಮೀನು ನೀಡುವಾಗ ನ್ಯಾಯಾಲಯ ವಿಧಿಸಿದೆ. ಷರತ್ತನ್ನು ಉಲ್ಲಂಘಿಸಿದರೆ, ಜಾಮೀನು ರದ್ದತಿಯನ್ನು ಕೋರಲು ಪ್ರಾಸಿಕ್ಯೂಷನ್‌ಗೆ ಮುಕ್ತವಾಗಿರುತ್ತದೆ ಎಂದು ಕೂಡ ಅದು ಹೇಳಿದೆ.

ಸೇನ್‌ ಅವರನ್ನು ಜೂನ್ 6, 2018 ರಂದು ಬಂಧಿಸಿ ಯುಎಪಿಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.