A1
A1
ಸುದ್ದಿಗಳು

ಮಣಿಪುರ ಪೊಲೀಸರ ಎಫ್ಐಆರ್: ಸಂಪಾದಕರ ಒಕ್ಕೂಟದ ಪದಾಧಿಕಾರಿಗಳನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್

Bar & Bench

ಮಣಿಪುರ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಭಾರತೀಯ ಸಂಪಾದಕರ ಒಕ್ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ - ಇಜಿಐ) ಅಧ್ಯಕ್ಷರು ಮತ್ತು ಸತ್ಯಶೋಧನಾ ತಂಡದ ಸದಸ್ಯರರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ರಕ್ಷಣೆ ನೀಡಿದೆ.

ಸೆಪ್ಟೆಂಬರ್ 11ರವರೆಗೆ ಅರ್ಜಿಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಒತ್ತಾಯದ ಕ್ರಮಕ್ಕೆ ಮುಂದಾಗಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಸೂಚಿಸಿದೆ.  

ಎಫ್‌ಐಆರ್‌ ಪ್ರಶ್ನಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇಂದು ಬೆಳಿಗ್ಗೆ ಪೀಠದೆದುರು ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಪ್ರಕರಣ ಉಲ್ಲೇಖಿಸಿದ್ದರು. ಶೀಘ್ರವೇ ಪ್ರಕರಣದ ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿತ್ತು.

ಪೊಲೀಸರು ದಾಖಲಿಸಿರುವ ಎರಡು ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಸಂವಿಧಾನದ 32ನೇ ವಿಧಿಯಡಿ ತುರ್ತು ನಿರ್ದೇಶನ ನೀಡುವಂತೆ ಪ್ರಕರಣ ಪ್ರಸ್ತಾಪಿಸುವ ವೇಳೆ ದಿವಾನ್‌ ನ್ಯಾಯಾಲಯವನ್ನು ಕೋರಿದ್ದರು. ಗಲಭೆ ಕುರಿತು ಸ್ಥಳೀಯ ಮಾಧ್ಯಮಗಳು ಪಕ್ಷಪಾತದಿಂದ ವರದಿ ಮಾಡಿವೆ ಎಂದು ತೀರ್ಮಾನಕ್ಕೆ ಬಂದಿದ್ದ ಸತ್ಯಶೋಧನಾ ತಂಡದಲ್ಲಿ ಹಿರಿಯ ಪತ್ರಕರ್ತರು ಕೂಡ ಇದ್ದಾರೆ ಎಂದು ಅವರು ಹೇಳಿದ್ದರು.

ಮಣಿಪುರದ ಮೈತೇಯಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಕಿ ಸಮುದಾಯದ ನಡುವೆ ನಡೆದ ಘರ್ಷಣೆ ತೀವ್ರ ಹಿಂಸಾರೂಪ ಪಡೆದಿತ್ತು. ಏಪ್ರಿಲ್ 19, 2023 ರಂದು ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡುವಂತೆ ಮಣಿಪುರ ಹೈಕೋರ್ಟ್‌ ಆದೇಶಿಸಿದ ಬಳಿಕ ಬುಡಕಟ್ಟು ಅಲ್ಲದ (ಮೈತೇಯಿ )ಮತ್ತು ಬುಡಕಟ್ಟು ಸಮುದಾಯದ (ಕುಕಿ) ನಡುವೆ ಹಿಂಸಾಚಾರ ತಾರಕಕ್ಕೇರಿತ್ತು.