ನ್ಯಾಯಾಧೀಶರು ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯುವ ಕುರಿತಂತೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ಹಾಗೆ ಪ್ರಕರಣದಿಂದ ಹಿಂದೆ ಸರಿಯುವ ನಿರ್ಧಾರ ಸಂಬಂಧಪಟ್ಟ ನ್ಯಾಯಾಧೀಶರಿಗೆ ಮಾತ್ರ ಬಿಟ್ಟದ್ದಯ ಎಂದಿದೆ [ಚಂದ್ರಪ್ರಭಾ ಮತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ] .
ಯಾವುದೇ ಪ್ರಕರಣದಲ್ಲಿ 'ಸಂಪೂರ್ಣ ನ್ಯಾಯ' ನೀಡಲು ಸುಪ್ರೀಂ ಕೋರ್ಟ್ಗೆ ಅಧಿಕಾರ ನೀಡುವ ಸಂವಿಧಾನದ 142ನೇ ವಿಧಿಯಡಿ ದೊರೆತಿರುವ ಅಧಿಕಾರ ವ್ಯಾಪ್ತಿಯನ್ನು ಈ ಬಗೆಯ ಮಾರ್ಗಸೂಚಿ ರೂಪಿಸುವುದಕ್ಕಾಗಿ ಬಳಸಲಾಗದು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ಮೂರು ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನಿರ್ಧಾರದ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಕಳೆದ ವರ್ಷವೂ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ರೀತಿಯ ಮನವಿಗಳು ತಪ್ಪು ಸಂದೇಶ ಕಳಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತಿಳಿಸಿದ ಹಿನ್ನೆಲೆಯಲ್ಲಿ ಅರ್ಜಿಯನ್ನುಮನವಿದಾರರು ಹಿಂಪಡೆದರು. ಆದರೆ ವಿಚಾರಣೆಯಿಂದ ಹಿಂದೆ ಸರಿಯುವ ಕುರಿತು ಮಾರ್ಗಸೂಚಿ ಕೋರುವುದಕ್ಕಷ್ಟೇ ಸೀಮಿತವಾಗಿ ನೂತನ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ನ್ಯಾಯಾಲಯ ಈ ವೇಳೆ ನೀಡಿತು.
ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ನಿಶಾ ತಿವಾರಿ, ಅನಿಯಂತ್ರಿತವಾಗಿ ವಿಚಾರಣೆಯಿಂದ ಹಿಂದೆ ಸರಿಯುವುದನ್ನು ತಡೆಗಟ್ಟಲು ಮತ್ತು ಪಾರದರ್ಶಕತೆ ಉಳಿಸಿಕೊಳ್ಳಲು ಮಾರ್ಗಸೂಚಿಗಳು ಅಗತ್ಯ ಎಂದು ವಾದಿಸಿದರು. ಬೇರೆ ನ್ಯಾಯವ್ಯಾಪ್ತಿಗಳ ನ್ಯಾಯಾಧೀಶರು ಸಂಭಾವ್ಯ ಸಂಘರ್ಷಗಳನ್ನು ಮುಂಚಿತವಾಗಿ ಬಹಿರಂಗಪಡಿಸುವ ರೂಢಿ ಇರಿಸಿಕೊಂಡಿರುವುದನ್ನು ಅವರು ಪ್ರಸ್ತಾಪಿಸಿದರು.
ಆದರೆ ವಿಚಾರಣೆಯಿಂದ ಹಿಂದೆ ಸರಿಯುವ ಕುರಿತಂತೆ ಕಡ್ಡಾಯ ಮಾರ್ಗಸೂಚಿ ವಿಧಿಸುವ ಕಲ್ಪನೆಯನ್ನು ಪೀಠ ದೃಢವಾಗಿ ತಿರಸ್ಕರಿಸಿತು. ಅಂತಹ ನಿರ್ಧಾರಗಳು ಅಂತರ್ಗತವಾಗಿ ವ್ಯಕ್ತಿನಿಷ್ಠವಾಗಿವೆ ಎಂದು ಅದು ಹೇಳಿತು.
“ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುವುದು ಸಂಬಂಧಪಟ್ಟ ನ್ಯಾಯಧೀಶರ ವಿವೇಚನೆಗೆ ಬಿಟ್ಟ ವಬಿಚಾರ. ವಜಾಗೊಳಿಸಲು ಕಾರಣ ಬಹಿರಂಗಪಡಿಸಬೇಕೆ ಎಂದು ನಿರ್ಧರಿಸುವುದು ಅವರ ಜವಾಬ್ದಾರಿಯಾಗಿದೆ” ಎಂದು ನ್ಯಾಯಾಲಯ ನುಡಿಯಿತು.
ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯಿಂದ ಹಿಂದೆ ಸರಿದು ಒಂಬತ್ತು ತಿಂಗಳಾದರೂ ಹೈಕೋರ್ಟ್ನ ಮುಂದಿರುವ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿಲ್ಲ ಎಂಬ ಆರೋಪ ಕುರಿತಂತೆ ಅರ್ಜಿದಾರರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಬಳಿ ಅರ್ಜಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತು.