ಹರಿದ್ವಾರದ ಧರ್ಮ ಸಂಸದ್‌ನಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ನಡೆಸಿದ ದ್ವೇಷ ಭಾಷಣದ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಬುಧವಾರ ಸುಪ್ರೀಂ ಕೋರ್ಟ್ ನಡೆಸಲಿದೆ.
ನಾಳಿನ ಪ್ರಕರಣಗಳ ವಿಚಾರಣೆಯ ಪಟ್ಟಿಯಲ್ಲಿ ಮೊದಲ ಪ್ರಕರಣ ಇದಾಗಿದ್ದು, ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಲಿದೆ.
ಪಟ್ನಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಅವರು ಮನವಿ ಸಲ್ಲಿಸಿದ್ದು, ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಸ್ವತಂತ್ರ, ನಿಷ್ಪಕ್ಷಪಾತ ಮತ್ತು ವಿಶ್ವಾಸಾರ್ಹ ತನಿಖೆಗೆ ನಿರ್ದೇಶನ ಕೋರಿದ್ದಾರೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪ್ರಕರಣವನ್ನು ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠದ ಮುಂದೆ ಜನವರಿ 10ರಂದು ಉಲ್ಲೇಖಿಸಿದ್ದರು. ವಕೀಲರಾದ ಸುಮಿತಾ ಹಜಾರಿಕಾ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.