Transcription 
ಸುದ್ದಿಗಳು

ಮೊದಲ ಬಾರಿಗೆ ನೇರಪ್ರಸಾರದಲ್ಲಿಯೇ ಲಿಪ್ಯಂತರಗೊಳ್ಳಲಿವೆ ಸುಪ್ರೀಂ ಕೋರ್ಟ್ ವಿಚಾರಣೆಯ ವಿವರಗಳು

ಮೊದಲ ಬಾರಿಗೆ ನೇರಪ್ರಸಾರದಲ್ಲಿಯೇ ಲಿಪ್ಯಂತರಗೊಳ್ಳಲಿವೆ ಸುಪ್ರೀಂ ಕೋರ್ಟ್ ವಿಚಾರಣೆಯ ವಿವರಗಳು

Bar & Bench

ನ್ಯಾಯಾಲಯ ಕಲಾಪಗಳು ನೇರ ಪ್ರಸಾರವಾಗುತ್ತಿರುವಂತೆಯೇ ವಿಚಾರಣೆಯ ವಿವರಗಳನ್ನು ಲಿಪ್ಯಂತರಗೊಳಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ಹಾಗೂ ಸ್ವಾಭಾವಿಕ ಭಾಷಾ ಸಂಸ್ಕರಣೆ ನಡೆಸುವ ತಂತ್ರಜ್ಞಾನವನ್ನು ಬಳಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನ್ಯಾಯಾಲಯದ ಕೊಠಡಿಯಲ್ಲಿ ಇಂದು ಬೆಳಗ್ಗೆ 10:30ಕ್ಕೆ ಮಹಾರಾಷ್ಟ್ರದ ರಾಜಕೀಯ ಅಧಿಕಾರ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ  ಆರಂಭವಾದಾಗ ಪ್ರಾಯೋಗಿಕ ಆಧಾರದ ಮೇಲೆ ನೇರ ಪ್ರಸಾರ ಲಿಪ್ಯಂತರವನ್ನು ಆರಂಭಿಸಲಾಯಿತು.  

ಈ ವೇಳೆ ಮಾತನಾಡಿದ ಸಿಜೆಐ ಡಿ ವೈ ಚಂದ್ರಚೂಡ್‌ ಅವರು, "ವಕೀಲ ವರ್ಗದ ಸದಸ್ಯರೇ, ನೀವು ಇಲ್ಲಿ ಒಂದು ಪರದೆಯನ್ನು ನೋಡುತ್ತಿದ್ದೀರಿ. ಇದು ನೇರ ಲಿಪ್ಯಂತರ ವ್ಯವಸ್ಥೆಯಾಗಿದ್ದು, ಪ್ರಾಯೋಗಿಕವಾಗಿದೆ. ಇದು ಕೇವಲ ವಕೀಲರಿಗೆ ಮಾತ್ರವೇ ದೊಡ್ಡ ಸಂಪನ್ಮೂಲವಲ್ಲ, ಬದಲಿಗೆ ಇದರಿಂದ ಕಾನೂನು ಕಾಲೇಜುಗಳೂ ಉಪಯೋಗ ಪಡೆಯಲಿವೆ," ಎಂದು ಅವರು ಹೇಳಿದರು.

ಇದೇ ವೇಳೆ ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿಗಳಾದ ಪಿ ಎಸ್‌ ನರಸಿಂಹ ಅವರು ಇದು ದೇಶದ ಅತ್ಯುನ್ನತ ನ್ಯಾಯಾಲಯವನ್ನು ಅಕ್ಷರಶಃ "ದಾಖಲೆಯ ನ್ಯಾಯಾಲಯ (ಕೋರ್ಟ್‌ ಆಫ್‌ ರೆಕಾರ್ಡ್‌)" ಆಗಿಸಲಿದೆ ಎಂದರು.

ನ್ಯಾಯಾಲಯದ ಪ್ರಕ್ರಿಯೆಗಳ ನೇರ ಲಿಪ್ಯಂತರ ಪ್ರದರ್ಶಿಸುವ ಪರದೆಯನ್ನು ನ್ಯಾಯಾಲಯದ ಕೊಠಡಿ 1ರಲ್ಲಿ ವಕೀಲರಿಗೆ ಎದುರಾಗಿ ಇರಿಸಲಾಗಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ತನ್ನ ಜಾಲತಾಣದಲ್ಲಿ ಮೌಖಿಕ ವಾದಗಳ ಪ್ರತಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಸಹ ತಿಳಿದುಬಂದಿದೆ. ಮಧ್ಯಸ್ಥಿಕೆ ಪ್ರಕರಣಗಳನ್ನು ನಿಭಾಯಿಸುವ ವೃತ್ತಿಪರರಿಗೆ ಈ ಸೌಲಭ್ಯ ಒದಗಿಸುತ್ತಿರುವ TERES ಎಂಬ ಕಂಪನಿ ಸುಪ್ರೀಂ ಕೋರ್ಟ್‌ಗೆ ಲಿಪ್ಯಂತರ ಸೇವೆ ಒದಗಿಸುತ್ತಿದೆ.

ಪ್ರಮುಖ ಪ್ರಕರಣಗಳ ನೇರ ಪ್ರಸಾರ ಮಾಡುವಂತೆ ಕೋರಿದ್ದ ತನ್ನ ಮನವಿಯಲ್ಲಿ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಅವರು ದಾಖಲೀಕರಣಕ್ಕಾಗಿ ವಿಚಾರಣೆಗಳ ಆಡಿಯೊ ಪ್ರತಿಗಳಿಗೆ ಅನುಮತಿ ನೀಡುವಂತೆ ಈ ಹಿಂದೆ ಕೋರಿದ್ದರು. ಈ ವರ್ಷದ ಜನವರಿಯಲ್ಲಿ, ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠವು ಈ ಸಲಹೆಗಳನ್ನು ಅಧಿಕೃತವಾಗಿ ಪರಿಗಣಿಸಿತ್ತು.

ಮತ್ತೊಂದೆಡೆ ಇದೇ ಮೊದಲ ಬಾರಿಗೆ ಕೇರಳ ಹೈಕೋರ್ಟ್‌ ಇಂದಿನಿಂದ ತನ್ನ ಕೆಲವು ತೀರ್ಪುಗಳನ್ನು ಮಲಯಾಳಂ ಭಾಷೆಯಲ್ಲಿ ಪ್ರಕಟಿಸಲು ಆರಂಭಿಸಿದೆ.