Supreme Court 
ಸುದ್ದಿಗಳು

ಕೈಗಾರಿಕಾ ಮದ್ಯ ಕೂಡ ಅಮಲೇರಿಸುವ ಮದ್ಯ: ರಾಜ್ಯಗಳು ತೆರಿಗೆ ವಿಧಿಸಬಹುದು ಎಂದ ಸುಪ್ರೀಂ ಕೋರ್ಟ್

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನ ತೀರ್ಪು ನೀಡಿದ್ದಾರೆ.

Bar & Bench

ಸಂವಿಧಾನದ ಪಟ್ಟಿ IIರ (ರಾಜ್ಯ ಪಟ್ಟಿ)  ನಮೂದು 8ರ ಅಡಿಯಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಬಳಕೆಯಾಗುವ 'ಕೈಗಾರಿಕಾ ಮದ್ಯ'ವು ಸಹ 'ಅಮಲೇರಿಸುವ ಮದ್ಯ' ಎಂಬ ಅರ್ಥವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಕೈಗಾರಿಕಾ ಮದ್ಯವನ್ನು ನಿಯಂತ್ರಿಸಿ, ತೆರಿಗೆ ವಿಧಿಸಬಹುದು ಎಂದಿದೆ [ ಉತ್ತರ ಪ್ರದೇಶ ಸರ್ಕಾರ ಇನ್ನಿತರರು ಮತ್ತು  ಲಲ್ತಾ ಪ್ರಸಾದ್ ವೈಶ್ ನಡುವಣ ಪ್ರಕರಣ] .

ಸಿಜೆಐ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ , ಅಭಯ್ ಎಸ್ ಓಕಾ , ಬಿ ವಿ ನಾಗರತ್ನ , ಜೆ ಬಿ ಪರ್ದಿವಾಲಾ , ಮನೋಜ್ ಮಿಶ್ರಾ , ಉಜ್ಜಲ್ ಭುಯಾನ್ , ಸತೀಶ್ ಚಂದ್ರ ಶರ್ಮಾ ಹಾಗೂ ಅಗಸ್ಟೀನ್‌ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.

ರಾಜ್ಯ ಪಟ್ಟಿಯ ನಮೂದು 8ರ ಅಡಿಯಲ್ಲಿ ಅಮಲೇರಿಸುವ ಮದ್ಯದ ಅರ್ಥವು ಆಲ್ಕೊಹಾಲ್‌ ಒಳಗೊಂಡ ಪಾನೀಯಗಳು ಅಥವಾ ಕುಡಿಯಬಹುದಾದ ಆಲ್ಕೋಹಾಲ್ ಎಂಬ ಸಂಕುಚಿತ ವ್ಯಾಖ್ಯಾನವನ್ನು ಮೀರಿದ್ದಾಗಿದ್ದು ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ರೀತಿಯ ಆಲ್ಕೋಹಾಲ್‌ಗಳು ಅಮಲೇರಿಸುವ ಮದ್ಯದ ಅರ್ಥವ್ಯಾಪ್ತಿಗೆ ಬರುತ್ತವೆ ಎಂದು ಬಹುಮತದ ತೀರ್ಪು ಹೇಳಿದೆ.

"ಆಲ್ಕೊಹಾಲ್‌ ಇರುವ ಮದ್ಯ ಮತ್ತು ಅಮಲೇರಿಸುವ ಮದ್ಯವನ್ನು ಸೇವನೆಗೆ ಬಳಸಲಾಗುತ್ತದೆ. ಆದರೆ ಅಮಲೇರಿಸುವ ಮದ್ಯ ಎಂಬುದು ಅದರ ತಯಾರಿಕೆ ಇತ್ಯಾದಿಗಳಿಗೂ ಚಾಚಿಕೊಂಡಿದೆ. ಆಲ್ಕೊಹಾಲ್‌ ಇರುವ ಮದ್ಯವನ್ನು ಅದಕ್ಕೆ ಬಳಸುವ ಪದಾರ್ಥಗಳಿಂದ ವ್ಯಾಖ್ಯಾನಿಸಲಾಗುತ್ತದೆ ಮತ್ತು 'ಅಮಲೇರಿಸುವ ಮದ್ಯವನ್ನು' ಅದು ಬೀರುವ ಪರಿಣಾಮದಿಂದ ವ್ಯಾಖ್ಯಾನಿಸಲಾಗುತ್ತದೆ. ಹೀಗಾಗಿ, ಆಲ್ಕೊಹಾಲ್‌ ಇರುವ ಮದ್ಯವು ಅಮಲು ಬರಿಸುವುದಾದರೆ ಅದನ್ನು ಅಮಲೇರಿಸುವ ಮದ್ಯದ ಅಡಿಯೇ ಸೇರಿಸಬಹುದಾಗಿದೆ. ಈ ನಮೂದಿನಡಿ ರಚಿಸಲಾದ ಹಾಗೂ ವಿಕಸಿತವಾದ ಸ್ವರೂಪದ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶ ಸ್ಪಷ್ಟವಾಗಿದೆ "ಎಂದು ನ್ಯಾಯಾಲಯ ವಿವರಿಸಿದೆ.

ಆದ್ದರಿಂದ, ನಮೂದು 8 ರ ಅಡಿಯಲ್ಲಿ ಅಮಲೇರಿಸುವ ಮದ್ಯವನ್ನು ಸೇವನೆಗೆ ಯೋಗ್ಯವಾದ ಮದ್ಯಕ್ಕೆ ಮಿತಗೊಳಿಸಲಾಗದು ಎಂದು ಅದು ಹೇಳಿತು.

ಇದು 1990ರ ಸಿಂಥೆಟಿಕ್ಸ್ & ಕೆಮಿಕಲ್ಸ್ ಲಿಮಿಟೆಡ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ತಳ್ಳಿಹಾಕಿತು, ಅಮಲೇರಿಸುವ ಮದ್ಯ ಕೇವಲ ಸೇವನೆಗೆ ಯೋಗ್ಯವಾದ ಮದ್ಯವನ್ನು ಸೂಚಿಸುತ್ತದೆ ಮತ್ತು ರಾಜ್ಯಗಳು ಕೈಗಾರಿಕಾ ಮದ್ಯಕ್ಕೆ ತೆರಿಗೆ ವಿಧಿಸುವಂತಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು.

ಅಮಲೇರಿಸುವ ಮದ್ಯ ಎಂಬ ಪದಗುಚ್ಛದ ಅರ್ಥ ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ರೀತಿಯ ಆಲ್ಕೋಹಾಲ್‌ಗಳು ಅಮಲೇರಿಸುವ ಮದ್ಯದ ಅರ್ಥವ್ಯಾಪ್ತಿಗೆ ಬರುತ್ತವೆ ವಿನಾ ಸೇವನೆಗೆ ಯೋಗ್ಯವಾದ ಆಲ್ಕೋಹಾಲ್‌ ಅಷ್ಟೇ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಇಂದು ಸ್ಪಷ್ಟವಾಗಿ ಹೇಳಿದೆ.

"ಅಮಲೇರಿಸುವ ಮದ್ಯದ ಉತ್ಪಾದನೆಗೆ  ಬಳಸುವ ಕಚ್ಚಾ ವಸ್ತುಗಳನ್ನು ಹೊರಗಿಡಲು ಪಟ್ಟಿ IIರ ನಮೂದು 8 ಅನ್ನು ಬಳಸುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ನಾಗರತ್ನ ಅವರು ಪ್ರತ್ಯೇಕ ಭಿನ್ನ ತೀರ್ಪು ನೀಡಿದರು.  

ಹಿನ್ನೆಲೆ

ಉತ್ತರ ಪ್ರದೇಶ ಸರ್ಕಾರ ಮತ್ತು ಲಾಲ್ತಾ ಪ್ರಸಾದ್ ವೈಶ್ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಅಕ್ಟೋಬರ್ 2007 ರಲ್ಲಿ ತೀರ್ಪು ನೀಡಿತ್ತು. ತೀರ್ಪಿನಲ್ಲಿ ಸಿಂಥೆಟಿಕ್ ಮತ್ತು ಕೆಮಿಕಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 1990ರಲ್ಲಿ ನೀಡಲಾದ ತೀರ್ಪು 1956ರಲ್ಲಿ ಚ, ಟೀಕಾ ರಾಮ್‌ಜೀ ಮತ್ತು ಉತ್ತರ ಪ್ರದೇಶ ನಡುವಣ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳು ನೀಡಿದ್ದ ತೀರ್ಪನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಪ್ರಕರಣವನ್ನು ಡಿಸೆಂಬರ್  8, 2010ರಂದು ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಾಗಿತ್ತು.

ವಿಚಾರಣೆಯ ಸಂದರ್ಭದಲ್ಲಿ, ಜಿಎಸ್‌ಟಿಯೋತ್ತರ ಪರೋಕ್ಷ ತೆರಿಗೆ ಆಡಳಿತದಲ್ಲಿ ಮತ್ತು  ಸಾರ್ವಜನಿಕ ಆರೋಗ್ಯದ ಮೇಲೆ ನಿಗಾ ಇಡಲು ಕೈಗಾರಿಕಾ ಮದ್ಯದ ಮೇಲೆ ತೆರಿಗೆ ವಿಧಿಸುವ ಅಧಿಕಾರ ತಮಗೆ ಅತ್ಯಗತ್ಯ ಎಂದು ರಾಜ್ಯಗಳು ವಾದಿಸಿದ್ದವು.

ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ವಕೀಲ ಕನು ಅಗರವಾಲ್ ವಾದ ಮಂಡಿಸಿದ್ದರು.