Air force personnel, supreme court 
ಸುದ್ದಿಗಳು

ಸೇನಾ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಬಳಿಕ ಸೈನಿಕನಿಗೆ ಎಚ್‌ಐವಿ ಸೋಂಕು: ₹1.6 ಕೋಟಿ ಪರಿಹಾರಕ್ಕೆ ಆದೇಶಿಸಿದ ಸುಪ್ರೀಂ

ಹಿರಿಯ ಅಧಿಕಾರಿಯ ಬಗ್ಗೆ ಘನತೆ, ಗೌರವ ಮತ್ತು ಸಹಾನುಭೂತಿ ಇಲ್ಲ. ಬದಲಿಗೆ ಅವರನ್ನು ತಿರಸ್ಕಾರ, ತಾರತಮ್ಯದಿಂದ ಕಾಣಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Bar & Bench

ಸೇನಾ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಬಳಿಕ ಎಚ್‌ಐವಿ ಸೋಂಕಿಗೆ ತುತ್ತಾಗಿರುವ ಹಿರಿಯ ಸೇನಾಧಿಕಾರಿಗೆ ₹1.6 ಕೋಟಿ ಪರಿಹಾರ ಪಾವತಿಸಲು ಭಾರತೀಯ ವಾಯು ಸೇನೆಗೆ (ಐಎಎಫ್‌) ಮಂಗಳವಾರ ಸುಪ್ರೀಂ ಕೋರ್ಟ್‌ ಆದೇಶಿಸಿದೆ [ಸಿಪಿಎಲ್‌ ಆಶೀಶ್‌ ಕುಮಾರ್‌ ಚೌಹಾಣ್‌ ವರ್ಸಸ್‌ ಕಮಾಂಡಿಂಗ್‌ ಅಧಿಕಾರಿ ಮತ್ತು ಇತರರು].

ಐಎಎಫ್‌ ಮತ್ತು ಸೇನೆಯ ನಡತೆಯ ಬಗ್ಗೆ ಪ್ರಹಾರ ನಡೆಸಿರುವ ನ್ಯಾಯಮೂರ್ತಿಗಳಾದ ಎಸ್‌ ರವೀಂದ್ರ ಭಟ್‌ ಮತ್ತು ದೀಂಪಕರ್‌ ದತ್ತಾ ಅವರ ನೇತೃತ್ವದ ವಿಭಾಗೀಯ ಪೀಠವು ಐಎಎಫ್‌ ಮತ್ತು ಸೇನೆಯು ಇದಕ್ಕೆ ಜಂಟಿ ಕಾರಣ ಎಂದಿದೆ.

“ಹಿರಿಯ ಸೇನಾಧಿಕಾರಿಗಳ ಘನತೆ, ಗೌರವ ಮತ್ತು ಸಹಾನುಭೂತಿಯ ಬಗ್ಗೆ ಎಷ್ಟರ ಮಟ್ಟಿಗೆ ತಾತ್ಸಾರ ಇದೆ ಎಂಬುದನ್ನು ಹಾಲಿ ಪ್ರಕರಣದಲ್ಲಿ ಕಾಣಬಹುದಾಗಿದೆ. ಪ್ರತಿವಾದಿ ಉದ್ಯೋಗದಾತರ ವರ್ತನೆಯಲ್ಲಿ, ಮೇಲ್ಮನವಿದಾರರ ಬಗೆಗಿನ ತಿರಸ್ಕಾರ ಮತ್ತು ತಾರತಮ್ಯ ಕಾಣಬಹುದಾಗಿದೆ. ಪ್ರಕರಣದಲ್ಲಿ ಈ ನ್ಯಾಯಾಲಯವು ಒಂದು ಹಂತದ ವಾಸ್ತವಿಕ ಪರಿಹಾರವನ್ನು ಕಲ್ಪಿಸಿದ್ದರೂ ಯಾವುದೇ ರೂಪದ ಹಣಕಾಸಿನ ಪರಿಹಾರವು ಅರ್ಜಿದಾರರ ಘನತೆಯ ಬುನಾದಿಯನ್ನೇ ಅಲುಗಾಡಿಸಿ, ಅವರ ಮರ್ಯಾದೆಯನ್ನು ದೋಚುವ ಮೂಲಕ ಅವರಿಗೆ ಉಂಟುಮಾಡಿರುವ ಧಕ್ಕೆಯನ್ನು ಭರಿಸಲಾಗದು. ಇದು ಅವರನ್ನು ಹತಾಶರನ್ನಷ್ಟೇ ಅಲ್ಲದೆ, ಸಿನಿಕರಾಗುವಂತೆಯೂ ಮಾಡಿದೆ.

ಎಚ್‌ಐವಿ ಮತ್ತು ಏಡ್ಸ್‌ ಕಾಯಿದೆಯ ಅನ್ವಯ ಹಲವು ಪ್ರಾಧಿಕಾರಗಳು ಎಚ್‌ಐವಿ ಸೋಂಕಿತರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ. ಎಚ್‌ಐವಿ ಕಾಯಿದೆ ಜಾರಿಗೊಳಿಸುವ ಸಂಬಂಧ ಕೇಂದ್ರ, ರಾಜ್ಯ ಸರ್ಕಾರ, ನ್ಯಾಯಾಲಯ ಮತ್ತು ಅರೆ ನ್ಯಾಯಿಕ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದೆ.

ಎಚ್‌ಐವಿ ಕಾಯಿದೆ ಸೆಕ್ಷನ್‌ 34ಕ್ಕೆ ಅನುಗುಣವಾಗಿ ಎಚ್‌ಐವಿ ಸೋಂಕಿತರ ಗುರುತು ಅನಾಮಿಕವಾಗಿ ಇಡುವ ಮೂಲಕ ಮಾಹಿತಿ ಸಂಗ್ರಹ, ಮಾರ್ಗಸೂಚಿ ರಚನೆಯ ಜೊತೆಗೆ ಹೊಸ ವಿಧಾನ ಸೂಚಿಸಲು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ಗೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿದೆ.