Prashant Bhushan, Supreme Court
Prashant Bhushan, Supreme Court 
ಸುದ್ದಿಗಳು

ಭೂಷಣ್ ವಿರುದ್ಧದ 2009ರ ನ್ಯಾಯಾಂಗ ನಿಂದನೆ ಪ್ರಕರಣ: ಅಟಾರ್ನಿ ಜನರಲ್‌ ಅವರನ್ನು ಪಕ್ಷಕಾರರನ್ನಾಗಿಸಿಕೊಂಡ ಸುಪ್ರೀಂ

Bar & Bench

ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ 2009 ರ ನ್ಯಾಯಾಂಗ ನಿಂದನೆ ಪ್ರಕರಣದ ದಾಖಲೆಗಳನ್ನು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಕಳುಹಿಕೊಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ ಗುರುವಾರ ಪ್ರಕರಣದ ವಿಚಾರಣೆ ನಡೆಸಿತು.

ಭೂಷಣ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್ ಅವರು, ಎಜಿ ವೇಣುಗೋಪಾಲ್ ಅವರು ನ್ಯಾಯಾಲಯಕ್ಕೆ ಸಹಾಯ ಮಾಡಲು ಇಚ್ಛಿಸುವುದಾಗಿ ಹಿಂದಿನ ವಿಚಾರಣೆಯ ವೇಳೆ ಹೇಳಿಕೆ ನೀಡಿದ್ದರು ಎಂಬುದನ್ನು ಭೂಷಣ್ ಪರವಾಗಿ ಹಾಜರಾದ ಹಿರಿಯ ವಕೀಲ ಧವನ್ ಕೋರ್ಟಿಗೆ ಮಾಹಿತಿ ನೀಡಿದ್ದು ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿಕೊಳ್ಳಬೇಕು ಎಂದು ಕೋರಿದರು.

ಸುಪ್ರೀಂಕೋರ್ಟಿನ 10ನೇ ನಿಯಮದ ಪ್ರಕಾರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರನ್ನು ಪಕ್ಷಕಾರರನ್ನಾಗಿ ಒಳಗೊಳ್ಳುವುದಾಗಿ ನ್ಯಾಯಾಲಯ ಹೇಳಿದ್ದು ಈ ಪ್ರಕರಣದಲ್ಲಿ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸುವ ಕುರಿತಂತೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದಿದೆ.

ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಕಾನೂನು ಪ್ರಶ್ನೆಗಳನ್ನು (Questions of Law ) ರೂಪಿಸಬೇಕಿದೆ ಎಂದು ಧವನ್ ಕೋರಿದ್ದು ಈ ಹಿಂದೆ ಹತ್ತು ಪ್ರಶ್ನೆಗಳ ಪಟ್ಟಿಗೆ ಇದನ್ನು ಸೇರಿಸುವುದಾಗಿ ಕೋರ್ಟ್ ತಿಳಿಸಿತ್ತು.

ಅಕ್ಟೋಬರ್ 12 ರಿಂದ ಪ್ರಾರಂಭವಾಗುವ ವಿಚಾರಣೆ ವೇಳೆ ಈ ವಿಷಯವನ್ನು ಕೋರ್ಟ್ ಪರಿಗಣಿಸಲಿದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂತೆ ನ್ಯಾಯಾಲಯ\ ಪ್ರಕರಣದಲ್ಲಿ ಭಾಗಿಯಾಗಿರುವ ವಕೀಲರನ್ನು ಕೇಳಿದೆ:

1. ಒಂದು ವೇಳೆ ನಿರ್ದಿಷ್ಟ ನ್ಯಾಯಾಧೀಶನ (ರ) ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡಲು ಅನುಮತಿಸುವುದಾದರೆ, ಯಾವ ನೆಲೆ ಮತ್ತು ಆಧಾರದಲ್ಲಿ ಅದನ್ನು ಮಾಡಬಹುದು, ಮತ್ತು ಈ ನಿಟ್ಟಿನಲ್ಲಿ ಗಮನಿಸಬಹುದಾದಂತಹ ಯಾವುದಾದರೂ ರಕ್ಷಣೆ ಇದೆಯೇ?

2. ಹಾಲಿ ನ್ಯಾಯಾಧೀಶರ ವಿರುದ್ಧ ಆರೋಪ ಬಂದಾಗ ಅಂತಹ ಪ್ರಕರಣಗಳಲ್ಲಿ ದೂರು ನೀಡಲು ಯಾವ ವಿಧಾನ ಅನುಸರಿಸಬೇಕು?

3. ನಿವೃತ್ತ ನ್ಯಾಯಾಧೀಶನ (ರ) ವಿರುದ್ಧ, ಭ್ರಷ್ಟಾಚಾರದ ಬಗ್ಗೆ ಯಾವುದೇ ಆರೋಪವನ್ನು ಸಾರ್ವಜನಿಕವಾಗಿ ಮಾಡುವ ಮೂಲಕ ನ್ಯಾಯಾಂಗದಲ್ಲಿ ಸಾರ್ವಜನಿಕರು ವಿಶ್ವಾಸ ಕಳೆದುಕೊಳ್ಳುವಂತಾದಾಗ ನ್ಯಾಯಾಂಗ ನಿಂದನೆ ಕಾಯ್ದೆಯಡಿ ಶಿಕ್ಷಿಸಲು ಸಾಧ್ಯವೇ?

ಪ್ರಸ್ತುತ ನ್ಯಾಯಾಂಗ ನಿಂದನೆ ಪ್ರಕರಣವು 2009ರಷ್ಟು ಹಿಂದಿನದಾಗಿದ್ದು ಪ್ರಶಾಂತ್ ಭೂಷಣ್ ಅವರು ತೆಹಲ್ಕಾ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ನ್ಯಾಯಾಂಗದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಈ ಬಗ್ಗೆ ದೂರು ನೀಡಿದ ನಂತರ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಸ್ವಯಂ ಪ್ರೇರಿತ ನೋಟಿಸ್ ಜಾರಿ ಮಾಡಿದೆ. ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಗೆ ತ್ರಿಸದಸ್ಯ ನ್ಯಾಯಪೀಠ ನವೆಂಬರ್ 10, 2010 ರಂದು ತಡೆ ನೀಡಿತ್ತು.