Sanjiv Bhatt 
ಸುದ್ದಿಗಳು

ಪದೇ ಪದೇ ಅರ್ಜಿ ಸಲ್ಲಿಕೆ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ₹ 3 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

ಭಟ್ ಪದೇ ಪದೇ ಅರ್ಜಿಗಳನ್ನು ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ ಮೂರು ಅರ್ಜಿಗಳಿಗೆ ಪೀಠ ತಲಾ ₹ 1 ಲಕ್ಷ ದಂಡ ವಿಧಿಸಿತು.

Bar & Bench

ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಉದ್ದೇಶದಿಂದ ಮಾದಕ ವಸ್ತು ಇರಿಸಲಾಗಿತ್ತು ಎಂದು ತಮ್ಮ ವಿರುದ್ಧ ಆರೋಪಿಸಲಾಗಿದ್ದ ಇಪ್ಪತ್ತೇಳು ವರ್ಷ ಹಳೆಯದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ಮನವಿ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ₹ 3 ಲಕ್ಷ ದಂಡ ವಿಧಿಸಿದೆ.

ಭಟ್ ಪದೇ ಪದೇ ಅರ್ಜಿಗಳನ್ನು ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ ಮೂರು ಅರ್ಜಿಗಳಿಗೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ತಲಾ ₹ 1 ಲಕ್ಷ ದಂಡ ವಿಧಿಸಿತು.

"ನೀವು (ಇದೇ ವಿಷಯವಾಗಿ) ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವುದು ಎಷ್ಟು ಬಾರಿ? ಕನಿಷ್ಠ ಹನ್ನೆರಡು ಬಾರಿ? ಕಳೆದ ಬಾರಿ ನ್ಯಾಯಮೂರ್ತಿ ಗವಾಯಿ ಅವರು ₹10 ಸಾವಿರ ದಂಡ ವಿಧಿಸಿದ್ದರವಲ್ಲವೇ? ಈ ಬಾರಿ 6 ಅಂಕಿಯ ದಂಡ? ನೀವು ಹಿಂತೆಗೆದುಕೊಳ್ಳುತ್ತೀರಾ? ನ್ಯಾ. ಗವಾಯಿ ಅವರು ಕರುಣೆ ತೋರಿಸಿದ್ದರು" ಎಂದ ನ್ಯಾ. ವಿಕ್ರಮ್ ನಾಥ್. ಮನವಿ ವಜಾಗೊಳಿಸಿದರು.

ದಂಡದ ಮೊತ್ತವನ್ನು ಗುಜರಾತ್ ಹೈಕೋರ್ಟ್ ವಕೀಲರ ಸಂಘದಲ್ಲಿ ಠೇವಣಿ ಇಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.

ಈ ವರ್ಷದ ಆಗಸ್ಟ್ 24ರಂದು ಗುಜರಾತ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಭಟ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು. ತನ್ನ ವಿರುದ್ಧ ದಾಖಲಾಗಿರುವ ಮಾದಕ ವಸ್ತು ಇರಿಸಿದ್ದ ಪ್ರಕರಣದ ವಿಚಾರಣೆ ನಡೆಸುವ ವಿಚಾರಣಾ ನ್ಯಾಯಾಲಯದ ನ್ಯಾಯಸಮ್ಮತತೆ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು.

ಮಾದಕವಸ್ತು ಹೊಂದಿದ್ದ ಆರೋಪದಡಿ ರಾಜಸ್ಥಾನ ಮೂಲದ ವಕೀಲರೊಬ್ಬರನ್ನು 1996ರಲ್ಲಿ ಬನಾಸ್‌ಕಾಂಠ ಪೊಲೀಸರು ಬಂಧಿಸಿದ್ದರು. ಈ ವೇಳೆ ಭಟ್‌ ಅವರು ಬನಾಸ್‌ಕಾಂಠ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದರು.

ಆದರೆ ಇದೊಂದು ಸುಳ್ಳು ಪ್ರಕರಣವಾಗಿದ್ದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಕೀಲರನ್ನು ಬೆದರಿಸುವ ಉದ್ದೇಶದಿಂದ ಕೇಸ್‌ ದಾಖಲಿಸಲಾಗಿತ್ತು ಎಂದು ರಾಜಸ್ಥಾನ ಪೊಲೀಸರು ನಂತರ ಹೇಳಿದ್ದರು. ಭಟ್ ಅವರನ್ನು ಸೆಪ್ಟೆಂಬರ್ 2018ರಲ್ಲಿ ಬಂಧಿಸಲಾಗಿದ್ದು ಅಂದಿನಿಂದ ಅವರು ಜೈಲಿನಲ್ಲಿದ್ದಾರೆ. ಭಟ್ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸುವ ಮೂಲಕ ದೇಶದ ಗಮನ ಸೆಳೆದಿದ್ದರು.