ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಅಂತಿಮ ಆದೇಶ ಹೊರಬಿದ್ದ 2 ವರ್ಷದ ಬಳಿಕ ಅರ್ಜಿ: ಅದಾನಿ ಪವರ್‌ಗೆ ₹ 50,000 ದಂಡ ವಿಧಿಸಿದ ಸುಪ್ರೀಂ

ಅದಾನಿ ಪವರ್‌ಗೆ ರಾಜಸ್ಥಾನ ರಾಜ್ಯ ಡಿಸ್ಕಾಮ್ ಜೈಪುರ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ ನೀಡಬೇಕಾದ ಬಾಕಿ ಮೊತ್ತವನ್ನು ತಡವಾಗಿ ಪಾವತಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Bar & Bench

ಹೆಚ್ಚುವರಿ ತೆರಿಗೆಯನ್ನು (ಸರ್ಚಾರ್ಜ್‌) ವಿಳಂಬವಾಗಿ ಪಾವತಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ಮರುಪರಿಶೀಲಿಸುವ ಕುರಿತಂತೆ ಅಂತಿಮ ಆದೇಶ ಹೊರಡಿಸಿದ ಎರಡು ವರ್ಷಗಳ ಬಳಿಕ ಅರ್ಜಿ ಸಲ್ಲಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಸೋಮವಾರ ಅದಾನಿ ಪವರ್‌ಗೆ ₹ 50,000 ದಂಡ ವಿಧಿಸಿದೆ.

ಅದಾನಿ ಪವರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಇಂದು ವಜಾಗೊಳಿಸಿತು.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಪಿ ವಿ ಸಂಜಯ್ ಕುಮಾರ್

ಅದಾನಿ ಪವರ್‌ಗೆ ರಾಜಸ್ಥಾನ ರಾಜ್ಯ ಡಿಸ್ಕಾಮ್ ಜೈಪುರ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್ ನೀಡಬೇಕಾದ ಬಾಕಿ ಮೊತ್ತವನ್ನು ತಡವಾಗಿ ಪಾವತಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಅದಾನಿ ಪವರ್ ಈ ಸರ್ಚಾರ್ಜ್ ಪಾವತಿಸಬೇಕಿಲ್ಲ ಎಂದು 2020ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಅಂತೆಯೇ ಡಿಸ್ಕಾಮ್ ಬಾಕಿ ಇರುವ ಸಂಪೂರ್ಣ ಮೊತ್ತವನ್ನು ಪಾವತಿಸಿದ್ದು ಇದನ್ನು ಅದಾನಿ ಪವರ್‌ ಸ್ವೀಕರಿಸಿತ್ತು. ಆದರೆ, ಆನಂತರ ಅದಾನಿ ಪವರ್‌ ಮೊತ್ತಕ್ಕೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಿತು.

ಆಗಸ್ಟ್ 31, 2020ರಲ್ಲೇ ಅಂತಿಮ ಆದೇಶ ಬಂದಿದ್ದರೂ ಜನವರಿ 6, 2023ರಂದು ಅರ್ಜಿಯನ್ನು ಪಟ್ಟಿ ಮಾಡಲಾಗಿದೆ ಎಂದು ದೂರಿ ಡಿಸ್ಕಾಮ್‌ ಕಳೆದ ವರ್ಷ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಬರೋಬ್ಬರಿ ಎರಡು ವರ್ಷಗಳ ಬಳಿಕ ತೀರ್ಪು ಪರಿಶೀಲಿಸುವಂತೆ ಕೋರಿರುವುದರನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು.

ಡಿಸ್ಕಾಮ್ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದ್ದರೂ, ಅದನ್ನು ಮಾರ್ಚ್ 2021ರಲ್ಲಿ ವಜಾಗೊಳಿಸಲಾಯಿತು. ಇತ್ತ ಅದಾನಿ ಪವರ್‌ ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿತ್ತು.

ಆರೋಪಗಳ ಬಗ್ಗೆ ಕಳೆದ ವರ್ಷ ಜನವರಿಯಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ವರದಿ ಕೇಳಿತ್ತು.

ವಿಚಾರಣೆ ವೇಳೆ, ಖಚಿತವಾದ ನ್ಯಾಯಾಂಗ ಆದೇಶಗಳ ಹೊರತಾಗಿಯೂ ಪ್ರಕರಣ ಪಟ್ಟಿ ಮಾಡದಿರುವ ಬಗ್ಗೆ ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿತ್ತು.

ಅಂತಿಮ ವಿಚಾರಣೆ ವೇಳೆ ಡಿಸ್ಕಾಮ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ದುಶ್ಯಂತ್ ದವೆ ಮತ್ತು ಅದಾನಿ ಪವರ್ ಪರವಾಗಿ ವಾದ ಮಂಡಿಸಿದ್ದ ಮತ್ತೊಬ್ಬ ಹಿರಿಯ ನ್ಯಾಯವಾದಿ ಡಾ.ಅಭಿಷೇಕ್ ಮನು ಸಿಂಘ್ವಿ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಡಿಸ್ಕಾಮ್ ಪರವಾಗಿ ವಕೀಲ ಕಾರ್ತಿಕ್ ಸೇಠ್ ಕೂಡ ಹಾಜರಿದ್ದರು.