Justice N Kirubakaran and Supreme Court
Justice N Kirubakaran and Supreme Court 
ಸುದ್ದಿಗಳು

ನವದೆಹಲಿಯಲ್ಲಿ ಮಾತ್ರ ಸುಪ್ರೀಂಕೋರ್ಟ್ ಇರುವುದು ದೇಶದ ಬಹುತೇಕ ಜನಕ್ಕೆ ಮಾಡಿದ ಅನ್ಯಾಯ: ನ್ಯಾ. ಎನ್ ಕಿರುಬಕರನ್

Bar & Bench

ಸುಪ್ರೀಂಕೋರ್ಟನ್ನು ನವದೆಹಲಿಗೆ ಮಾತ್ರ ಸೀಮಿತಗೊಳಿಸುವುದರಿಂದ ದೆಹಲಿಯಾಚೆಗಿನ ಬಹುತೇಕ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ನಿಂದ ಇಂದು ನಿವೃತ್ತರಾದ ನ್ಯಾ. ಎನ್‌ ಕಿರುಬಕರನ್‌ ಅಭಿಪ್ರಾಯಪಟ್ಟರು. ಅಲ್ಲದೆ “ನ್ಯಾಯಾಂಗದಲ್ಲಿ, ದೆಹಲಿ ಮತ್ತು ಬಾಂಬೆ ಶಕ್ತಿ ಕೇಂದ್ರಗಳಾಗಿವೆ. ಆದರೆ ಇತರ ರಾಜ್ಯಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾಗಿ ಪ್ರತಿನಿಧಿಸಲು ಸಾಧ್ಯವಾಗಿಲ್ಲ” ಎಂದು ಅವರು ತಿಳಿಸಿದರು.

"ಗೌರವಾನ್ವಿತ ಸುಪ್ರೀಂಕೋರ್ಟ್ ಇಡೀ ಜನತೆಗೆ ಸೇರಿದ್ದು ನವದೆಹಲಿ ಮತ್ತು ಸುತ್ತಮುತ್ತಲಿನ ಜನರಿಗೆ ಮಾತ್ರ ಅಲ್ಲ. ಸುಪ್ರೀಂ ಕೋರ್ಟ್ ನವದೆಹಲಿಯಲ್ಲಿ ಮಾತ್ರ ಇರುವುದು ಬಹುತೇಕ ಜನರಿಗೆ ಮಾಡಿದ ಅನ್ಯಾಯವಾಗಿದೆ. ಸುಪ್ರೀಂಕೋರ್ಟ್‌ ಆಡಳಿತಾತ್ಮಕ ಭಾಗದಲ್ಲಿ ಪ್ರಾದೇಶಿಕ ಪೀಠಗಳ ಸ್ಥಾಪನೆ ತಿರಸ್ಕರಿಸಿದೆ ಎಂದು ಹೇಳಲಾಗುತ್ತಿದೆ. ಗೌರವಾನ್ವಿತ ಸುಪ್ರೀಂಕೋರ್ಟ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುತ್ತದೆ ಮತ್ತು ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂಬುದಾಗಿ ಅವರು ವಿವರಿಸಿದರು.

ಮದ್ರಾಸ್‌ ಹೈಕೋರ್ಟ್‌ನಿಂದ ನಿವೃತ್ತರಾದ ನ್ಯಾ. ಕಿರುಬಕರನ್‌ ಅವರಿಗಾಗಿ ಗುರುವಾರ ಸಂಜೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ʼಆಕ್ಟಿವಿಸ್ಟ್ ನ್ಯಾಯಮೂರ್ತಿʼ ಎಂದು ಹೆಸರುವಾಸಿಯಾಗಿರುವ ನ್ಯಾ. ಕಿರುಬಾಕರನ್ ಅವರು ಪ್ರಕರಣಗಳನ್ನು ನಿರ್ವಹಿಸುವಾಗ ಏಕೆ ನಿಯಮಗಳ ಕಟ್ಟುನಿಟ್ಟಾದ ನಿರ್ಬಂಧಗಳಿಗೆ ಯಾವತ್ತೂ ತಾವು ಅಂಟಿಕೊಳ್ಳಲಿಲ್ಲ ಎಂಬ ಬಗ್ಗೆ ಮಾತನಾಡಿದರು.

" ನ್ಯಾಯಾಂಗ ಅತಿಕ್ರಮಣ ಮಾಡುತ್ತಿದ್ದ ಹಾಗೂ ನಿಯಮಗಳ ಪ್ರಕಾರ ಮುಂದುವರೆಯದ ಜನ ನನ್ನನ್ನು ಪ್ರಚಾರಪ್ರಿಯ ಎಂದು ಟೀಕಿಸುತ್ತಿದ್ದರು, ಹೌದು, ಕಾನೂನು ಅಂಶಗಳನ್ನು ಲೆಕ್ಕಿಸದೆ, ನಾನು ನನ್ನ ಧರ್ಮಕ್ಕೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ನಿಯಮ ಮತ್ತು ನಿಬಂಧನೆಗಳನ್ನು ಗೌರವಿಸಿದ್ದೇನೆ. ಎಲ್ಲಕ್ಕೂ ಮಿಗಿಲಾಗಿ ನಿಯಮಗಳು ನ್ಯಾಯದ ದಾಸಿಯರು. ಅನೇಕ ಬಾರಿ, ಕಟ್ಟುನಿಟ್ಟಾದ ಶಿಸ್ತುಪಾಲನೆ ಗುರಿಯನ್ನು ನಿರಾಶೆಗೊಳಿಸುತ್ತದೆ. ಕೆಲವೊಮ್ಮೆ, ನಾನು ನ್ಯಾಯದ ಕಟ್ಟಾ ಪಂಚಾಯತ್ ನಡೆಸುತ್ತಿದ್ದೆ, ಇದು ನ್ಯಾಯ ಮತ್ತು ಪಕ್ಷಗಳ ಹಿತದೃಷ್ಟಿಯಿಂದ ಅಗತ್ಯವಾಗಿತ್ತು, "ಎಂದು ಅವರು ಹೇಳಿದರು.

ಪ್ರತಿಯೊಂದು ಪ್ರಕರಣವೂ ಅನನ್ಯವಾಗಿದ್ದು ಸತ್ಯಾಸತ್ಯತೆಗೆ ತಕ್ಕಂತೆ ಅಂತಹವುಗಳಿಗೆ ಚಿಕಿತ್ಸೆ ನೀಡಬೇಕಿರುತ್ತದೆ ಎಂದ ಅವರು ಪ್ರಕರಣಗಳನ್ನು ನಿರ್ಧರಿಸುವ ಹಳೆಯ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

"ಪ್ರಕರಣದ ನಾಡಿಮಿಡಿತವನ್ನು ಅರಿಯಬೇಕು ಮತ್ತು ಅಗತ್ಯವಿರುವ ಚಿಕಿತ್ಸೆಯನ್ನು ವೈದ್ಯರಂತೆಯೇ ಒದಗಿಸಬೇಕು. ನಾನು ಸತ್ಯಕ್ಕೆ ಕಾನೂನನ್ನು ಅನ್ವಯಿಸಿದೆ, ಅದಕ್ಕೆ ವಿರುದ್ಧವಾಗಿಯಲ್ಲ. ನನ್ನ ಅಭಿಪ್ರಾಯದಲ್ಲಿ ಹಳೆಯ ನಿಯಮವನ್ನು ಸ್ಥಗಿತಗೊಳಿಸಬೇಕು. ಒಂದು ಪ್ರಕರಣಕ್ಕೆ ಅನ್ವಯಿಸುವ ತತ್ವ ಭಿನ್ನ ಸಂಗತಿಗಳಿಂದ ಕೂಡಿದ ಉಳಿದ ಪ್ರಕರಣಗಳಿಗೆ ಅನ್ವಯವಾಗದೇ ಇರಬಹುದು. ಹೆಚ್ಚಿನ ಉಲ್ಲೇಖಗಳನ್ನು ಅರಿಯುತ್ತಾ ಹೋಗುವುದು ನ್ಯಾಯಾಧೀಶರ ಸ್ವಾತಂತ್ರ್ಯವನ್ನು ಹಾಳುಮಾಡುತ್ತದೆ" ಎಂದು ಅವರು ಹೇಳಿದರು.

ವಕೀಲ ಸಮುದಾಯ ನ್ಯಾ. ಕಿರುಬಕರನ್‌ ಅವರನ್ನು ಹೇಗೆ ಸ್ಮರಿಸುತ್ತದೆ ಎಂಬ ಕುರಿತು ಅಡ್ವೊಕೇಟ್‌ ಜನರಲ್‌ ಆರ್‌ ಷಣ್ಮುಗಸುಂದರಂ ಮಾತನಾಡಿದರು.