Supreme Court 
ಸುದ್ದಿಗಳು

ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ: ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಾಗಿ ತಾನು ನೀಡಿದ್ದ ತೀರ್ಪಿನ ಪಾಲನೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ಘಟನೆ ನಡೆದ ಎರಡೂ ಸ್ಥಳಗಳಿಂದ ವರದಿ ತರಿಸಿಕೊಳ್ಳುವಂತೆ ನ್ಯಾಯಾಲಯ ರಿಜಿಸ್ಟ್ರಿಗೆ ಸೂಚಿಸಿದೆ.

Bar & Bench

ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ ಈ ಕುರಿತು ಎಫ್‌ಐಆರ್‌ ದಾಖಲಾಗಿದೆಯೇ ಎಂದು ಮಂಗಳವಾರ ಪ್ರಶ್ನಿಸಿದೆ [ಅಮಿತ್‌ ಕುಮಾರ್‌ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಖರಗ್‌ಪುರ ಐಐಟಿ ಸಂಸ್ಥೆಯಲ್ಲಿ ಮೂರನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮೊಹಮ್ಮದ್ ಆಸಿಫ್ ಕಮರ್ ಅವರ ಮೃತದೇಹ ಮೇ 4 ರಂದು ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮತ್ತೊಂದು ಘಟನೆಯಲ್ಲಿ ಮಧ್ಯಪ್ರದೇಶದ ಅಪ್ರಾಪ್ತೆ, ನೀಟ್ ಆಕಾಂಕ್ಷಿಯೊಬ್ಬರು ರಾಜಸ್ಥಾನದ ಕೋಟಾದ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ವಿದ್ಯಾರ್ಥಿನಿ ಸೇರಿದಂತೆ ಪ್ರಸಕ್ತ ವರ್ಷ ಕೋಟಾದಲ್ಲಿ ಹದಿನಾಲ್ಕು ಮಂದಿ ಕೋಚಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆಗೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಕೆಲಸ ಮಾಡಲು ಸುಪ್ರೀಂ ಕೋರ್ಟ್‌ ಕಾರ್ಯಪಡೆ ರಚಿಸಿದ್ದರೂ ಸಾವು ಸಂಭವಿಸಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ನ್ಯಾಯಾಲಯ ಕೋಟಾ ವಿದ್ಯಾರ್ಥಿನಿಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಮಾರ್ಚ್ 24ರಂದು ನೀಡಿದ ತೀರ್ಪಿನ ಪಾಲನೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿ ಘಟನೆ ನಡೆದ ಎರಡೂ ಸ್ಥಳಗಳಿಂದ ವರದಿ ತರಿಸಿಕೊಳ್ಳುವಂತೆ ನ್ಯಾಯಾಲಯ ತನ್ನ ರಿಜಿಸ್ಟ್ರಿಗೆ ಸೂಚಿಸಿದೆ. ಅಂತೆಯೇ ಪ್ರಕರಣವನ್ನು ಅದು ಮೇ 13ಕ್ಕೆ ಮುಂದೂಡಿದೆ.

ತಾನು ಮಾರ್ಚ್‌ 24ರಂದು ಹೊರಡಿಸಿದ ಮಾರ್ಗಸೂಚಿಗಳನ್ನು ಶಿಕ್ಷಣ ಸಂಸ್ಥೆಗಳು ಪಾಲಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನ್ಯಾಯಾಲಯ ಈ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡಿದೆ.

ಮಾರ್ಚ್ 24ರಂದು ನೀಡಿದ ತೀರ್ಪಿನಲ್ಲಿ ರೈತರ ಆತ್ಮಹತ್ಯೆಗಿಂತಲೂ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಾಗಿ ಕಾರ್ಯಪಡೆ ರಚಿಸಿತ್ತು. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳನ್ನು ಗುರುತಿಸಲು ಮತ್ತು ರ‍್ಯಾಗಿಂಗ್, ತಾರತಮ್ಯ ಇತ್ಯಾದಿಗಳನ್ನು ತಡೆಯಲು ಇರುವ ಕಾಯಿದೆಗಳ ಪರಿಣಾಮ ಅಳೆಯಲು ಕಾರ್ಯಪಡೆಗೆ ಸೂಚಿಸಲಾಗಿತ್ತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್‌ ರವೀಂದ್ರ ಭಟ್‌ ಕಾರ್ಯಪಡೆಯ ಅಧ್ಯಕ್ಷರಾಗಿದ್ದಾರೆ.

ಕಾರ್ಯಪಡೆಯ ಕಾರ್ಯನಿರ್ವಹಣೆಗೆ ಅಗತ್ಯವಾದ ಮೂಲಧನವಾಗಿ ರೂ. 20 ಲಕ್ಷ ಹಣವನ್ನು ಪಾವತಿಸುವಂತೆ ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿತ್ತು. ಆದರೆ, ಮೂಲಧನವನ್ನು ಕೇಂದ್ರ ಸರ್ಕಾರ ಈವರೆಗೆ ಪಾವತಿಸಿಲ್ಲ ಎನ್ನುವ ವಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿತು. ಈ ವೇಳೆ ಮೂಲಧನ ಪಾವತಿಸಲು ಎರಡು ದಿನಗಳ ಗಡುವು ವಿಸ್ತರಿಸಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Amit_Kumar_Ors__vs__Union_of_India___Or_.pdf
Preview

ಗಮನಿಸಿ:

ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ಆತ್ಮಹತ್ಯೆ ಅಥವಾ ಸ್ವಯಂ-ಹಾನಿಯ ಆಲೋಚನೆ ಹೊಂದಿದ್ದರೆ, ದಯವಿಟ್ಟು ಕೆಳಗೆ ನೀಡಲಾದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಿ:

ಐಕಾಲ್ - 9152987821 (ಆರೋಗ್ಯ ಸಹಾಯವಾಣಿ - ಸೋಮ—ಶನಿ, ಬೆಳಿಗ್ಗೆ 10—ರಾತ್ರಿ 8.)

ಭಾವನಾತ್ಮಕ ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ಎದುರಿಸುತ್ತಿರುವವರಿಗೆ ಮತ್ತು ಪ್ರೀತಿಪಾತ್ರರ ಆತ್ಮಹತ್ಯೆಯ ನಂತರ ಆಘಾತಕ್ಕೆ ಒಳಗಾಗುವವರಿಗೆ ಆಸ್ರಾ ಬೆಂಬಲ ನೀಡುತ್ತದೆ.

24x7 ಸಹಾಯವಾಣಿ: 9820466726