Supreme Court 
ಸುದ್ದಿಗಳು

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ವಿವಾದಾತ್ಮಕ ಹೇಳಿಕೆ: ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ವಿಚಾರಣೆ

ಈ ವಿಚಾರದಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಾಯವನ್ನೂ ಸರ್ವೋಚ್ಚ ನ್ಯಾಯಾಲಯ ಬಯಸಿದೆ.

Bar & Bench

“ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದು ಪಾಕಿಸ್ತಾನದಲ್ಲಿದೆ...” ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಕಳೆದ ಆಗಸ್ಟ್‌ 28ರಂದು ಬಾಡಿಗೆ ನಿಯಂತ್ರಣ ಕಾಯಿದೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸಿರುವ ಮಾತುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಹಾಗೂ ಹೃಷಿಕೇಶ್ ರಾಯ್ ನೇತೃತ್ವದ ಪೀಠ ವಿವಾದದ ಸಂಬಂಧ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ವರದಿ ಕೇಳಿದೆ.

ಈ ವಿಚಾರದಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಾಯವನ್ನೂ ಅದು ಬಯಸಿದೆ.

"ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ನೀಡಿದ ಕೆಲ ಹೇಳಿಕೆಗಳ ಬಗ್ಗೆ ನಮ್ಮ ಗಮನ ಸೆಳೆಯಲಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ನಾವು ಎಜಿ ಮತ್ತು ಎಸ್‌ಜಿ ಅವರನ್ನು ಕೇಳಿಕೊಳ್ಳುತ್ತಿದ್ದೇವೆ.  ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಗೆ ತಿಳಿಸುತ್ತಿದ್ದೇವೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಆಡಳಿತಾತ್ಮಕ ನಿರ್ದೇಶನಗಳನ್ನು ಪಡೆದು 2 ವಾರಗಳಲ್ಲಿ ಈ ಪ್ರಕ್ರಿಯೆ ಕೈಗೊಳ್ಳಬಹುದು, ” ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಇಂತಹ ಘಟನೆಗಳು ಮರುಕಳಿಸದಿರುವ ನಿಟ್ಟಿನಲ್ಲಿ ತಾನು ಕೆಲ ಮೂಲಭೂತ ಮಾರ್ಗಸೂಚಿಗಳನ್ನು ರೂಪಿಸುವ ಸಾಧ್ಯತೆಗಳಿವೆ ಎಂದು ಅದು ಹೇಳಿದೆ.

ನ್ಯಾಯಮೂರ್ತಿ ಶ್ರೀಶಾನಂದ ಅವರ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಒಂದು ವೀಡಿಯೊದಲ್ಲಿ , ಅವರು ಬೆಂಗಳೂರಿನ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶವನ್ನು 'ಪಾಕಿಸ್ತಾನ' ಎಂದು ಕರೆದಿದ್ದರು.

“ಬೆಂಗಳೂರಿನ ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ ನೋಡಿ. ಅಲ್ಲಿ ಸಂಚರಿಸುವ ಪ್ರತಿಯೊಂದು ಆಟೊ ರಿಕ್ಷಾದಲ್ಲೂ 10 ಜನರನ್ನು ತುಂಬಿಕೊಂಡಿರಲಾಗುತ್ತದೆ. ಮೈಸೂರು ರಸ್ತೆಯ ಮೇಲ್ಸೆತುವೆ ಸಾಗುವ ಗೋರಿಪಾಳ್ಯದಿಂದ ಮಾರುಕಟ್ಟೆಯವರೆಗಿನ ಪ್ರದೇಶ ಭಾರತದಲ್ಲಿ ಇಲ್ಲ. ಅದು ಪಾಕಿಸ್ತಾನದಲ್ಲಿದೆ. ಇದು ವಾಸ್ತವ.. ಇದು ವಾಸ್ತವ.. ಎಂತಹುದೇ ಕಟ್ಟುನಿಟ್ಟಿನ ದಕ್ಷ ಪೊಲೀಸ್ ಅಧಿಕಾರಿಯನ್ನು ಅಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದರೂ ಅವರನ್ನು ಹಿಡಿದುಬಿಡಲಿ ನೋಡುತ್ತೇನೆ... ” ಎಂದಿದ್ದರು.

ಇನ್ನೊಂದು ವಿವಾದ

ಮತ್ತೊಂದು ವೀಡಿಯೊದಲ್ಲಿ ಪ್ರತಿವಾದಿ ವಕೀಲರೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಮಹಿಳಾ ವಕೀಲರೊಬ್ಬರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದರು.

 “ಅವರ ಬಗ್ಗೆ (ಎದುರು ಪಕ್ಷ) ನಿಮಗೆ ಪೂರ್ತಿ ಗೊತ್ತಿದೆ ! ನಾಳೆ ಬೆಳಿಗ್ಗೆ ಕೇಳಿದರೆ ಇನ್ನೇನಾದರೂ ಹೇಳುತ್ತೀರಿ. ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂದೂ ಹೇಳುತ್ತೀರಿ” ಎಂದು ವಕೀಲೆಯನ್ನು ಉದ್ದೇಶಿಸಿ ತಮಾಷೆ ಮಾಡಿದ್ದರು.