Vedanta
Vedanta 
ಸುದ್ದಿಗಳು

ವೇದಾಂತ ಕಂಪೆನಿಗೆ ದೊರೆಯದ ಮಧ್ಯಂತರ ಪರಿಹಾರ‌: ತೂತ್ತುಕುಡಿಯಲ್ಲಿ ತಾಮ್ರ ಸ್ಥಾವರ ಪುನರಾರಂಭಕ್ಕೆ ಸುಪ್ರೀಂ ನಕಾರ

Bar & Bench

ತೂತ್ತುಕುಡಿಯಲ್ಲಿರುವ ತನ್ನ ತಾಮ್ರ ಸ್ಥಾವರವನ್ನು ತಕ್ಷಣ ಪುನರಾರಂಭಿಸಬೇಕೆಂದು ಕೋರಿದ್ದ ಗಣಿಗಾರಿಕೆಯ ದೈತ್ಯ ಕಂಪೆನಿ ವೇದಾಂತ ಸ್ಟರ್ಲೈಟ್‌ಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ನ್ಯಾ. ರೋಹಿಂಟನ್ ಫಾಲಿ ನಾರಿಮನ್ ನೇತೃತ್ವದ ತ್ರಿಸದಸ್ಯ ಪೀಠ ವಿಸ್ತೃತ ವಿಚಾರಣೆ ನಡೆಸುವ ಉದ್ದೇಶದಿಂದ ಪ್ರಕರಣವನ್ನು 2021ರ ಜನವರಿಗೆ ಮುಂದೂಡಿದೆ.

ಮುಚ್ಚಲ್ಪಟ್ಟಿರುವ ವಿವಾದಿತ ತಾಮ್ರ ಸ್ಥಾವರವನ್ನು ಪುನರಾರಂಭಿಸಲು ಕೋರಿದ ಅರ್ಜಿಯನ್ನು ಕಳೆದ ಆಗಸ್ಟ್‌ನಲ್ಲಿ ನಿರಾಕರಿಸಿದ್ದ ಮದ್ರಾಸ್‌ ಹೈಕೋರ್ಟ್‌ ತೀರ್ಪನ್ನು ವೇದಾಂತ ಸ್ಟರ್ಲೈಟ್‌ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಪರಿಸರ ಸಂಬಂಧಿ ಕಾನೂನುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ತಮಿಳುನಾಡು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2018ರಲ್ಲಿ ತೂತ್ತುಕುಡಿಯಲ್ಲಿನ ವೇದಾಂತ ಸ್ಟರ್ಲೈಟ್ ತಾಮ್ರ ಸ್ಥಾವರವನ್ನು ಸ್ಥಗಿತಗೊಳಿಸಿತ್ತು. ಮಂಡಳಿಯ ಆದೇಶಕ್ಕೆ ರಾಜ್ಯ ಸರ್ಕಾರ ಬೆಂಬಲ ಸೂಚಿಸಿದ ಒಂದು ವಾರದೊಳಗೆ ಆದೇಶ ಜಾರಿಗೆ ಬಂದಿತ್ತು. ಸ್ಥಾವರ ವಿಸ್ತರಣೆ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿಭಟನೆಯ ನೂರನೇ ದಿನ ಪೊಲೀಸರ ಗುಂಡೇಟಿನಿಂದಾಗಿ ಹಲವರ ಸಾವು- ನೋವು ಸಂಭವಿಸಿತ್ತು.

ವೇದಾಂತ ಕಂಪೆನಿ ಸ್ಥಾವರ ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ದೂರು ನೀಡಿತು. ಅಲ್ಲಿ ಕಂಪೆನಿಯ ಪರವಾಗಿ ತೀರ್ಪು ದೊರೆಯಿತು. ಈ ಆದೇಶವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂಕೋರ್ಟ್‌ ಮುಂದೆ ಪ್ರಶ್ನಿಸಿತ್ತು ಮೇಲ್ಮನವಿ ವಿಚಾರಣೆಯ ಹಂತದಲ್ಲಿರುವಾಗ ಸ್ಥಾವರವನ್ನು ಪುನಃ ತೆರೆಯುವ ಎನ್‌ಜಿಟಿ ಆದೇಶ ಮುಂದುವರೆಯುತ್ತದೆ ಎಂದು ನ್ಯಾಯಾಲಯ ಹೇಳಿತ್ತು.

ಸ್ಥಾವರವನ್ನು ಪುನಃ ತೆರೆಯಲು ಅನುಮತಿ ನೀಡುವ ಎನ್‌ಜಿಟಿ ಆದೇಶವನ್ನು 2019ರ ಫೆಬ್ರುವರಿಯಲ್ಲಿ ತಳ್ಳಿಹಾಕಿದ ಸುಪ್ರೀಂಕೋರ್ಟ್‌ಪ್ರಕರಣದ ವಿಚಾರಣೆ ನಡೆಸಲು ಎನ್‌ಜಿಟಿಗೆ ನ್ಯಾಯವ್ಯಾಪ್ತಿ ಇಲ್ಲ ಎಂದಿತು. ಆದರೆ, ಪ್ರತಿಕೂಲ ಆದೇಶಗಳ ವಿರುದ್ಧ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ವೇದಾಂತಕ್ಕೆ ಅವಕಾಶ ನೀಡಲಾಯಿತು. ಪ್ರಸ್ತುತ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಆಲಿಸಬೇಕೆಂದು ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.

ವೇದಾಂತ ಕಂಪೆನಿಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ "4 ಸಾವಿರ ಮಂದಿಗೆ ನೇರ ಹಾಗೂ 20 ಸಾವಿರ ಮಂದಿಗೆ ಪರೋಕ್ಷ ಉದ್ಯೋಗವನ್ನು ಸ್ಥಾವರವು ನೀಡಿದೆ. ವಿವಿಧ ರೀತಿಯಲ್ಲಿ ಇದರ ಮೇಲೆ ಅವಲಂಬಿಸಿರುವವರ ಸಂಖ್ಯೆ ಎರಡು ಲಕ್ಷ. ದೇಶದ 36% ತಾಮ್ರದ ಅಗತ್ಯತೆಯನ್ನು ಇದು ಪೂರೈಸುತ್ತಿದೆ. ಘಟಕ ಮುಚ್ಚಿರುವುದರಿಂದ ಭಾರತವು ತಾಮ್ರವನ್ನು ಆಮದು ಮಾಡಿಕೊಳ್ಳುವಂತಾಗಿದೆ. ಅಗತ್ಯವಿರುವ ಎಲ್ಲ ಅನುಮೋದನೆಗಳು ಮತ್ತು ಪರಿಸರ ಸುರಕ್ಷತೆಗಳು ಜಾರಿಯಲ್ಲಿವೆ" ಎಂದು ಅವರು ಹೇಳಿದರು.

ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಾಲಾಜಿ ಶ್ರೀನಿವಾಸನ್ ಅವರ ಮೂಲಕ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ ʼಸ್ಥಾವರ ಸ್ಥಿರ ಮಾಲಿನ್ಯಕಾರಕ ಎಂಬುದು ಮಂಡಳಿಯ ವರದಿಯಿಂದ ಸಾಬೀತಾಗಿದೆ ಎಂದಿತು. "ಕಂಪೆನಿತೂತ್ತುಕುಡಿಯ 11 ಸ್ಥಳಗಳಲ್ಲಿ ಮಾಲಿನ್ಯಕಾರಕವನ್ನು ಚೆಲ್ಲಿದೆ. ಇದರಿಂದ ಮಾಲಿನ್ಯಕಾರಕದೊಳಗೆ ತೂತ್ತುಕುಡಿಯನ್ನು ಎಸೆದಂತಾಗಿದೆ” ಎಂದು ವಿಶ್ವನಾಥನ್‌ ಹೇಳಿದರು.

ಸ್ಥಾವರ ಸ್ಥಗಿತಗೊಳಿಸುವ ಮಂಡಳಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿರುವುದರಿಂದ ಅದನ್ನು ಪುನಃ ತೆರೆಯಲು ಮಧ್ಯಂತರ ವ್ಯವಸ್ಥೆಗೆ ಈ ಹಂತದಲ್ಲಿ ಅನುಮತಿ ನೀಡಬಾರದು ಎಂದು ಅವರು ನ್ಯಾಯಾಲಯವನ್ನು ಕೋರಿದರು. ಅದನ್ನು ನ್ಯಾಯಾಲಯ ಪುರಸ್ಕರಿಸಿತು.