Accident Image for representational purposes
ಸುದ್ದಿಗಳು

ಮೋಟಾರು ಅಪಘಾತ ಹಾಗೂ ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ ಪಡೆಯದ ಫಲಾನುಭವಿಗಳ ಪತ್ತೆಗೆ ಸುಪ್ರೀಂ ನಿರ್ದೇಶನ

"ಹಲವು ಯಶಸ್ವಿ ಕ್ಲೇಮುದಾರರು ಪರಿಹಾರದಿಂದ ವಂಚಿತರಾಗಿರುವುದು ತುಂಬಾ ವಿಚಲಿತಗೊಳಿಸುವಂತಿದೆ. ಇದಕ್ಕೆ ಪರಿಹಾರ ಕಂಡುಹಿಡಿಯುವುದು ಅವಶ್ಯಕ" ಎಂದು ನ್ಯಾಯಾಲಯ ಹೇಳಿದೆ.

Bar & Bench

ಮೋಟಾರು ಅಪಘಾತ ಪ್ರಕರಣಗಳು ಮತ್ತು ಕಾರ್ಮಿಕ ಪ್ರಕರಣಗಳಲ್ಲಿ ಪರಿಹಾರ ದೊರೆಯದೆ ಇರುವ ಫಲಾನುಭವಿಗಳ ಒತ್ತೆಗೆ ಬೃಹತ್‌ ಅಭಿಯಾನ ಆರಂಭಿಸುವಂತೆ ಅಂತಹ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಮಂಡಳಿಗಳಿಗೆ ನಿರ್ದೇಶನ ನೀಡಬೇಕು ಎಂದು ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ [ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಗಳು ಮತ್ತು ಕಾರ್ಮಿಕ ನ್ಯಾಯಾಲಯಗಳಲ್ಲಿ ಠೇವಣಿ ಇಡಲಾದ ಪರಿಹಾರದ ಮೊತ್ತ ಕುರಿತಂತೆ ಆರಂಭಿಸಿರುವ ಸ್ವಯಂ ಪ್ರೇರಿತ ಪ್ರಕರಣ].

ತನ್ನ ನಿರ್ದೇಶನ ಜಾರಿಗೆ ತರುವ  ಯತ್ನಗಳು ಆದಷ್ಟು ಬೇಗ ಪ್ರಾರಂಭವಾಗಬೇಕು ಎಂದಿರುವ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಜುಲೈ 30ರೊಳಗೆ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದೆ.

ಪರಿಹಾರಕ್ಕೆ ಅರ್ಹರಾಗಿರುವ ಕ್ಲೇಮುದಾರರನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರಗಳು ಸ್ಥಳೀಯ ಪೊಲೀಸರು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಂದಾಯ ಅಧಿಕಾರಿಗಳ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ಸಹಾಯ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು ಈ ನಿರ್ದೇಶನಗಳು ಪಾಲನೆಯಾಗಿವೆಯೇ ಎಂದು ಮೇಲ್ವಿಚಾರಣೆ ಮಾಡುವಂತೆ ಅದು ಹೇಳಿದೆ.

ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ವರದಿಗಳಲ್ಲಿ, ಹೈಕೋರ್ಟ್‌ಗಳ ರಿಜಿಸ್ಟ್ರಾರ್‌ ಜನರಲ್‌ಗಳು ನ್ಯಾಯಮಂಡಳಿಗಳಲ್ಲಿ ಇನ್ನೂ ಪರಿಹಾರ ಪಡೆಯದೆ ಉಳಿದಿರುವ ಮೊತ್ತದ ವಿವರಗಳನ್ನು  ನೀಡಬೇಕು ಎಂದು ನ್ಯಾಯಾಲಯ ಬಯಸಿದೆ.

ಗುಜರಾತ್‌ನ ನಿವೃತ್ತ ಜಿಲ್ಲಾ ನ್ಯಾಯಾಧೀಶರೊಬ್ಬರು ವಿವಿಧ ನ್ಯಾಯಮಂಡಳಿಗಳಲ್ಲಿ ಅಪಾರ ಪ್ರಮಾಣದ ಪರಿಹಾರ ಹಣವು ಸಂಬಂಧಪಟ್ಟ ಕ್ಲೇಮುದಾರರು, ಫಲಾನುಭವಿಗಳು ಹಕ್ಕುಸಾಧನೆಯನ್ನು ಮಾಡದ ಕಾರಣಕ್ಕೆ ಹಾಗೆಯೇ ಉಳಿದಿದೆ ಎಂದು ಕಳವಳ ವ್ಯಕ್ತಪಡಿಸಿದ ನಂತರ ದಾಖಲಿಸಿಕೊಳ್ಳಲಾದ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ  ನೀಡಿದೆ. ಮೇ 2024ರಲ್ಲಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ ಬಿ ಪಾಠಕ್ ಪ್ರಕರಣವನ್ನು ಎತ್ತಿ ತೋರಿಸಿ ಸುಪ್ರೀಂ ಕೋರ್ಟ್‌ಗೆ ಇಮೇಲ್ ಕಳುಹಿಸಿದ್ದರು.

ಈ ಸಂಬಂಧ ಗುಜರಾತ್, ಅಲಹಾಬಾದ್, ಬಾಂಬೆ, ಕಲ್ಕತ್ತಾ, ದೆಹಲಿ ಮದ್ರಾಸ್ ಹೈಕೋರ್ಟ್‌ಗಳು ಸೇರಿದಂತೆ ವಿವಿಧ ಉಚ್ಚ ನ್ಯಾಯಾಲಯಗಳ ರಿಜಿಸ್ಟ್ರಾರ್ ಜನರಲ್‌ಗಳಿಂದ ಸುಪ್ರೀಂ ಕೋರ್ಟ್‌ ಪ್ರತಿಕ್ರಿಯೆ ಕೇಳಿದೆ.

1923ರ ಕಾರ್ಮಿಕರ ಪರಿಹಾರ ಕಾಯಿದೆಯಡಿಯಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗಳಲ್ಲಿ (ಎಂಎಸಿಟಿಗಳು) ಮತ್ತು ಆಯುಕ್ತರ ಮುಂದೆ ಠೇವಣಿ ಇಟ್ಟ ಪರಿಹಾರ ಮೊತ್ತದ ಮಾಹಿತಿ ನೀಡುವಂತೆ ಹೈಕೋರ್ಟ್‌ಗಳನ್ನು ಕೇಳಲಾಗಿತ್ತು.

ನ್ಯಾಯಾಲಯವು ಹಲವಾರು ಕೋಟಿ ಪರಿಹಾರ ಹಣ ಇನ್ನೂ ಅದರ ಫಲಾನುಭವಿಗಳನ್ನು ತಲುಪಿಲ್ಲ ಎಂಬುದು ಹೈಕೋರ್ಟ್‌ಗಳು ನೀಡಿದ ಪ್ರತಿಕ್ರಿಯೆಗಳಿಂದ ತಿಳಿದುಬಂದಿತ್ತು.

ಇದೀಗ ಸುಪ್ರೀಂ ಕೋರ್ಟ್‌ ಏಪ್ರಿಲ್ 22ರಂದು ನೀಡಿದ ಆದೇಶದಲ್ಲಿ, ಪರಿಹಾರದ ಮೊತ್ತ  ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಲು ಎಲ್ಲಾ ಎಂಎಸಿಟಿಗಳು ಮತ್ತು ಕಾರ್ಮಿಕ ಆಯುಕ್ತರಿಗೆ ವಿವರವಾದ ನಿರ್ದೇಶನಗಳನ್ನು ನೀಡಿದೆ.

ಬಾಕಿ ಇರುವ ಪರಿಹಾರದ ಮೊತ್ತವನ್ನು ಕ್ಲೇಮುದಾರರಿಗೆ ತಲುಪಿಸುವುದಕ್ಕಾಗಿತನ್ನ ನಿರ್ದೇಶನಗಳ ಹೊರತಾಗಿ ಹೆಚ್ಚುವರಿ ಕ್ರಮ ತೆಗೆದುಕೊಳ್ಳಲು ಎಲ್ಲಾ ಹೈಕೋರ್ಟ್‌ಗಳು ಸ್ವತಂತ್ರವಾಗಿವೆ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 18ರಂದು ನಡೆಯಲಿದೆ.