Arvind Kejriwal and Supreme Court  
ಸುದ್ದಿಗಳು

ಬಂಧನ ಪ್ರಶ್ನಿಸಿದ್ದ ಕೇಜ್ರಿವಾಲ್: ಇ ಡಿಗೆ ಸುಪ್ರೀಂ ನೋಟಿಸ್; ಏಪ್ರಿಲ್ 23ರ ತನಕ ನ್ಯಾಯಾಂಗ ಬಂಧನ

Bar & Bench

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿ ಇ ಡಿ ವಶಕ್ಕೆ ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್ ಜಾರಿ ಮಾಡಿದೆ [ಅರವಿಂದ್ ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಇ ಡಿ ಪ್ರತಿಕ್ರಿಯೆ ಕೇಳಿರುವ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಪ್ರಕರಣವನ್ನು ಏಪ್ರಿಲ್ 29 ಕ್ಕೆ ಮುಂದೂಡಿತು.

ಕೇಜ್ರಿವಾಲ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅದಕ್ಕೂ ಮೊದಲೇ ವಿಚಾರಣೆ ನಡೆಸುವಂತೆ ಕೋರಿದರು. ಆದರೂ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್ 29ಕ್ಕೆ ಮುಂದೂಡಿತು.

ಆದರೂ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಕೇಜ್ರಿವಾಲ್‌ ಅವರ ಬಂಧನವನ್ನು ಸಿಂಘ್ವಿ ಪ್ರಶ್ನಿಸಿದರು. ,

 ಆಗ ನ್ಯಾಯಾಲಯ "ನಮಗೆ ವಾಸ್ತವಾಂಶ ತಿಳಿದಿದ್ದು ನಾವು ದಾಖಲೆಗಳ ಪ್ರಕಾರ ನಡೆದುಕೊಂಡಿದ್ದೇವೆ.  ನಾವು ನೋಟಿಸ್ ನೀಡಿದ ನಂತರ ನೀವು ವಾದಿಸಬಾರದು" ಎಂದಿತು.

ಪ್ರಕರಣದಲ್ಲಿ ಕೇಜ್ರಿವಾಲ್ ಶಾಮೀಲಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ಎಂದು  ಅಭಿಪ್ರಾಯಪಟ್ಟಿದ್ದ ದೆಹಲಿ ಹೈಕೋರ್ಟ್ ತನ್ನ ಅರ್ಜಿ ವಜಾಗೊಳಿಸಿದ ನಂತರ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಕಿಕ್‌ಬ್ಯಾಕ್ ಆಗಿ ಪಡೆದ ಹಣವನ್ನು 2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು.

2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಆಗಸ್ಟ್ 17, 2022 ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಇ ಡಿ ಅಕ್ರಮ ಹಣ ವರ್ಗಾವಣೆಯ ತನಿಖೆ ಕೈಗೆತ್ತಿಕೊಂಡಿತ್ತು.

 ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಹಾಗೂ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರನ್ನು ಬಂಧಿಸಲಾಗಿತ್ತು. ಮತ್ತೊಂದೆಡೆ ಇದೇ ಪ್ರಕರಣದಲ್ಲಿ ಭಾರತ ರಾಷ್ಟ್ರ ಸಮಿತಿ ಶಾಸಕಿ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಪುತ್ರಿ ಕೆ ಕವಿತಾ ಅವರನ್ನು ಕೂಡ ಇ ಡಿ ಬಂಧಿಸಿದೆ. ಈ ಮಧ್ಯೆ ಸಂಜಯ್‌ ಸಿಂಗ್‌ ಅವರಿಗೆ ಜಾಮೀನು ದೊರೆತಿತ್ತು. 

ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು  ದೆಹಲಿ ನ್ಯಾಯಾಲಯ ಸೋಮವಾರ ಏಪ್ರಿಲ್ 23 ರವರೆಗೆ ವಿಸ್ತರಿಸಿದೆ.

ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇ ಡಿ ಬಂಧಿಸಿತ್ತು; ಅವರು ಏಪ್ರಿಲ್ 1ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.