Saket GokhaleFacebook
Saket GokhaleFacebook 
ಸುದ್ದಿಗಳು

ಸಾಕೇತ್ ಗೋಖಲೆ ಜಾಮೀನು ಅರ್ಜಿ: ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್‌

Bar & Bench

ನಿಧಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ  ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿದೆ [ಸಾಕೇತ್ ಸುಹಾಸ್ ಗೋಖಲೆ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].

ಎರಡು ವಾರಗಳಲ್ಲಿ ಗುಜರಾತ್ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಸೂಚಿಸಿದೆ. ಗೋಖಲೆ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.

ಆನ್‌ಲೈನ್‌ ಅಭಿಯಾನದ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಖಲೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಗೋಖಲೆ ಅವರ ವಿರುದ್ಧ ಮೇಲ್ನೋಟದ ಅಪರಾಧ ಕಂಡು ಬಂದಿರುವುದಾಗಿ ಹೈಕೋರ್ಟ್‌ ತಿಳಿಸಿತ್ತು. ಸಾಕ್ಷಿಗಳ ಹೇಳಿಕೆಗಳ ಪ್ರಕಾರ, ಅವರು ದೂರುದಾರರ ಪತ್ನಿಯಿಂದ ಮಾತ್ರವಲ್ಲದೆ 1,767 ವ್ಯಕ್ತಿಗಳಿಂದ ಹಣ ಪಡೆದಿದ್ದಾರೆ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಈ ಮೊತ್ತ ಸಂಗ್ರಹಿಸಲಾಗಿದ್ದು ಹೆಚ್ಚಿನ ವಹಿವಾಟುಗಳು ಆನ್‌ಲೈನ್‌ ಮೂಲಕ ನಡೆದಿವೆ ಎಂದು ಅದು ಹೇಳಿತ್ತು.

ಗೋಖಲೆ ಅವರು ಆರಂಭಿಸಿದ್ದ ಕ್ರೌಡ್‌ಫಂಡಿಂಗ್‌ಗೆ (ಆನ್‌ಲೈನ್‌ ಮುಖೇನ ನಿರ್ದಿಷ್ಟ ಉದ್ದೇಶದ ಸಲುವಾಗಿ ಆಸಕ್ತ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು) ತಮ್ಮ ಪತ್ನಿ ಸ್ವಲ್ಪ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದರು. ಆದರೆ ಈ ಹಣ ಬಡವರ ಕಲ್ಯಾಣಕ್ಕೆ ಬಳಕೆಯಾಗದೆ ಗೋಖಲೆ ಅವರ ವೈಯಕ್ತಿಕ ಖರ್ಚಿಗೆ ಬಳಕೆಯಾಗಿದೆ ಎಂದು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿಯೊಬ್ಬರು ದೂರಿದ್ದರು.

ಆದರೆ ರಾಜಕೀಯ ದ್ವೇಷದ ಕಾರಣಕ್ಕೆ ತನ್ನ ವಿರುದ್ಧ ದೂರು ನೀಡಲಾಗಿದೆ. ಜೈಲಿನಲ್ಲಿಡಲು ಸರ್ಕಾರ ಬಯಸಿದ್ದರಿಂದ ಪ್ರಕರಣದಲ್ಲಿ ತನ್ನನ್ನು ಬಂಧಿಸಲಾಗಿದೆ ಎಂದು ಗೋಖಲೆ ಅಳಲು ತೋಡಿಕೊಂಡಿದ್ದರು.