ದೆಹಲಿ ವಕೀಲರ ಸಂಘಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸಲು ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ದೆಹಲಿ ವಕೀಲರ ಪರಿಷತ್ ಹಾಗೂ ದೇಶದ ಎಲ್ಲಾ ವಕೀಲರ ಸಂಘಗಳು ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ [ಶೋಭಾ ಗುಪ್ತಾ ಮತ್ತಿತರರು ಹಾಗೂ ದೆಹಲಿ ವಕೀಲರ ಸಂಘ ಇನ್ನಿತರರ ನಡುವಣ ಪ್ರಕರಣ].
ಸೆಪ್ಟೆಂಬರ್ 25 ರಂದು ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿದೆ.
ವಕೀಲರ ಸಂಘಗಳ ಚುನಾವಣಾ ಪ್ರಚಾರ ಈಗಾಗಲೇ ನಡೆಯುತ್ತಿರುವುದರಿಂದ ಶೀಘ್ರವೇ ವಿಚಾರಣೆ ನಡೆಸುವಂತೆ ಕಕ್ಷಿದಾರರೊಬ್ಬರ ಪರ ವಕೀಲರು ಕೇಳಿದರೂ ನ್ಯಾಯಾಲಯ ಅದಕ್ಕೆ ಸಮ್ಮತಿಸಲಿಲ್ಲ. ಬದಲಿಗೆ ಚುನಾವಣೆಗಳಿಗೆ ಹಣ ಖರ್ಚು ಮಾಡುವುದನ್ನು ನಿಲ್ಲಿಸುವಂತೆ ಸಂಘಗಳ ಕಿವಿಹಿಂಡಿತು. "ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಸದಸ್ಯರು ಮತ ಚಲಾಯಿಸಲಿ ಬಿಡಿ" ಎಂದಿತು.
ದೆಹಲಿಯ ಎಲ್ಲಾ ಜಿಲ್ಲಾ ವಕೀಲರ ಸಂಘಗಳಲ್ಲಿ ಮತ್ತು ದೆಹಲಿ ಹೈಕೋರ್ಟ್ ವಕೀಲರ ಸಂಘದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವಂತೆ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಮೊದಲ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡದೆ ಪ್ರಕರಣವನ್ನು ನವೆಂಬರ್ 27 ಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಜಿಲ್ಲಾ ವಕೀಲರ ಸಂಘಗಳಲ್ಲಿನ ಮೀಸಲಾತಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣವನ್ನೂ ಒಟ್ಟಿಗೆ ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಾಲಯ ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿತು.
ದೆಹಲಿ ವಕೀಲರ ಪರಿಷತ್ತು ಮತ್ತು ರಾಷ್ಟ್ರ ರಾಜಧಾನಿಯ ಎಲ್ಲಾ ವಕೀಲರ ಸಂಘಗಳಿಗೆ ಈ ವರ್ಷ ಅಕ್ಟೋಬರ್ 19 ರಂದು ಚುನಾವಣೆ ನಡೆಯಲಿದೆ.
ಯಾವುದೇ ಅಭ್ಯರ್ಥಿಯು ಏಕಕಾಲದಲ್ಲಿ ಎರಡು ಹುದ್ದೆಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ದೆಹಲಿ ಹೈಕೋರ್ಟ್ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತಡೆ ನೀಡಿತ್ತು.