Justice Dipankar Datta 
ಸುದ್ದಿಗಳು

ಪಂಚತಾರಾ ಆತಿಥ್ಯ ಒದಗಿಸಲು ನಾಲ್ಸಾ ಬಳಿ ಹಣವಿದೆ, ಬಡ ದಾವೆದಾರರಿಗೆ ನೀಡಲು ಇಲ್ಲ: ನ್ಯಾ. ದತ್ತಾ ಬೇಸರ

"ನಮಗೆ ಪಂಚತಾರಾ ಹೋಟೆಲ್‌ಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಈ ಉದ್ದೇಶಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ?" ಎಂದು ನ್ಯಾ. ದತ್ತಾ ಖಾರವಾಗಿ ಪ್ರಶ್ನಿಸಿದರು.

Bar & Bench

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ- ನಾಲ್ಸಾ) ಆಯೋಜಿಸುವ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ನ್ಯಾಯಾಧೀಶರಿಗೆ ಪಂಚತಾರಾ ಸೌಕರ್ಯ ಒದಗಿಸಲಾಗುತ್ತದೆ. ಆದರೆ ಅಂತಹ ಸಂಸ್ಥೆ ಸ್ಥಾಪಿತವಾಗಿರುವುದು ಸಮಾಜದಂಚಿನಲ್ಲಿರುವ ಬಡಜನರಿಗೆ ಉಚಿತ ಕಾನೂನು ಒದಗಿಸಲೆಂದು ಎಂಬುದಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಂಕರ್‌ ದತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಎ ಕೆ ಸೇನ್‌ ಸ್ಮಾರಕ ಉಪನ್ಯಾಸ ಕಾರ್ಯಕ್ರಮದ ಸಂವಾದದ ವೇಳೆ ಮಾತನಾಡಿದ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲು ಬಯಸಿದ ಬಡ ದಾವೆದಾರನ ವಸತಿ, ಪ್ರಯಾಣ ವೆಚ್ಚ ಭರಿಸಲು ತಮ್ಮ ಬಳಿ ಹಣ ಇಲ್ಲ ಎಂದು ಕಾನೂನು ಸೇವಾ ಸಂಸ್ಥೆಗಳು ಹೇಳಿದ್ದನ್ನು ನೆನೆದರು.

ನ್ಯಾ. ದತ್ತಾ ಅವರ ಮಾತುಗಳ ಪ್ರಮುಖಾಂಶಗಳು

  • ಕಾನೂನು ಸೇವಾ ಸಂಸ್ಥೆಗಳು ಸಮಾಜದಂಚಿನಲ್ಲಿರುವವರಿಗೆ ಸಮಾನತೆ ತರುವುದಕ್ಕಾಗಿ ಕಾನೂನು ಸೇವೆ ಒದಗಿಸಬೇಕು. ಅವು ತಮ್ಮ ನೈಜ ಉದ್ದೇಶ ಅರಿಯದಿದ್ದರೆ ಅದು ಮರೀಚಿಕೆಯಾಗುತ್ತದೆ.

  • ನನಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ನಾಲ್ಸಾ, ಸುಪ್ರೀಂ ಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರದ ಬಳಿ ಹಣ ಇಲ್ಲ ಎಂದು ನನಗೆ ತಿಳಿಸಲಾಗಿತ್ತು.

  • ಆದರೆ ನಾಲ್ಸಾ ಸಮ್ಮೇಳನಗಳಲ್ಲಿ ಬೇರೆಯದೇ ಚಿತ್ರಣ ಇರುತ್ತದೆ. ಅಂತಹ ಸಮ್ಮೇಳನಗಳಿಗೆ ಆಹ್ವಾನಿತರಾದ ನ್ಯಾಯಾಧೀಶರಿಗೆ ಪಂಚತಾರಾ ಹೋಟೆಲ್‌ಗಳಲ್ಲಿ ಆತಿಥ್ಯ ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ ಕಾನೂನು ಸೇವಾ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ?

  • ಕಾನೂನು ಸೇವೆಗೆ ಸಂಬಂಧಿಸಿದ ಆಡಳಿತದಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕಾದರೆ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿಯನ್ನು ಕಾನೂನು ಸೇವಾ ಸಂಸ್ಥೆಗೆ ನೇಮಿಸದೆ ಸಾಕಷ್ಟು ಅಧಿಕಾರಾವಧಿ ಇರುವ ನ್ಯಾಯಮೂರ್ತಿಯನ್ನು ನೇಮಿಸಬೇಕು.

  • ಅತಿ ಹಿರಿಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದರೆ ಅವರು ಪದೋನ್ನತಿ ಪಡೆದು ಹೋಗುತ್ತಲೇ ಇರುತ್ತಾರೆ. ಅಧಿಕಾರ ವಹಿಸಿಕೊಂಡ ಬಳಿಕ ಕನಿಷ್ಠ 3 ವರ್ಷಗಳವರೆಗೆ ಕಾರ್ಯ ನಿರ್ವಹಿಸುವವರ ಅಗತ್ಯವಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ,  ಹಿರಿಯ ವಕೀಲರಾದ ಮಹೇಶ್ ಜೇಠ್ಮಲಾನಿ ಹಾಗೂ ಸಂಜೀವ್ ಸೇನ್ ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದರು. ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಅರ್ಘ್ಯ ಸೆಂಗುಪ್ತಾ ಅವರು ಗೋಷ್ಠಿಯನ್ನು ನಡೆಸಿಕೊಟ್ಟರು.