Panelists: Supreme Court justices Surya Kant, PS Narasimha, Sanjay Karol and KV Vishwanathan 
ಸುದ್ದಿಗಳು

ಹವಾಮಾನ ವೈಪರೀತ್ಯ ತಡೆಯಲು ನೀತಿ ಆಯೋಗದಂಥ ಶಾಶ್ವತ ಸಂಸ್ಥೆಯ ಅಗತ್ಯವಿದೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅಭಿಮತ

"ಜನರು ಆಂತರ್ಯದಲ್ಲಿ ಬದಲಾಗದೆ ಕೇವಲ ಕಾನೂನು ಜಾರಿಯಿಂದ ಉಪಯೋಗವಾಗುವುದಿಲ್ಲ. ಹಸಿರು ನ್ಯಾಯಮಂಡಳಿಗೆ ಜನ ಅರ್ಜಿಗಳನ್ನು ಸಲ್ಲಿಸುವುದು ನಿಲ್ಲುವುದಿಲ್ಲ" ಎಂದು ನ್ಯಾ. ಪಿ ಎಸ್ ನರಸಿಂಹ ನಿಷ್ಠುರ ಶಬ್ದಗಳಲ್ಲಿ ವಿವರಿಸಿದರು.

Bar & Bench

ಭವಿಷ್ಯದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿರುವ ಮೂವರು ನ್ಯಾಯಮೂರ್ತಿಗಳೂ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ಹಾಲಿ ಸೇವೆಯಲ್ಲಿರುವ ನಾಲ್ವರು ನ್ಯಾಯಮೂರ್ತಿಗಳು ಹವಾಮಾನ ವೈಪರೀತ್ಯ ಸಮಸ್ಯೆಯ ಬಗ್ಗೆ ಗಂಭೀರವಾಗಿ ಬೆಳಕು ಚೆಲ್ಲಿದ್ದು ಅದನ್ನು ಎದುರಿಸಲು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಕೀಲ ಜತಿಂದರ್‌ ಚೀಮಾ ಅವರ 'ಕ್ಲೈಮೇಟ್‌ ಚೇಂಜ್‌: ದ ಪಾಲಿಸಿ, ಲಾ ಅಂಡ್‌ ಪ್ರಾಕ್ಟೀಸ್‌' (ಹವಾಮಾನ ವೈಪರೀತ್ಯ: ನೀತಿ, ಕಾನೂನು ಮತ್ತು ವಕೀಲಿಕೆ) ಕೃತಿ ಬಿಡುಗಡೆ ಸಮಾರಂಭದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಪಿ.ಎಸ್.ನರಸಿಂಹ, ಸಂಜಯ್ ಕರೋಲ್ ಹಾಗೂ ಕೆ.ವಿ.ವಿಶ್ವನಾಥನ್ ಅವರು ತಮ್ಮ ಒಳನೋಟಗಳನ್ನು ಹಂಚಿಕೊಂಡರು.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವಂತಹ ಕಾನೂನುಗಳು ಸಾಕಾಗುವುದಿಲ್ಲ ಎಂದು ನ್ಯಾಯಮೂರ್ತಿ ವಿಶ್ವನಾಥನ್ ಹೇಳಿದರು.

ದೇಶಕ್ಕೆ ಹವಾಮಾನ ಆಯೋಗದ ಅವಶ್ಯಕತೆಯಿದ್ದು, ಅದು ನೀತಿ ಆಯೋಗದಂತಹ ಶಾಶ್ವತ ಸಂಸ್ಥೆಯಾಗಿರಬೇಕು. ಇದರಿಂದಾಗಿ ಎಲ್ಲಾ ಕೋನಗಳಿಂದ ಸಮಸ್ಯೆಗಳನ್ನು ಪರಿಹರಿಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಅಭಿವೃದ್ಧಿ ಹೊಂದಿದ ದೇಶಗಳ ಪರಿಸರ ನಾಶ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ ಎಂದು ನ್ಯಾಯಮೂರ್ತಿ ಕಾಂತ್ ಗಮನಸೆಳೆದರು.

"ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಚ್ಚಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರಫ್ತು ಮಾಡುತ್ತವೆ. ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಪರಿಸರ ಹಾನಿಯನ್ನು ತಡೆಗಟ್ಟಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿವೆ" ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಶಾಸಕಾಂಗ ಹವಾಮಾನ ಬದಲಾವಣೆ ಎದುರಿಸಲು ಕ್ರಮ ಕೈಗೊಳ್ಳುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ನ್ಯಾ. ಕರೋಲ್‌ ಮಾತನಾಡಿ ರಸಗೊಬ್ಬರಗಳ ಅತಿಯಾದ ಬಳಕೆ ಮತ್ತು ಅತಿಯಾದ ಅಂತರ್ಜಲ ಬಳಕೆ ಹವಾಮಾನ ಬದಲಾವಣೆಯನ್ನು ತೀವ್ರಗೊಳಿಸಿದ್ದು ಕೃಷಿ ಮೇಲೆ ಪರಿಣಾಮ ಬೀರಿದೆ ಎಂದರು.

ಗಂಗಾನದಿಯನ್ನು ಸ್ವಚ್ಛಗೊಳಿಸಲು ಸರ್ಕಾರಗಳು ಸಾಕಷ್ಟು ಹಣ ಖರ್ಚು ಮಾಡಿದ್ದು, ಈಗ ಪರಿಸ್ಥಿತಿ ಏನಾಗಿದೆ ಎಂಬುದು ನಮಗೆ ತಿಳಿದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಅಭಿಪ್ರಾಯಗಳಿಗೆ ಪೂರಕವಾಗಿ ಮಾತನಾಡಿದ ನ್ಯಾ. ನರಸಿಂಹ ಅವರು "ಜನರು ತಮ್ಮಷ್ಟಕ್ಕೆ ಬದಲಾಗದೆ ಕೇವಲ ಕಾನೂನು ಜಾರಿಯಿಂದ ಉಪಯೋಗವಾಗುವುದಿಲ್ಲ. ಜನ ಹಸಿರು ನ್ಯಾಯಮಂಡಳಿಗೆ ಅರ್ಜಿಗಳನ್ನು ಸಲ್ಲಿಸುತ್ತಲೇ ಇರುತ್ತಾರೆ” ನಿಷ್ಠುರ ಶಬ್ದಗಳಲ್ಲಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೃತಿಕಾರ ಚೀಮಾ ಮಾತನಾಡಿದರು. ಹಾಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.