ಸುದ್ದಿಗಳು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಕನಿಷ್ಠ 7 ವರ್ಷ ಅಧಿಕಾರಾವಧಿ ಅಗತ್ಯ: ವಿದಾಯ ಭಾಷಣದಲ್ಲಿ ನ್ಯಾ. ನಾಗೇಶ್ವರ ರಾವ್

ನ್ಯಾಯಾಲಯಕ್ಕೆ ಹೊಂದಿಕೊಳ್ಳುವ ಹೊತ್ತಿಗೆ ನ್ಯಾಯಮೂರ್ತಿಗಳು ನಿವೃತ್ತರಾಗಿರುತ್ತಾರೆ ಎಂದು ಶುಕ್ರವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ತಿಳಿಸಿದರು.

Bar & Bench

ಜಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸೇವಾವಧಿಯನ್ನು ಹೆಚ್ಚಿಸಬೇಕಾದ ಅಗತ್ಯವನ್ನು ನ್ಯಾ. ಎಲ್‌ ನಾಗೇಶ್ವರ ರಾವ್‌ ಅವರು ಶುಕ್ರವಾರ ಪ್ರತಿಪಾದಿಸಿದರು. ನಿವೃತ್ತಿಯ ಹೊಸ್ತಿಲಲ್ಲಿರುವ ಅವರಿಗೆ ಏರ್ಪಡಿಸಲಾಗಿದ್ದ ವಿದಾಯ ಸಮಾರಂಭದ ವೇಳೆ ಅವರು ಮಾತನಾಡಿದರು.

“ಪ್ರಸಕ್ತ ಸೇವಾವಧಿಗಿಂತಲೂ ಹೆಚ್ಚಿನ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ನೀಡಬೇಕು," ಎಂದ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಈಗಿರುವ 65 ವರ್ಷದ ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡುವುದರ ಪರವಾಗಿ ಮಾತನಾಡಿದರು.

“ಹೈಕೋರ್ಟ್‌ಗಳಿಂದ ಇಲ್ಲಿಗೆ (ಸುಪ್ರೀಂ ಕೋರ್ಟ್‌ಗೆ) ಬರುವ ನ್ಯಾಯಮೂರ್ತಿಗಳು 4 ರಿಂದ 5 ವರ್ಷ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ. ಸುಪ್ರೀಂ ಕೋರ್ಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡಿದ ನ್ಯಾಯಮೂರ್ತಿಗಳಿಗೆ ಅದನ್ನು ಅರ್ಥ ಮಾಡಿಕೊಳ್ಳಲು 2 ವರ್ಷ ಹಿಡಿಯುತ್ತದೆ. ಅಷ್ಟರಲ್ಲಾಗಲೇ ನಿವೃತ್ತರಾಗಿರುತ್ತೀರಿ. ಇದರಿಂದ ಕಾನೂನಿನ ಯಾನಕ್ಕೆ ಕೊಡುಗೆ ನೀಡಲು ಕಡಿಮೆ ಸಮಯ ನೀಡಿದಂತಾಗುತ್ತದೆ. ನನ್ನ ಸಲಹೆ ಏನೆಂದರೆ ಸುಪ್ರೀಂ ಕೋರ್ಟ್‌ಗೆ ಬರುವ ನ್ಯಾಯಮೂರ್ತಿಗಳಿಗೆ ಹತ್ತು ವರ್ಷವಲ್ಲವಾದರೂ ಕನಿಷ್ಠ 7 ರಿಂದ 8 ವರ್ಷಗಳು ಅಧಿಕಾರಾವಧಿ ಇರಬೇಕು. ನಾವು ನ್ಯಾಯಾಲಯಕ್ಕೆ ಹೊಂದಿಕೊಳ್ಳುವ ಹೊತ್ತಿಗೆ ಅಲ್ಲಿಂದ ನಿರ್ಗಮಿಸಿರುತ್ತೇವೆ” ಎಂದು ಅವರು ಹೇಳಿದರು.

ಚಲನಚಿತ್ರಗಳಲ್ಲಿ ತಮ್ಮ ನಟನೆಯ ಬಗ್ಗೆ ಪ್ರತಿಕ್ರಿಯಿಸಿದ ನ್ಯಾ. ರಾವ್‌ “ನಾನು ಕಾಲೇಜಿನಲ್ಲಿ ಓದುವಾಗ ರಂಗಭೂಮಿಯಲ್ಲಿ ಸಕ್ರಿಯನಾಗಿದ್ದೆ. ನನ್ನ ಸೋದರ ಸಂಬಂಧಿಯೊಬ್ಬರು ನಿರ್ದೇಶಕರಾಗಿದ್ದರು. ಆಗ ಸಿನಿಮಾವೊಂದರಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದೆ. ನ್ಯಾಯಾಲಯದಲ್ಲಿ ವಕೀಲರು ಮತ್ತು ನ್ಯಾಯಾಧೀಶರು ನಟಿಸುತ್ತಾರೆ. ಕಾವೇರಿದಾಗ ವಕೀಲರ ನಡುವೆ ಒಪ್ಪಂದ ಮೂಡಿಸಲು ಯತ್ನಿಸುತ್ತೇವೆ. ನಟನೆ ವೃತ್ತಿಯ ಒಂದು ಭಾಗ” ಎಂದು ಮಾರ್ಮಿಕವಾಗಿ ನುಡಿದರು.

ನ್ಯಾ. ನಾಗೇಶ್ವರ ರಾವ್‌ ಅವರು ಜೂನ್‌ 7, 2022ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ. ಆದರೆ, ಆಗ ಸುಪ್ರೀಂ ಕೋರ್ಟ್‌ಗೆ ಬೇಸಿಗೆಯ ರಜೆ ಇರಲಿದೆ. ಹೀಗಾಗಿ, ಶುಕ್ತವಾರವು ನಾಗೇಶ್ವರ ರಾವ್ ಅವರ ಕೊನೆಯ ಕೆಲಸದ ದಿನವಾಗಿತ್ತು. ಇದೇ ಹಿನ್ನೆಲೆಯಲ್ಲಿ ಅವರಿಗೆ ವಿದಾಯ ಸಮಾರಂಭವನ್ನು ಆಯೋಜಿಸಲಾಗಿತ್ತು.