ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ 
ಸುದ್ದಿಗಳು

[ಸಂವಿಧಾನದ 370ನೇ ವಿಧಿ ರದ್ದತಿ] ಸುಪ್ರೀಂ ತೀರ್ಪು ಒಕ್ಕೂಟ ವ್ಯವಸ್ಥೆ ವಿಚಾರವಾಗಿ ಮಾತನಾಡಿಲ್ಲ: ನ್ಯಾ. ರವೀಂದ್ರ ಭಟ್

ಹೈದರಾಬಾದಿನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ನ್ಯಾಯಾಲಯಗಳ ಪರಿಚಯಾತ್ಮಕ ಅಧಿವೇಶನ ಮತ್ತು ಸಂವಿಧಾನ ಸಮ್ಮೇಳನದಲ್ಲಿ ನ್ಯಾ. ಭಟ್‌ ಮಾತನಾಡಿದರು.

Bar & Bench

ಸಂವಿಧಾನದ 370ನೇ ವಿಧಿ ರದ್ದತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ವಿಚಾರವನ್ನು ಪರಿಹರಿಸಲಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಹೇಳಿದ್ದಾರೆ.

ಹೈದರಾಬಾದಿನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (ಎನ್‌ಎಎಲ್‌ಎಸ್‌ಆರ್‌ - ನಲ್ಸಾರ್) ಕಾನೂನು ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ನ್ಯಾಯಾಲಯಗಳ ಪರಿಚಯಾತ್ಮಕ ಅಧಿವೇಶನ ಮತ್ತು ಸಂವಿಧಾನ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ಪ್ರಮುಖ ತೀರ್ಪುಗಳ ಬಗ್ಗೆ ಚರ್ಚಿಸುತ್ತಾ ಅವರು ಈ ವಿಚಾರ ತಿಳಿಸಿದರು.

ದೀರ್ಘಕಾಲೀನ ಪರಿಣಾಮ ಬೀರುವ ಪ್ರಮುಖ ತೀರ್ಪುಗಳಲ್ಲಿ 370ನೇ ವಿಧಿ ರದ್ದತಿ ಎತ್ತಿಹಿಡಿದದ್ದೂ ಒಂದು. ನ್ಯಾಯಾಲಯ ಮೂರು ತೀರ್ಪುಗಳ ಮೂಲಕ ಒಕ್ಕೊರಲಿನಿಂದ ಮಾತನಾಡಿತು. ಆದರೆ ಇದು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ವಿಚಾರದ ಕುರಿತು ಉತ್ತರಿಸಿಲ್ಲ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ 2023ರ ಡಿಸೆಂಬರ್‌ನಲ್ಲಿ ಎತ್ತಿಹಿಡಿದಿತ್ತು. ಆದರೆ ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಿಜಿಸಿದ್ದ ಕಾನೂನಿನ ಸಿಂಧುತ್ವವನ್ನು ನಿರ್ಧರಿಸಲು ನಿರಾಕರಿಸಿತ್ತು.

ಬದಲಿಗೆ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ನಿರ್ಧಾರವು ತಾತ್ಕಾಲಿಕವಾಗಿದ್ದು ಶೀಘ್ರದಲ್ಲಿಯೇ ಅದಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿಸಲಾಗುವುದು ಎನ್ನುವ ಸಾಲಿಸಿಟರ್‌ ಜನರಲ್‌ ಅವರ ಭರವಸೆಯನ್ನು ಒಪ್ಪಿಕೊಂಡಿತ್ತು.

ನೋಟು ಅಮಾನ್ಯೀಕರಣ, ಚುನಾವಣಾ ಬಾಂಡ್‌ ಹಾಗೂ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪುಗಳ ಬಗ್ಗೆಯೂ ಅವರು ಮಾತನಾಡಿದರು.

ನ್ಯಾಯಮೂರ್ತಿ ಭಟ್ ಅವರು ಇಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಇತರ ಪ್ರಮುಖ ತೀರ್ಪುಗಳಲ್ಲಿ ನೋಟು ಅಮಾನ್ಯೀಕರಣ, ಚುನಾವಣಾ ಬಾಂಡ್‌ ಹಾಗೂ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಹೊರಡಿಸಿದ ಮಾರ್ಗಸೂಚಿಗಳು ಸೇರಿವೆ.

"ದೀರ್ಘಕಾಲದಿಂದ ಅಮೂಲ್ಯವಾದವೆಂದು ಪರಿಗಣಿತವಾದ ನಮ್ಮ ಮಾನದಂಡಗಳನ್ನು ಪರಿಶೀಲಿಸುವ ಮತ್ತು ಮರುಪರಿಶೀಲಿಸುವ ಈ ಪ್ರವೃತ್ತಿ ನಿರಾಶಾದಾಯಕವಲ್ಲ, ಆದರೆ 21ನೇ ಶತಮಾನದಲ್ಲಿ ಸಂವಿಧಾನವನ್ನು ಸ್ಪಂದನಶೀಲ, ದಕ್ಷ ಹಾಗೂ ಪ್ರಸ್ತುತಗೊಳಿಸಲು ಮಾಡಬೇಕಾದ ಬದಲಾವಣೆಗಳನ್ನು ನ್ಯಾಯಾಲಯ ಪರಿಗಣಿಸಬೇಕು" ಎಂದು ಅವರು ಅಭಿಪ್ರಾಯಪಟ್ಟರು.

ನೆರೆಯ ದೇಶಗಳ ಇತರ ನ್ಯಾಯಾಲಯಗಳಲ್ಲಿಯೂ ಇದೇ ರೀತಿಯ ನಿದರ್ಶನಗಳನ್ನು ಕಾಣಬಹುದು, ಸಾಂವಿಧಾನಿಕ ಮಾನದಂಡಗಳಿಗೆ ವಿರುದ್ಧವಾದ ಕಾಯಿದೆಗಳನ್ನು ಪರಿಶೀಲಿಸಲು ಆಗಾಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ, ಅವು ಪ್ರಸ್ತುತ ಕಾಲದ ಮಾನದಂಡಗಳಿಗೆ ವಿರುದ್ಧವಾಗಿವೆಯೇ ಎಂದು ನೋಡಲು ಹೀಗೆ ಮಾಡಲಾಗುತ್ತದೆ ಎಂದರು.

ಸುಪ್ರಿಯಾ ಚಕ್ರವರ್ತಿ ಮತ್ತಿತರರು ಹಾಗೂ ಭಾರತ ಒಕ್ಕೂಟ ಪ್ರಕರಣದಲ್ಲಿ ಸಲಿಂಗ ಜೋಡಿಗಳ ಮದುವೆ ಹಕ್ಕನ್ನು ಮಾನ್ಯ ಮಾಡಲು ಭಾರತೀಯ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಪೀಠದ ಭಾಗವಾಗಿರುವುದರಿಂದ ತಾನು ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

"ಕೃತಕ ಬುದ್ಧಿಮತ್ತೆ ಎಂಬುದು ವ್ಯಕ್ತಿತ್ವ, ಸೃಜನಶೀಲತೆ, ದತ್ತಾಂಶ ಆಧಾರಿತ ನೀತಿ ನಿರೂಪಣೆ, ಗೌಪ್ಯತೆ ಮತ್ತು ಸಾರ್ವಜನಿಕ ಅಭಿಪ್ರಾಯದ ಬಗ್ಗೆ ಹಲವಾರು ಸಾಂಪ್ರದಾಯಿಕ ಕಲ್ಪನೆಗಳಿಗೆ ಸವಾಲು ಹಾಕುತ್ತದೆ. ಸಾಮಾಜಿಕ ಬದಲಾವಣೆಯನ್ನು ಆಳವಾಗಿ ನಿರ್ದೇಶಿಸುತ್ತಿರುವ ಈ ಸವಾಲುಗಳನ್ನು ಎದುರಿಸಲು ನಾವೆಲ್ಲರೂ ಒಟ್ಟಾಗಿ ಮಾನದಂಡಗಳನ್ನು ಮರುಹೊಂದಿಸಲು ಇದು ಸಕಾಲ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇಪಾಳ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಪನಾ ಮಲ್ಲಾ ಹಾಗೂ ಪಾಕಿಸ್ತಾನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೈಯದ್ ಮನ್ಸೂರ್ ಅಲಿ ಶಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.