BJP, Supreme court 
ಸುದ್ದಿಗಳು

ಕಮಲವನ್ನು ಬಿಜೆಪಿಯ ಚಿಹ್ನೆಯಾಗಿ ಬಳಸದಂತೆ ನಿರ್ಬಂಧ ಕೋರಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌

ಇದೇ ರೀತಿ ಕಮಲದ ಹೂವನ್ನು ಬಿಜೆಪಿ ಪಕ್ಷದ ಚಿಹ್ನೆಯಾಗಿ ನೀಡಿರುವುದನ್ನು ರದ್ದುಪಡಿಸಲು ಇಸಿಐಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿತ್ತು.

Bar & Bench

ಕಮಲವನ್ನು ಪಕ್ಷದ ಚಿಹ್ನೆಯಾಗಿ ಬಳಸದಂತೆ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಪಿ ಬಿ ವರಾಳೆ ಅವರ ವಿಭಾಗೀಯ ಪೀಠ ಹೇಳಿದೆ.

“ನಿಮಗೆ ಹೆಸರು ಮತ್ತು ಪ್ರಚಾರ ಬೇಕು. ಈಗ ನಮ್ಮಿಂದಲೂ ನೀವು ಅದನ್ನೇ ಬಯಸುತ್ತಿದ್ದೀರಿ. ಅರ್ಜಿಯನ್ನೊಮ್ಮೆ ನೋಡಿ, ನೀವು ಕೋರಿರುವ ಪರಿಹಾರ ಏನು?” ಎಂದು ಅರ್ಜಿದಾರರನ್ನು ಪೀಠ ಪ್ರಶ್ನಿಸಿತು. ಅಂತಿಮವಾಗಿ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತು.

ಅರ್ಜಿದಾರ ಜಯಂತ್‌ ವಿಪತ್‌ ಅವರು ಬಿಜೆಪಿಯು ರಾಜಕೀಯ ಪಕ್ಷವಾಗಿ ಪ್ರಜಾಪ್ರತಿನಿಧಿ ಕಾಯಿದೆ ಅಡಿ ನೋಂದಾಯಿತ ಪಕ್ಷಕ್ಕೆ ದೊರೆಯುವ ಅನುಕೂಲ ಪಡೆಯಲು ಅರ್ಹವಾಗಿಲ್ಲ. ಹೀಗಾಗಿ, ಅದರ ವಿರುದ್ಧ ಪ್ರತಿಬಂಧಕಾದೇಶ ಮಾಡುವಂತೆ ಕೋರಿ 2022ರಲ್ಲಿ ಸಿವಿಲ್‌ ದಾವೆ ಹೂಡಿದ್ದರು.

ರಾಷ್ಟ್ರೀಯ ಪಕ್ಷವಾಗಿ ನೋಂದಾಯಿಸುವ ವೇಳೆ ಭಾರತೀಯ ಚುನಾವಣಾ ಆಯೋಗಕ್ಕೆ ನೀಡಿದ್ದ ಭರವಸೆಗೆ ವಿರುದ್ಧವಾಗಿ ನೀತಿಗಳನ್ನು ಅಳವಡಿಸಿಕೊಂಡು ಸೌಲಭ್ಯ ಪಡೆಯುವುದಕ್ಕೆ ಬಿಜೆಪಿಗೆ ನಿರ್ಬಂಧ ವಿಧಿಸಬೇಕು ಎಂದು ವಿಪತ್‌ ಕೋರಿದ್ದರು. ಅಲ್ಲದೇ, ಕಮಲವನ್ನು ಪಕ್ಷದ ಚಿಹ್ನೆಯಾಗಿ ಬಳಕೆ ಮಾಡಲು ನಿರ್ಬಂಧಿಸಬೇಕು ಎಂದು ಕೋರಿದ್ದರು. ತಾಂತ್ರಿಕ ಕಾರಣಗಳ ಆಧಾರದಲ್ಲಿ ದಾವೆಯನ್ನು ಅಕ್ಟೋಬರ್‌ 2023ರಲ್ಲಿ ವಜಾ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಪತ್‌ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ನ್ಯಾಯಾಲಯ ವಜಾಗೊಳಿಸಿತ್ತು. ಹೀಗಾಗಿ, ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.