Justice U U Lalit 
ಸುದ್ದಿಗಳು

ವೃತ್ತಿಪರ ಶಿಕ್ಷಣಕ್ಕೆ ಸಿಗುವ ಆದ್ಯತೆ ಪ್ರಾಥಮಿಕ ಶಿಕ್ಷಣಕ್ಕೆ ಏಕೆ ದೊರೆಯುತ್ತಿಲ್ಲ? ನ್ಯಾ. ಯು ಯು ಲಲಿತ್ ಪ್ರಶ್ನೆ

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಲಲಿತ್‌ ಅವರು ಕಲಬುರ್ಗಿಯಲ್ಲಿ ಕಾನೂನು ಸೇವಾ ಕ್ಲಿನಿಕ್‌ಗಳನ್ನು ಉದ್ಘಾಟಿಸಿ ಮಾತನಾಡಿದರು.

Bar & Bench

ಸರ್ಕಾರಗಳು ವೃತ್ತಿಪರ ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನು ಪ್ರಾಥಮಿಕ, ಪ್ರೌಢ ಶಿಕ್ಷಣಗಳಿಗೆ ಏಕೆ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ. ಯು ಯು ಲಲಿತ್‌ ಪ್ರಶ್ನಿಸಿದರು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ನಾಲ್ಸಾ) ಸಹಯೋಗದೊಂದಿಗೆ ಕಲಬುರ್ಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೆಎಸ್‌ಎಲ್‌ಎಸ್‌ಎ (ಕಾಲ್ಸಾ) ವತಿಯಿಂದ ನಗರದಲ್ಲಿ ಇಂದು ಆಯೋಜಿಸಲಾಗಿದ್ದ ʼಸುಸ್ಥಿರ ಅಭಿವೃದ್ಧಿ ಗುರಿ- 2030 ಸಾಧಿಸುವಲ್ಲಿ ಹಕ್ಕುಗಳು ಮತ್ತು ಅರ್ಹತೆಗಳ ವಾಸ್ತವೀಕರಣʼ, ʼಅಖಿಲ ಭಾರತ ಕಾನೂನು ಅರಿವು ಮತ್ತು ಪ್ರಚಾರಾಂದೋಲನʼದ ಅಂಗವಾಗಿ ಕಾನೂನು ಕಾಲೇಜುಗಳಲ್ಲಿ ಕಾನೂನು ಸೇವಾ ಕ್ಲಿನಿಕ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ವರ್ಗ, ಸ್ಥಾನಮಾನ, ಅಂತಸ್ತು ಅಥವಾ ಮಗು ಇರುವ ಹಂತದ ಭೇದವಿಲ್ಲದೆ ಅಭಿವೃದ್ಧಿಯ ಫಲ, ಶಿಕ್ಷಣದ ಉಪಯುಕ್ತತೆ ಸಮುದಾಯಕ್ಕೆ ಸಲ್ಲಬೇಕು ಎಂಬುದು ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಒಂದಾಗಿದೆ. ನಮ್ಮ ಶಿಕ್ಷಣ ಮಾದರಿ ಕೆಲವರಿಗೆ ಅದ್ಭುತವಾದ ಶಿಕ್ಷಣ ವ್ಯವಸ್ಥೆ ಮತ್ತು ಕೆಲವರಿಗೆ ನೆಪಮಾತ್ರದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಅನುವು ಮಾಡಿಕೊಡಬಾರದು. ನಮ್ಮ ಶಿಕ್ಷಣದ ಮಟ್ಟ ಸಮಾನ ರೂಪದಲ್ಲಿರಬೇಕು” ಎಂದು ಅವರು ಹೇಳಿದರು.

“ವೃತ್ತಿಪರ ಶಿಕ್ಷಣದ ವಿಚಾರಕ್ಕೆ ಬಂದಾಗ ಉದಾಹರಣೆಗೆ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಐಐಟಿ ಮುಂಚೂಣಿಯಲ್ಲಿದೆ ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಏಮ್ಸ್‌ ರೀತಿಯ ಅದ್ಭುತ ಸಂಸ್ಥೆಗಳಿವೆ. ಹಾಗೆಯೇ ವಾಸ್ತುಶಿಲ್ಪ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆಜೆ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಇದೆ. ಆದರೆ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇಂತಹ ಸಂಸ್ಥೆಗಳು ಏಕೆ ಇಲ್ಲ ಎಂಬುದು ಆತಂಕಕಾರಿ ವಿಚಾರ. ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುವುದು ಅಪಮಾನಕರ ಎಂದು ಭಾವಿಸಲಾಗುತ್ತಿದೆ ಏಕೆ? ವೃತ್ತಿಪರ ಶಿಕ್ಷಣದ ವಿಚಾರದಲ್ಲಿ ಉತ್ತಮವಾದುದನ್ನು ಮಾಡಲು ಸಾಧ್ಯವಿರುವಾಗ ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣದ ಹಂತದಲ್ಲಿ ಏಕೆ ಇಲ್ಲ? ಇಲ್ಲೇನೋ ಕಳೆದುಹೋಗಿದೆ ಎಂದು ಅನ್ನಿಸುತ್ತಿದೆ. ಇದು ಚಿಂತನಾರ್ಹ ವಿಚಾರ ” ಎಂದು ಅವರು ಅಭಿಪ್ರಾಯಪಟ್ಟರು.

“ಸುಸ್ಥಿರ ಅಭಿವೃದ್ಧಿಯ ಗುರಿಗಳಲ್ಲಿ ಒಳಗೊಳ್ಳುವಿಕೆಯ ಶಿಕ್ಷಣವೂ ಒಂದು. ಒಂದು ಕ್ಷೇತ್ರದಲ್ಲಿ ಮಾತ್ರ ಒಳಗೊಳ್ಳುವಿಕೆಗೆ ಮುಂದಾಗುವುದಲ್ಲ. ಮಗುವೊಂದು ದೈಹಿಕವಾಗಿ ಅಥವಾ ಮಾನಸಿಕವಾಗಿ ಸವಾಲುಗಳನ್ನು ಎದುರಿಸುತ್ತಿದೆ ಎಂದಿಟ್ಟುಕೊಳ್ಳಿ. ಆಟಿಸಂಗೆ ಒಳಗಾದ ಮಗು ಇದ್ದರೆ ಆ ಮಗುವಿಗೆ ಭಿನ್ನವಾದ ಒಳಗೊಳ್ಳುವಿಕೆ ವ್ಯವಸ್ಥೆ ಇರಬೇಕು. ಕಡಿಮೆ ಸವಲತ್ತುಗಳಿರುವ ಮಗುವನ್ನು ಮುಖ್ಯವಾಹಿನಿ ಶಾಲೆಗೆ ಕಳುಹಿಸಿದಾಗ ಆ ಮಗು ತನ್ನ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವ ಹಾಗೂ ಸುತ್ತಲಿನ ಸನ್ನಿವೇಶಗಳನ್ನು ಎದುರಿಸುವಂತಹ ಸಾಮರ್ಥ್ಯ ಬೆಳೆಸಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು” ಎಂದರು.

“ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಅತ್ಯುತ್ತಮ ಸಾಮರ್ಥ್ಯ ತಲುಪುವ ಹಕ್ಕಿದೆ ಎಂದು ಮೇನಕಾ ಗಾಂಧಿ ಹೇಳುತ್ತಾರೆ. ಸಮಾಜದ ಪ್ರತಿಯೊಂದು ವರ್ಗವನ್ನೂ ಸರ್ಕಾರ ಒಂದೇ ರೀತಿಯಲ್ಲಿ ನಡೆಸಿಕೊಳ್ಳಲು, ಒಂದೇ ಬಗೆಯ ಅವಕಾಶ ನೀಡಲು, ಮಗು ತನ್ನ ಸಾಮರ್ಥ್ಯದ ಗರಿಷ್ಠ ಹಂತ ತಲುಪುವಂತಹ ಒಳಗೊಳ್ಳುವಿಕೆ ವ್ಯವಸ್ಥೆ ರೂಪಿಸಲು ಸರ್ಕಾರ ಮುಂದಾಗಬೇಕು” ಎಂದು ವಿವರಿಸಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಹದಿನೇಳು ಅಂಶಗಳಿದ್ದು ಅವುಗಳಲ್ಲಿ ಎರಡನೆಯದು ಮಹಿಳೆಯರ ಸಬಲೀಕರಣ ಎಂದು ನ್ಯಾಯಮೂರ್ತಿಗಳು ತಿಳಿಸಿದರು. “ಸಮಾಜದ ಪ್ರತಿಯೊಬ್ಬರೊಂದಿಗೂ ಸ್ಪರ್ಧಿಸುವ ರೀತಿಯಲ್ಲಿ ಮಹಿಳೆಯರು ಸಬಲರಾಗಬೇಕಿದೆ. ರಾಜಸ್ತಾನದಲ್ಲಿ ಒಂದು ವರ್ಷ ತರಬೇತಿ ಪಡೆದು ಸೇವೆಗೆ ತೊಡಗಲಿದ್ದ ನ್ಯಾಯಾಧೀಶರ ಬ್ಯಾಚ್‌ ಒಂದನ್ನು ಮಾತನಾಡಿಸುವ ಅವಕಾಶ ದೊರೆಯಿತು. ಅವರೆಲ್ಲಾ ಕೆಳ ಹಂತದ ನ್ಯಾಯಾಲಯಗಳ ನ್ಯಾಯಾಧೀಶರುಗಳಾಗಿದ್ದರು. 190 ಮಂದಿ ಇದ್ದ ಬ್ಯಾಚ್‌ನಲ್ಲಿ 126 ಮಂದಿ ಮಹಿಳೆಯರಾಗಿದ್ದರು. ಇದು ನಾವು ಸಾಧಿಸುವತ್ತಿರುವ ಸಬಲೀಕರಣದ ಗುರಿಯಾಗಿದೆ” ಎಂದು ಮೆಚ್ಚುಗೆ ಸೂಚಿಸಿದರು.

ಕಾನೂನು ನೆರವು ಕುರಿತು…

ದೇಶದಲ್ಲಿ ಕಾನೂನು ನೆರವು ದೊರೆಯುತ್ತಿರುವ ರೀತಿಯ ಬಗ್ಗೆಯೂ ನಾಲ್ಸಾ ಅಧ್ಯಕ್ಷರಾದ ನ್ಯಾ. ಲಲಿತ್‌ ಮಾತನಾಡಿದರು. “ನ್ಯಾಯಾಲಯಗಳಲ್ಲಿ 100 ಕ್ರಿಮಿನಲ್‌ ಪ್ರಕರಣಗಳಿದ್ದರೆ ಅವುಗಳಲ್ಲಿ ಇಡೀ ದೇಶಾದ್ಯಂತ ಶೇ ಒಂದರಷ್ಟು ಜನ ಮಾತ್ರ ಕಾನೂನು ನೆರವು ಪಡೆದಿರುತ್ತಾರೆ. ಹಾಗಿದ್ದರೆ ಶೇ 99ರಷ್ಟು ಮಂದಿಗೆ ಕಾನೂನು ನೆರವು ಬೇಕಿಲ್ಲವೇ? ಅಥವಾ ಅವರಿಗೆ ಕಾನೂನು ನೆರವು ಪಡೆಯುವ ಇಚ್ಛೆ ಇಲ್ಲವೇ? ಇದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು- ಬಹುತೇಕ ಜನರಿಗೆ ಸಂವಿಧಾನದತ್ತವಾಗಿ ಉಚಿತವಾಗಿ ದೊರೆಯುವ ಕಾನೂನು ಅರಿವು ಇಲ್ಲದೇ ಇರುವುದು. ಎರಡನೇ ಅಪಾಯಕಾರಿ ಸಂಗತಿ ಎಂದರೆ ಅವರಿಗೆ ಕಾನೂನು ನೆರವು ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿರುವುದು. ಅವರಿಗೆ ಕಾನೂನು ನೆರವು ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿದ್ದರೆ ಆ ಬಗ್ಗೆ ನಾವು ಸಾಕಷ್ಟು ಆತ್ಮವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಇದೆ” ಎಂದು ಅವರು ತಿಳಿಸಿದರು.

“ಮಗುವಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಈ ಹಿಂದೆ ಹೇಳಿದಂತೆ ಎಲ್ಲರೂ ಉತ್ತಮ ಗುಣಮಟ್ಟದ ಕಾನೂನು ನೆರವು ಪಡೆಯಬೇಕಿದೆ.” ಎಂದ ಅವರು ಇದಕ್ಕಾಗಿ ಹಿರಿಯ ವಕೀಲರು ಸೇರಿದಂತೆ ನ್ಯಾಯವಾದಿ ವರ್ಗ ಇದನ್ನು ತಮ್ಮ ಆಯ್ಕೆಯ ಕ್ಷೇತ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. “ಬಡವರಿಗೆ ಕಾನೂನು ನೆರವು ಎಂಬುದು ಬಡ ಕಾನೂನು ನೆರವು ಎಂದಾಗಬಾರದು. ಉತ್ತಮ ಗುಣಮಟ್ಟದ, ಉತ್ತಮ ಮಾನದಂಡದ ಹಾಗೂ ಉತ್ತಮ ಹಂತದ ನೆರವು ದೊರೆಯಬೇಕು” ಎಂದರು.

“ಕಾನೂನು ನೆರವಿಗೆ ಎಸ್‌ಒಪಿ ಜಾರಿಗೆ ತರುವಂತಹ ಕಾರ್ಯಗಳಿಂದಲೇ ಏನೂ ಆಗುವುದಿಲ್ಲ. ಹಿರಿಯ ವಕೀಲರೂ ಸೇರಿದಂತೆ ನ್ಯಾಯವಾದಿ ಸಮುದಾಯ ಕಾನೂನು ನೆರವು ನೀಡುವುದನ್ನು ತಮ್ಮ ಆಯ್ಕೆಯ ಕ್ಷೇತ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ಕೆಎಸ್‌ಎಲ್‌ಎಸ್‌ಎ ಪ್ರಧಾನ ಪೋಷಕರಾದ ನ್ಯಾ. ರಿತು ರಾಜ್‌ ಅವಸ್ಥಿ ಮಾತನಾಡಿ “ದೇಶಾದ್ಯಂತ ಕಾನೂನು ಜಾಗೃತಿ ಅಭಿಯಾನ ಎಂಬುದು ನ್ಯಾ. ಲಲಿತ್‌ ಅವರ ಕನಸಿನ ಕೂಸಾಗಿದೆ. ಇದು ಕಾನೂನು ಸೇವಾ ಸಂಸ್ಥೆಗಳ ಇತಿಹಾಸದಲ್ಲಿ ಒಂದು ಮೈಲಿಗಲ್ಲು” ಎಂದು ಶ್ಲಾಘಿಸಿದರು.

“ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಸಮಾಜದ ತಳವರ್ಗಗಳಿಗೆ ನ್ಯಾಯ ಪಡೆಯುವುದು ಸವಾಲಿನ ಸಂಗತಿಯಾಗಿದೆ. ಆದ್ದರಿಂದ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಾಲ್ಸಾ ಕಾನೂನು ಜಾಗೃತಿಯ ಅಭಿಯಾನದೊಂದಿಗೆ ಹೊರಟಿದೆ. ಕರ್ನಾಟಕದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು 25 ವರ್ಷಗಳು ಸಂದಿವೆ. ಈ ನಿಟ್ಟಿನಲ್ಲಿಯೂ ಇದೊಂದು ಮಹತ್ವದ ಕಾರ್ಯಕ್ರಮ” ಎಂದು ಅವರು ತಿಳಿಸಿದರು.

ಪ್ರತಿ ಕಾನೂನು ಕಾಲೇಜುಗಳು ಐದು ಹಳ್ಳಿಗಳನ್ನು ಕಾನೂನು ನೆರವು ಪಡೆಯಲು ಪರಿಗಣಿಸಿವೆ. ಇದರೊಂದಿಗೆ ನಾಲ್ಸಾ ರೂಪಿಸಿರುವ ಕಾನೂನು ನೆರವು ಕುರಿತಾದ ಎಸ್‌ಒಪಿಯು ಕುಗ್ರಾಮಗಳು, ಬಡವರು ಹಾಗೂ ಬುಡಕಟ್ಟು ಮಂದಿಗೆ ನ್ಯಾಯ ತಲುಪಿಸಲು ನೆರವು ಒದಗಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯುವ ವಕೀಲ ವಿಘ್ನೇಶ್‌ ಶ್ರೀನಿವಾಸ್‌ ಅವರೆಕಾಳ್‌ ಅವರು ರಚಿಸಿದ ಸಾಮಾನ್ಯ ಜನರಿಗೆ ಕಾನೂನು ಅರಿವು ಮೂಡಿಸುವ ಸಚಿತ್ರ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಅಧ್ಯಕ್ಷ ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ಸ್ವಾಗತ ಭಾಷಣ ಮಾಡಿದರು. ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷ ಬಿ. ವೀರಪ್ಪ ಪ್ರಾಸ್ತವಿಕ ನುಡಿಗಳನ್ನಾಡಿದರು. ಕರ್ನಾಟಕ ಹೈಕೋರ್ಟ್‌ ಕಲಬುರ್ಗಿ ಪೀಠದ ಆಡಳಿತಾತ್ಮಕ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ವಂದನೆ ಸಲ್ಲಿಸಿದರು. ನ್ಯಾಯಮೂರ್ತಿ ಆರ್‌ ದೇವದಾಸ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ ನಾವದಗಿ, ಕಲಬುರ್ಗಿ ವಕೀಲರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ದೃಶ್ಯಾವಳಿಗಳನ್ನು ಇಲ್ಲಿ ವೀಕ್ಷಿಸಿ: