ತಾವು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವರದಿ ಮತ್ತು ಅಧಿಕೃತ ಅನುವಾದಿತ ಪ್ರತಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ನೀಡಿದ್ದ ಆದೇಶಕ್ಕೆ ಶುಕ್ರವಾರ ರಾತ್ರಿ ನಡೆದ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ.
ಹೈಕೋರ್ಟ್‌ನ ಆದೇಶ ಅಸಮರ್ಪಕ ಮತ್ತು ನ್ಯಾಯಾಂಗ ಶಿಸ್ತಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ನ್ಯಾ. ಗಂಗೋಪಾಧ್ಯಾಯ ಅವರಿಗೆ ತಿಳಿಸುವಂತೆ ನ್ಯಾಯಾಲಯ ತನ್ನ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದೆ.
"ನ್ಯಾಯಾಂಗದ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಸ್ವರೂಪದ ಆದೇಶವನ್ನು ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೀಡಬಾರದಿತ್ತು. ಈ ಮೂಲಕ ನಾವು ಸ್ವಯಂಪ್ರೇರಿತವಾಗಿ ಹೈಕೋರ್ಟ್ ನ್ಯಾಯಮೂರ್ತಿಗಳು ನೀಡಿದ ಆದೇಶವನ್ನು ತಡೆಹಿಡಿಯುತ್ತಿದ್ದೇವೆ. ಈ ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ತಿಳಿಸುವಂತೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ (ಸೆಕ್ರೆಟರಿ ಜನರಲ್) ಅವರಿಗೆ ನಿರ್ದೇಶಿಸುತ್ತಿದ್ದೇವೆ. ಇದನ್ನು ಕಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ತಕ್ಷಣವೇ ಹೈಕೋರ್ಟ್ ನ್ಯಾಯಮೂರ್ತಿ ಅವರಿಗೆ ತಿಳಿಸತಕ್ಕದ್ದು" ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಪೀಠದೆದುರು ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಂತಹ ಆದೇಶವನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಹೊರಡಿಸಬಾರದಿತ್ತು ಎಂಬುದನ್ನು ಒಪ್ಪಿಕೊಂಡರು.
ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಶಾಲಾ ನೇಮಕಾತಿ ಪ್ರಕರಣವನ್ನು ನ್ಯಾ. ಗಂಗೋಪಾಧ್ಯಾಯ ಅವರು ವಿಚಾರಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್‌ನ ಬೇರೆ ನ್ಯಾಯಮೂರ್ತಿಗಳಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರಿದ್ದ ಪೀಠ ಆದೇಶಿಸಿತ್ತು.
ನ್ಯಾ. ಗಂಗೋಪಾಧ್ಯಾಯ ಅವರು ಎಬಿಪಿ ಆನಂದ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ವಿವಾದದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿತ್ತು. ಅಭಿಷೇಕ್ ಅವರ ವಿರುದ್ಧದ ಪ್ರಕರಣದ ವಿಚಾರಣೆ ತಮ್ಮ ಮುಂದೆ ನಡೆಯುತ್ತಿರುವ ಹಂತದಲ್ಲಿಯೆ ನ್ಯಾಯಮೂರ್ತಿಗಳು ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದರು.
ಇದು ವಿವಾದದ ಸ್ವರೂಪ ಪಡೆದ ಕೆಲ ಗಂಟೆಗಳಲ್ಲಿಯೇ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ನ್ಯಾ. ಗಂಗೋಪಾಧ್ಯಾಯ ಅವರು ಸಂದರ್ಶನದ ಅಧಿಕೃತ ಪ್ರತಿಯನ್ನು ಶುಕ್ರವಾರ ಮಧ್ಯಾರಾತ್ರಿ 12:15ರೊಳಗೆ ತನಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದರು.
ಅಲ್ಲದೆ ತಾವು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಅವರಿಗೆ ತಕ್ಷಣವೇ ತಿಳಿಸುವಂತೆ ಕಲ್ಕತ್ತಾ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನ್ಯಾ. ಗಂಗೋಪಾಧ್ಯಾಯ ನಿರ್ದೇಶಿಸಿದ್ದರು. “(ಸುಪ್ರೀಂ ಕೋರ್ಟ್‌ನ) ಗೌರವಾನ್ವಿತ ನ್ಯಾಯಮೂರ್ತಿಗಳ ಮುಂದೆ ಇರುವ ಮೂಲಪ್ರತಿಯ ಎರಡು ಪ್ರತಿಗಳನ್ನು ನನಗೆ ಸಲ್ಲಿಸಬೇಕು. ನ್ಯಾಯಾಲಯ ತೀರ್ಪು ನೀಡಿರುವುದರಿಂದ ಇದು ಇನ್ನು ಈ ನ್ಯಾಯಾಲಯದ ದಾಖಲೆಯಾಗುತ್ತದೆ” ಎಂದಿದ್ದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನ್ಯಾ. ಗಂಗೋಪಾಧ್ಯಾಯ ಅವರ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ನ ವಿಶೇಷ ಪೀಠ ತಡ ರಾತ್ರಿ ವಿಚಾರಣೆ ನಡೆಸಿತು.