ಸುದ್ದಿಗಳು

ಕೇಶವಾನಂದ ಭಾರತಿ ಪ್ರಕರಣದ ತೀರ್ಪಿಗೆ ಸುವರ್ಣ ವರ್ಷ: ಜಾಲತಾಣದಲ್ಲಿ ವಿಶೇಷ ಪುಟ ಮೀಸಲಿಟ್ಟ ಸುಪ್ರೀಂ ಕೋರ್ಟ್

Bar & Bench

ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿಯೇ ಅತಿ ಮಹತ್ವದ್ದು ಎನಿಸಿದ, ಒಂದಿಲ್ಲೊಂದು ಪ್ರಕರಣಗಳಲ್ಲಿ ಆಗಾಗ್ಗೆ ಪ್ರಸ್ತಾಪವಾಗುತ್ತಲೇ ಇರುವ ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣದ ತೀರ್ಪು ಏಪ್ರಿಲ್ 24, 1973 ರಂದು ಹೊರಬಿತ್ತು. ಇದೀಗ ತೀರ್ಪಿನ ಐವತ್ತನೇ ವರ್ಷಾಚರಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸೋಮವಾರ ಪ್ರತ್ಯೇಕ ಜಾಲತಾಣ ಪುಟವೊಂದನ್ನು ಆರಂಭಿಸಿದೆ.

ಕಾನೂನು ಸಂಶೋಧನೆಗಾಗಿ ಜಗತ್ತು ಈ ವೆಬ್‌ಪುಟವನ್ನು ಬಳಸಬಹುದು. ಕೇಸ್‌ ನೋಟ್‌ಗಳು, ವಾದದ ಲಿಖಿತ ರೂಪ ಇತ್ಯಾದಿ ಮಾಹಿತಿಯನ್ನು ಇಲ್ಲಿ ಅಧ್ಯಯನ ಮಾಡಬಹುದು  ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಹೇಳಿದ್ದಾರೆ.

ಕೇಶವಾನಂದ ಭಾರತಿ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ 13 ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿತು. ಇದು ಭಾರತೀಯ ಕಾನೂನು ಇತಿಹಾಸದಲ್ಲಿ ಬಹು ವಿಸ್ತೃತವಾದ ಪೀಠ ಎನಿಸಿಕೊಂಡಿದೆ.

ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಎಸ್‌ ಎಂ ಸಿಕ್ರಿ, ನ್ಯಾಯಮೂರ್ತಿಗಳಾದ ಜೆ ಎಂ ಶೆಲತ್, (ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಅವರ ತಂದೆ) ಕೆ ಎಸ್ ಹೆಗ್ಡೆ, ಎ ಎನ್ ಗ್ರೋವರ್, ಎ ಎನ್ ರೇ, ಪಿ ಜಗನ್ಮೋಹನ್ ರೆಡ್ಡಿ, ಡಿ ಜಿ ಪಾಲೇಕರ್, ಎಚ್‌ ಆರ್ ಖನ್ನಾ, ಕೆ ಕೆ ಮ್ಯಾಥ್ಯೂ, ಎಂ ಎಚ್ ಬೇಗ್, ಎಸ್‌ ಎನ್ ದ್ವಿವೇದಿ, ಬಿ ಕೆ ಮುಖರ್ಜಿ ಮತ್ತು ವೈ ವಿ ಚಂದ್ರಚೂಡ್ (ಹಾಲಿ ಸಿಜೆಐ ಡಿ ವೈ ಚಂದ್ರಚೂಡ್‌ ಅವರ ತಂದೆ) ಅವರು ಪ್ರಕರಣದ ತೀರ್ಪು ನೀಡಿದ್ದರು.

ಸಂವಿಧಾನವನ್ನು ಬದಲಾಯಿಸಲು ಸಂಸತ್ತಿಗೆ ಇರುವ ಅಧಿಕಾರದ ಬಗ್ಗೆ ನಿರ್ಣಾಯಕ ಸಾಂವಿಧಾನಿಕ ಪ್ರಶ್ನೆಗಳನ್ನು ಪ್ರಕರಣ ಎತ್ತಿತ್ತು. ವಾದ ಆಲಿಸಿ ಅಂತಿಮ ತೀರ್ಪು ನೀಡಲು ಆರು ತಿಂಗಳು ಹಿಡಿದಿತ್ತು.

ತೀರ್ಪು ಸಂವಿಧಾನದ ಮೂಲಭೂತ ರಚನೆಯ ಸಿದ್ಧಾಂತವನ್ನು ಅಸ್ತಿತ್ವಕ್ಕೆ ತಂದಿತು. ಸಂವಿಧಾನದ ನಿರ್ದಿಷ್ಟ ಮೂಲಭೂತ ಲಕ್ಷಣಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ ಹಾಗೂ ನ್ಯಾಯಿಕ ಆಡಳಿತವನ್ನು ಬದಲಿಸಲು ಸಾಧ್ಯವಿಲ್ಲ ಎಂದು ತೀರ್ಪು ಪ್ರತಿಪಾದಿಸಿತು.

ಅಲ್ಲದೆ, ನ್ಯಾಯಾಂಗ ಪರಿಶೀಲನೆಯ ಅಧಿಕಾರವು ಸಂವಿಧಾನದ ಮೂಲಭೂತ ರಚನೆಯ ಅತ್ಯಗತ್ಯ ಭಾಗವಾಗಿದೆ ಎಂದು ನ್ಯಾಯಾಲಯವು ಹೇಳಿತು. ಇದನ್ನು ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಸಂಸತ್ತಿನಿಂದ ಹಿಂತೆಗೆದುಕೊಳ್ಳಲಾಗುವುದಿಲ್ಲ ಎಂದು ಅದು ಘೋಷಿಸಿತು.

ವೆಬ್‌ಪುಟದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ತೀರ್ಪಿನ ಪ್ರತಿಗಳು ಲಭ್ಯ ಇವೆ. ಜೊತೆಗೆ, ಎಲ್ಲಾ ಹದಿಮೂರು ನ್ಯಾಯಮೂರ್ತಿಗಳ ವೈಯಕ್ತಿಕ ತೀರ್ಪುಗಳನ್ನು ಅಲ್ಲಿ ಪ್ರಸ್ತುತಪಡಿಸಲಾಗುತ್ತದೆ.

ಅರ್ಜಿದಾರರು, ಪ್ರತಿವಾದಿಗಳು ಮತ್ತು ಪ್ರಕರಣದಲ್ಲಿ ಮಧ್ಯ ಪ್ರವೇಶ ಕೋರಿದ್ದವರ ಲಿಖಿತ ವಾದಗಳು ಹೇಳಿಕೆಗಳನ್ನು ಇಲ್ಲಿ ನೋಡಬಹುದು. ಅಲ್ಲದೆ  ವಿಚಾರಣೆಯ ಅಂತಿಮ ದಿನಕ್ಕೂ ಹಿಂದಿನ ದಿನ ನ್ಯಾಯಿಕ ಲೋಕದ ದಂತಕತೆ ನಾನಿ ಪಾಲ್ಖಿವಾಲಾ ಅವರು ಮಂಡಿಸಿದ್ದ ಸಂಕ್ಷಿಪ್ತ ವಾದವನ್ನೂ ಇದು ಒಳಗೊಂಡಿದೆ.

ಹಿರಿಯ ವಕೀಲ ರಾಜೀವ್ ಧವನ್ ಮತ್ತು ವಕೀಲ ರಮೇಶ್ ಡಿ ಗರ್ಗ್ ಅವರು ಬರೆದಿರುವ ಪರಾಮರ್ಶನಾ ಮಾಹಿತಿಯೂ ವೆಬ್‌ಪುಟದಲ್ಲಿ ಲಭ್ಯ.

ವೆಬ್‌ಪುಟ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.