ಸುದ್ದಿಗಳು

370ನೇ ವಿಧಿ ರದ್ದತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಕೀಲರಿಗೆ ಬೆದರಿಕೆ ಕರೆ

370ನೇ ವಿಧಿ ರದ್ದತಿಗೆ ಮೋದಿ ಸರ್ಕಾರದಷ್ಟೇ ಹೊಣೆ ಸುಪ್ರೀಂ ಕೋರ್ಟ್‌ಗೂ ಇದೆ ಎಂಬುದಾಗಿ ಮುಜಾಹಿದ್ದೀನ್‌ನಿಂದ ಎಂದು ಹೇಳಲಾದ ಕರೆ ತಿಳಿಸಿದೆ.

Bar & Bench

ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಕಾಶ್ಮೀರ ಧ್ವಜ ಹಾರಿಸಲಾಗುವುದು ಎಂದು ಹೇಳಿ ಇಂದು ಬೆಳಗ್ಗೆ ಸುಪ್ರೀಂಕೋರ್ಟ್‌ನ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ಗಳಿಗೆ ಯಾಂತ್ರಿಕ ಬೆದರಿಕೆ ಕರೆಯೊಂದು ಬಂದಿದೆ. 370ನೇ ವಿಧಿ ರದ್ದತಿಗೆ ಮೋದಿ ಸರ್ಕಾರದಷ್ಟೇ ಹೊಣೆ ಸುಪ್ರೀಂ ಕೋರ್ಟ್‌ಗೂ ಇದೆ ಎಂಬುದಾಗಿ ಮುಜಾಹಿದ್ದೀನ್‌ ಸಂಘಟನೆಯಿಂದ ಎಂದು ಹೇಳಿಕೊಳ್ಳಲಾದ ಕರೆ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಕೂಡ ಇಂಥದ್ದೇ ಕರೆಯೊಂದು ಎಒಆರ್‌ಗಳಿಗೆ ಬಂದಿತ್ತು. ಪಂಜಾಬ್‌ನ ಹುಸೇನಿವಾಲಾ ಮೇಲ್ಸೇತುವೆ ಮೇಲೆ ಉಂಟಾದ ಪ್ರಧಾನಿ ನರೇಂದ್ರ ಮೋದಿಯವರ ರಕ್ಷಣೆಯಲ್ಲಿನ ಭದ್ರತಾ ಲೋಪಕ್ಕೆ ತಾನೇ ಕಾರಣ ಎಂದು ಹೊಣೆ ಹೊತ್ತು ಇಂಗ್ಲೆಂಡ್‌ನಿಂದ ಅನಾಮಧೇಯ ಯಾಂತ್ರಿಕ ಕರೆಯೊಂದು ಹಲವು ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ಗಳಿಗೆ ಬಂದಿತ್ತು.

ಭದ್ರತಾ ಲೋಪದ ತನಿಖೆ ನಡೆಸುವಂತೆ ಕೋರಿ ಲಾಯರ್ಸ್‌ ವಾಯ್ಸ್‌ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸದಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ಕರೆಯಲ್ಲಿ ಎಚ್ಚರಿಕೆ ನೀಡಲಾಗಿತ್ತು. 'ಸಿಖ್ಸ್‌ ಫಾರ್ ಜಸ್ಟೀಸ್‌' ಎಂಬ ಸಂಘಟನೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಳ್ಳಲಾಗಿತ್ತು.

ಎಒಆರ್‌ಗಳು ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಅರ್ಹತೆ ಪಡೆದಿರುವ ವಕೀಲರಾಗಿರುವುದರಿಂದ ಅವರ ಫೋನ್‌ ಸಂಖ್ಯೆಗಳು ಸಾರ್ವಜನಿಕವಾಗಿ ಲಭ್ಯವಿದ್ದು ಅವರಿಗೇ ಬೆದರಿಕೆ ಕರೆ ಮಾಡಲು ಈ ಅಂಶ ಕೂಡ ಒಂದು ಕಾರಣವಾಗಿರಬಹುದು.