ಸಂವಿಧಾನದ 300 ಎ ವಿಧಿಯಡಿ ಭೂ ಸ್ವಾಧೀನಪಡಿಸಿಕೊಳ್ಳುವಾಗ ಮತ್ತು ಆಸ್ತಿಯ ಮೇಲಿನ ನಾಗರಿಕರ ಹಕ್ಕನ್ನು ಕಸಿದುಕೊಳ್ಳುವಾಗ ಸರ್ಕಾರ ಅಥವಾ ಅದರ ಅಂಗಸಂಸ್ಥೆಗಳು ಪಾಲಿಸಬೇಕಾದ ಪ್ರಕ್ರಿಯಾತ್ಮಕ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಕಟಿಸಿದೆ [ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಮತ್ತಿತರರು ಹಾಗೂ ಬಿಮಲ್ ಕುಮಾರ್ ಶಾ ಇನ್ನಿತರರ ನಡುವಣ ಪ್ರಕರಣ].
ನಿಯಮಾವಳಿಗಳನ್ನು ಅನುಸರಿಸದೆ ಆಸ್ತಿ ಸ್ವಾಧೀನಪಡಿಸಿಕೊಳ್ಳುವ ಕ್ರಮ ಕಾನೂನು ಅಧಿಕಾರ ವ್ಯಾಪ್ತಿಗೆ ಹೊರತಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅರವಿಂದ ಕುಮಾರ್ ಅವರು ನೀಡಿರುವ ತೀರ್ಪು ತಿಳಿಸಿದೆ.
ಸಂವಿಧಾನದ 300 ಎ ವಿಧಿ ಮೂಲಕ ಭೂಮಾಲೀಕರಿಗೆ ಈ ಕೆಳಗಿನ ಪ್ರಕ್ರಿಯಾತ್ಮಕ ಹಕ್ಕುಗಳನ್ನು ನೀಡಲಾಗಿದೆ ಎಂದು ಅದು ಹೇಳಿದೆ:
i) ವ್ಯಕ್ತಿಯ ಆಸ್ತಿ ಸ್ವಾಧೀನ ಕುರಿತು ಆತನಿಗೆ ತಿಳಿಸುವುದು ಪ್ರಭುತ್ವದ ಕರ್ತವ್ಯ- ನೋಟಿಸ್ ಪಡೆಯುವ ಹಕ್ಕು
ii) ಸ್ವಾಧೀನ ಕುರಿತಂತೆ ವ್ಯಕ್ತಿ ಎತ್ತುವ ಆಕ್ಷೇಪಣೆಗಳನ್ನು ಆಲಿಸುವುದು ಪ್ರಭುತ್ವದ ಕರ್ತವ್ಯ - ಆಲಿಸುವ ಹಕ್ಕು;
iii) ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ವ್ಯಕ್ತಿಗೆ ತಿಳಿಸುವುದು ಪ್ರಭುತ್ವದ ಕರ್ತವ್ಯ - ತಾರ್ಕಿಕ ನಿರ್ಧಾರದ ಹಕ್ಕು;
iv) ಸಾರ್ವಜನಿಕ ಉದ್ದೇಶಕ್ಕಾಗಿ ಮಾತ್ರವೇ ಸ್ವಾಧೀನ ಕಾರ್ಯ ನಡೆಯುತ್ತಿದೆ ಎಂದು ತಿಳಿಸುವುದು ಪ್ರಭುತ್ವದ ಕರ್ತವ್ಯ
v) ಪರಿಹಾರ ಮತ್ತು ಪುನರ್ವಸತಿ ಪ್ರಭುತ್ವದ ಕರ್ತವ್ಯ - ನ್ಯಾಯಯುತ ಪರಿಹಾರದ ಹಕ್ಕು;
vi) ಸಮರ್ಥವಾಗಿ ಮತ್ತು ನಿಗದಿತ ಸಮಯದೊಳಗೆ ಸ್ವಾಧೀನ ಪ್ರಕ್ರಿಯೆ ನಡೆಸುವುದು ಪ್ರಭುತ್ವದ ಕರ್ತವ್ಯ- ಸಮರ್ಥ ನಡಾವಳಿಯ ಹಕ್ಕು
vii) ನಿಹಿತ ಅವಧಿಗೆ ಕಾರಣವಾಗುವ ಪ್ರಕ್ರಿಯೆಗಳ ಅಂತಿಮ ತೀರ್ಮಾನ- ನಿರ್ಧರಣಾತ್ಮಕ ಹಕ್ಕು
ಏಳು ತತ್ವಗಳು ಪ್ರಕ್ರಿಯಾತ್ಮಕವಾಗಿರುವುದಾದರೂ, ಖಾಸಗಿ ಆಸ್ತಿಯನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳಲು ಅನುವು ಮಾಡಿಕೊಡುವ ಕಾನೂನಿನ ಅಧಿಕಾರದ ಅವಿಭಾಜ್ಯ ಅಂಶಗಳಾಗಿವೆ. ಇವು ಈಗ ನಮ್ಮ ಆಡಳಿತಾತ್ಮಕ ಕಾನೂನು ನ್ಯಾಯಶಾಸ್ತ್ರದ ಭಾಗವಾಗುತ್ತಿವೆ ಎಂದು ಪೀಠ ವಿವರಿಸಿದೆ.
ಕೊಲ್ಕತ್ತಾ ಮಹಾನಗರ ಪಾಲಿಕೆಯನ್ನು ಒಳಗೊಂಡಿರುವ ಭೂಸ್ವಾಧೀನ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸುವಾಗ ಈ ಅವಲೋಕನಗಳು ಸುಪ್ರೀಂ ಕೋರ್ಟ್‌ನಿಂದ ಹೊರಬಿದ್ದಿವೆ.
ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಮತ್ತು ಪ್ರಕ್ರಿಯಾತ್ಮಕತೆಯು ನ್ಯಾಯಯುತವಾದ ಪರಿಹಾರದೊಂದಿಗೆ ಸ್ವಾಧೀನಪಡಿಸಿಕೊಳ್ಳುವ ಮಾನ್ಯವಾದ ಅಧಿಕಾರದೊಂದಿಗೆ ಮುಕ್ತಾಯವಾಗಿ ಬಿಡುವುದಿಲ್ಲ ಮತ್ತು ಬರಿದಾಗಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಕೋಲ್ಕತ್ತಾ ಮಹಾನಗರ ಪಾಲಿಕೆ ಕಾಯಿದೆಯ ಸೆಕ್ಷನ್ 352ರ ಅಡಿಯಲ್ಲಿ ನಾಗರಿಕ ಸಂಸ್ಥೆಯಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಅದು ಬದಿಗೆ ಸರಿಸಿತ್ತು.
ಸುಪ್ರೀಂ ಕೋರ್ಟ್ ಅಂತಿಮವಾಗಿ ಪಾಲಿಕೆಗೆ ₹ 5 ಲಕ್ಷ ದಂಡ ವಿಧಿಸಿದ್ದು ಅದನ್ನು ಪ್ರತಿವಾದಿ ಭೂಮಾಲೀಕರಿಗೆ ಪಾವತಿಸುವಂತೆ ಸೂಚಿಸಿದೆ.