Supreme Court of India, Marital Rape 
ಸುದ್ದಿಗಳು

ವೈವಾಹಿಕ ಅತ್ಯಾಚಾರ ಪ್ರಕರಣ ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ

ಪ್ರಕರಣವನ್ನು ಈ ವರ್ಷದ ಜನವರಿಯಲ್ಲಿ ನ್ಯಾಯಾಲಯ ಆಲಿಸಿತ್ತು. ಆಗ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕೆ ಎಂಬ ಕುರಿತು ತಮ್ಮ ಪ್ರತಿಕ್ರಿಯೆ ನೀಡುವಂತೆ ರಾಜ್ಯಗಳನ್ನು ತಾನು ಕೇಳಿದ್ದಾಗಿ ನ್ಯಾಯಾಲಯಕ್ಕೆ ಕೇಂದ್ರ ತಿಳಿಸಿತ್ತು.

Bar & Bench

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಬೇಕೆ ಅಥವಾ ಅತ್ಯಾಚಾರದ ಕ್ರಿಮಿನಲ್ ಅಪರಾಧಕ್ಕೆ ವಿನಾಯಿತಿಯಾಗಿ ಉಳಿಸಬೇಕೆ ಎಂಬ ಬಗ್ಗೆ ನಿರ್ಣಯಿಸಲು ಪ್ರಕರಣವನ್ನು ಆಲಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ತಿಳಿಸಿದೆ.

ಪ್ರಕರಣವನ್ನು ಈ ವರ್ಷದ ಜನವರಿಯಲ್ಲಿ ನ್ಯಾಯಾಲಯ ಆಲಿಸಿತ್ತು. ಆಗ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕೆ ಎಂಬ ಕುರಿತು ತಮ್ಮ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಗಳನ್ನು ತಾನು ಕೇಳಿರುವುದಾಗಿ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.

ಇಂದು ಬೆಳಿಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠದೆದುರು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಪ್ರಕರಣ ಪ್ರಸ್ತಾಪಿಸಿದರು.

ಪ್ರಕರಣದಲ್ಲಿ ತಮ್ಮ ಮನವಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ ಎಂದು ಇಂದಿರಾ ನ್ಯಾಯಾಲಯಕ್ಕೆ ತಿಳಿಸಿದರು.

ಆಗ ಸಿಜೆಐ ಚಂದ್ರಚೂಡ್‌ ಐಪಿಸಿ ಸೆಕ್ಷನ್ 375 (ಅತ್ಯಾಚಾರ) ವಿನಾಯಿತಿ 2ಅನ್ನು ಪ್ರಶ್ನಿಸಿರುವ ಮನವಿಗೆ ನ್ಯಾಯಾಲಯ ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ ಎಂದರು.

ಈ ನಿಯಮಾವಳಿ ತನ್ನ ಹೆಂಡತಿಯೊಂದಿಗೆ ಸಮ್ಮತಿಯಿಲ್ಲದೆ ಸಂಭೋಗದಲ್ಲಿ (ಸಾಮಾನ್ಯವಾಗಿ ವೈವಾಹಿಕ ಅತ್ಯಾಚಾರ ಎನ್ನಲಾಗುತ್ತದೆ) ತೊಡಗುವ ಪುರುಷರ ವಿರುದ್ಧ ಅತ್ಯಾಚಾರ ಆರೋಪ ಮಾಡುವಂತಿಲ್ಲ ಎನ್ನುತ್ತದೆ.

ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೊಬ್ಬ ವಕೀಲೆ ಕರುಣಾ ನಂದಿ, ವೈವಾಹಿಕ ಅತ್ಯಾಚಾರ ಪ್ರಕರಣದ ಅಂಶವು ತುಂಬಾ ಚಿಕ್ಕದಾಗಿದ್ದು ಹಿರಿಯ ವಕೀಲೆ ಇಂದಿರಾ ಅವರು ಪ್ರಸ್ತುತ ಇರುವ ಕಾನೂನಿನ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಪ್ರಕರಣವನ್ನು ಪಟ್ಟಿ ಮಾಡಲು ಒಪ್ಪಿತು.

ಹಿರಿಯ ವಕೀಲೆ ಇಂದಿರಾ ಅವರ ವಾದ (ಅದನ್ನು ಉಲ್ಲೇಖಿಸಲಾಗಿದೆ) ಅಸ್ತಿತ್ವದಲ್ಲಿರುವ ಕಾನೂನಿನ ವ್ಯಾಖ್ಯಾನಕ್ಕೆ ಸಂಬಂಧಿಸಿದ್ದಾಗಿದ್ದು ವಕೀಲೆ ಕರುಣಾ ಅವರು ವಿನಾಯಿತಿಯ ಸಾಂವಿಧಾನಿಕತೆಯ ಕುರಿತು ವಾದಿಸಲಿದ್ದಾರೆ.

ಜಾತಿ ಮತ್ತು ಲಿಂಗದ ಪಾತ್ರಗಳ ವಿಂಗಡಣೆ ಸಂದರ್ಭದಲ್ಲಿ ವೈವಾಹಿಕ ಅತ್ಯಾಚಾರದ ಕಾನೂನುಬದ್ಧತೆಯನ್ನು ಪರಿಶೀಲಿಸುವುದಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಕೂಡ ಕರುಣಾ ವಾದ ಮಂಡಿಸಲಿದ್ದಾರೆ.

ಈ ಹಿಂದೆ ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ  ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್‌ ಮತ್ತು ಸಿ ಹರಿ ಶಂಕರ್ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ಭಿನ್ನ ತೀರ್ಪು ನೀಡಿತ್ತು.

ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ನೀಡುವ ನಿಬಂಧನೆ ಅಸಾಂವಿಧಾನಿಕ ಎಂದು ತಿಳಿಸಿ ನ್ಯಾಯಮೂರ್ತಿ ಶಕ್ದೆರ್‌ ಅದನ್ನು ರದ್ದುಗೊಳಿಸಿದರೆ, ನ್ಯಾಯಮೂರ್ತಿ ಶಂಕರ್ ಅದನ್ನು ಎತ್ತಿ ಹಿಡಿದಿದ್ದರು.

ಈ ಮಧ್ಯೆ ಮಾರ್ಚ್ 22, 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯವೂ ಅತ್ಯಾಚಾರ ಎಂದು ತೀರ್ಪು ನೀಡಿತ್ತು. ಜುಲೈ 2022ರಲ್ಲಿ, ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ಆದೇಶವನ್ನು ತಡೆಹಿಡಿಯಿತಾದರೂ ಕರ್ನಾಟಕ ಸರ್ಕಾರ ಅದೇ ವರ್ಷ ಡಿಸೆಂಬರ್‌ನಲ್ಲಿ ಹೈಕೋರ್ಟ್‌ ತೀರ್ಪಿಗೆ ಬೆಂಬಲ ನೀಡಿತ್ತು.

ದೆಹಲಿ ಹೈಕೋರ್ಟ್‌ನ ಭಿನ್ನ ತೀರ್ಪನ್ನು ಪ್ರಶ್ನಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಇದಕ್ಕೆ ಸಂಬಂಧಿಸಿದ ಟಿಪ್ಪಣಿಯಲ್ಲಿ ವೈದ್ಯಕೀಯ ಗರ್ಭಪಾತ ಕಾಯಿದೆಯ ಗುರಿಯಂತೆ ಬಲವಂತದ ಗರ್ಭಾವಸ್ಥೆಯಿಂದ ಮಹಿಳೆಯರನ್ನು ರಕ್ಷಿಸಲು ವೈವಾಹಿಕ ಅತ್ಯಾಚಾರ ಕೂಡ ಅತ್ಯಾಚಾರದ ವ್ಯಾಪ್ತಿಗೆ ಬರಲಿದೆ ಎಂದು ಪರಿಗಣಿಸಬೇಕು ಎಂಬುದಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯ ತಿಳಿಸಿತ್ತು.