Supreme Court and electoral bonds
Supreme Court and electoral bonds 
ಸುದ್ದಿಗಳು

ಚುನಾವಣಾ ಬಾಂಡ್ ಯೋಜನೆ ಪ್ರಶ್ನಿಸಿದ್ದ ಅರ್ಜಿ: ಅಕ್ಟೋಬರ್ 31ರಂದು ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿದ ಸುಪ್ರೀಂ

Bar & Bench

ವಿವಾದಾತ್ಮಕ ಚುನಾವಣಾ ಬಾಂಡ್‌ ಯೋಜನೆ ಪ್ರಶ್ನಿಸುವ ಅರ್ಜಿಗಳನ್ನು ಇದೇ ತಿಂಗಳ 31ರಂದು ಅಂತಿಮ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ [ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ].

ಅಕ್ಟೋಬರ್ 31 ರಂದು ವಿಚಾರಣೆ ಮುಕ್ತಾಯಗೊಳ್ಳದಿದ್ದರೆ ನವೆಂಬರ್ 1ರಂದು ಕೂಡ ವಿಚಾರಣೆ ನಡೆಸಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಮಂಗಳವಾರ ತಿಳಿಸಿದೆ.

ಯೋಜನೆ ಪ್ರಶ್ನಿಸಿ 2017ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅದಾಗಿ  ಸುಮಾರು ಆರು ವರ್ಷಗಳ ಬಳಿಕ ಪ್ರಕರಣ ಅಂತಿಮ ವಿಚಾರಣೆಯ ಹೊಸ್ತಿಲಿನಲ್ಲಿದೆ. ಅರ್ಜಿದಾರರ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌ ವಾದ ಮಂಡಿಸಿದರು.

ಕಾಯಿದೆಗಳನ್ನು ಹಣಕಾಸು ಮಸೂದೆಯಾಗಿ ಜಾರಿಗೆ ತರುವ ಕಾನೂನಿಗೆ ಸಂಬಂಧಿಸಿದಂತೆ ತೀರ್ಪು ಹೊರಬೀಳುವವರೆಗೆ ವಿಚಾರಣೆ ಮುಂದೂಡಬೇಕೆ ಎಂದು ಸಂಕ್ಷಿಪ್ತವಾಗಿ ಚರ್ಚಿಸಿದ ಪೀಠ ಬಳಿಕ ಪ್ರಕರಣದ ಅಂತಿಮ ವಿಚಾರಣೆ ನಡೆಸಲು ನಿರ್ಧರಿಸಿತು.

ರಾಜ್ಯಸಭೆಯ ಒಪ್ಪಿಗೆಯಿಲ್ಲದೆಯೂ ಹಣಕಾಸು ಮಸೂದೆ ಅಂಗೀಕರಿಸಬಹುದಾದ್ದರಿಂದ ಚುನಾವಣಾ ಬಾಂಡ್‌ ಯೋಜನೆಯನ್ನು ಹಣಕಾಸು ಮಸೂದೆ ಮೂಲಕ ಮಂಡಿಸಲಾಗಿತ್ತು.

ಚುನಾವಣಾ ಬಾಂಡ್‌ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕಷ್ಟೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಚುನಾವಣಾ ಬಾಂಡ್‌ಗಳನ್ನು ನೀಡಲಾಗುತ್ತದೆ.