ಚಾರಿತ್ರಿಕ ನಡೆ ಎಂಬಂತೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯನ್ನು ಸರ್ವೋಚ್ಚ ನ್ಯಾಯಾಲಯ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.
ಹೈಕೋರ್ಟ್ ಕೊಲಿಜಿಯಂನ ಪಾತ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡೆಯುವ ಮಾಹಿತಿ ಹಾಗೂ ಸುಪ್ರೀಂ ಕೋರ್ಟ್ ಕೊಲಿಜಿಯಂ ಪರಿಗಣನೆಯ ಕುರಿತಾದ ವಿವರಗಳನ್ನು ಸರ್ವೋಚ್ಚ ನ್ಯಾಯಾಲಯದ ಜಾಲತಾಣ ಬಹಿರಂಗಪಡಿಸಿದೆ. ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಲೆಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
2022ರ ನವೆಂಬರ್ 9ರಿಂದ 2025ರ ಮೇ 5ರ ಅವಧಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದಿಸಿದ ಪ್ರಸ್ತಾವನೆಗಳಲ್ಲಿರುವ ಹೆಸರುಗಳು, ಹೈಕೋರ್ಟ್, ಮೂಲ - ಸೇವೆಯಿಂದ ಅಥವಾ ವಕೀಲಿಕೆಯಿಂದ ಬಂದವರೇ ಎಂಬ ವಿವರಗಳು, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ದಿನಾಂಕ, ನ್ಯಾಯ ಇಲಾಖೆ ಅಧಿಸೂಚನೆ ಹೊರಡಿಸಿದ ದಿನಾಂಕ, ನೇಮಕಾತಿ ದಿನಾಂಕ, ವಿಶೇಷ ವರ್ಗ (SC/ST/OBC/ಅಲ್ಪಸಂಖ್ಯಾತ/ಮಹಿಳೆ) ಎಂಬ ವಿವರಗಳ ಜೊತೆಗೆ ಅಭ್ಯರ್ಥಿ ಯಾವುದೇ ಹಾಲಿ ಅಥವಾ ನಿವೃತ್ತ ಹೈಕೋರ್ಟ್/ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಬಂಧಿಯೇ ಎಂಬುದನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ವಿವರಿಸಿರುವುದಾಗಿ ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮತ್ತೊಂದೆಡೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಸ್ತಿ ವಿವರಗಳನ್ನು ಕೂಡ ಸರ್ವೋಚ್ಚ ನ್ಯಾಯಾಲಯ ಬಹಿರಂಗಪಡಿಸಿದೆ. ಆಸ್ತಿ ಘೋಷಣೆ ಮಾಡಿದ ನ್ಯಾಯಮೂರ್ತಿಗಳ ಹೆಸರುಗಳನ್ನಷ್ಟೇ ಈ ಹಿಂದೆ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿತ್ತೇ ವಿನಾ ಆಸ್ತಿಯ ವಿವರವನ್ನಲ್ಲ.
[ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಕುರಿತು ಇಲ್ಲಿ ಕ್ಲಿಕ್ಕಿಸಿ]
[ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಕುರಿತು ಇಲ್ಲಿ ಓದಿ]
ನ್ಯಾಯಮೂರ್ತಿಗಳ ಆಸ್ತಿ ವಿವರ ಕುರಿತು ಇಲ್ಲಿ ಕ್ಲಿಕ್ಕಿಸಿ
[ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆ ಬಗ್ಗೆ ಇಲ್ಲಿ ಓದಿ]