Justice Madan Lokur  File Photo
ಸುದ್ದಿಗಳು

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯದ ಬಗ್ಗೆ ನ್ಯಾ. ಲೋಕೂರ್ ಬೇಸರ

ನನ್ನ ದೃಷ್ಟಿಯಲ್ಲಿ ಸುಪ್ರೀಂ ಕೋರ್ಟ್ ಪೂರ್ಣವಾಗಿ ತನ್ನ ಅಧಿಕಾರ ಚಲಾಯಿಸಲಿಲ್ಲ ಮತ್ತು ಪ್ರಕರಣದ ತನಿಖೆಯ ಮೇಲ್ವಿಚಾರಣೆ ಮಾಡದಿರಲು ಅದು ನಿರ್ಧರಿಸಿದೆ ಎಂದು ತೋರುತ್ತದೆ” ಎಂಬುದಾಗಿ ಅವರು ತಿಳಿಸಿದರು.

Bar & Bench

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರ್ವಹಿಸಿರುವ ರೀತಿ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಫ್‌ಐಆರ್‌ ದಾಖಲಿಸಿಕೊಳ್ಳಲು ದೆಹಲಿ ಪೊಲೀಸರು ವಿಳಂಬ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ಅವಕಾಶ ನೀಡಬಾರದಿತ್ತು. ತನಿಖೆ ಹಳಿತಪ್ಪದಂತೆ ಮೇಲ್ವಿಚಾರಣೆ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಸಂಘಟನೆಗಳಾದ ಅನ್‌ಹಾದ್‌ ಮತ್ತು ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್ ಮಂಗಳವಾರ ಆಯೋಜಿಸಿದ್ದ 'ಕುಸ್ತಿಪಟುಗಳ ಹೋರಾಟ: ಸಂಸ್ಥೆಗಳ ಹೊಣೆಗಾರಿಕೆ' ಎಂಬ ವಿಷಯದ ಕುರಿತ ವೆಬ್‌ನಾರ್‌ನಲ್ಲಿ ನ್ಯಾ. ಲೋಕೂರ್ ಮಾತನಾಡಿದರು.

ನ್ಯಾ. ಲೋಕೂರ್‌ ಅವರ ಪ್ರಮುಖ ಅಭಿಪ್ರಾಯಗಳು

  • ಮುಂಚಿತವಾಗಿಯೇ ಏಕೆ ಎಫ್‌ಐಆರ್‌ ದಾಖಲಿಸಲಿಲ್ಲ ಎಂದು ಸುಪ್ರೀಂ ಕೋರ್ಟ್‌ ದೆಹಲಿ ಪೊಲೀಸರನ್ನು ಎಲ್ಲಕ್ಕಿಂತ ಮೊದಲು ಕೇಳಬೇಕಿತ್ತು. ಆದರೆ ಅದನ್ನು ಸುಪ್ರೀಂ ಕೋರ್ಟ್‌ ಮಾಡಲಿಲ್ಲ.

  • ಏನೇ ಆದರೂ ಕುಸ್ತಿಪಟುಗಳು ಬೆದರಿಕೆಗೆ ತುತ್ತಾಗಿದ್ದರು ಎಂಬ ಸತ್ಯವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೇನಾದರೂ ಇದ್ದರೆ ಕುಸ್ತಿಪಟುಗಳು ಮ್ಯಾಜಿಸ್ಟ್ರೇಟ್‌ ಅಥವಾ ಹೈಕೋರ್ಟ್‌ಗೆ ಹೋಗಿ ಎಂದು ಅದು ಹೇಳಬಾರದಿತ್ತು. ತನಿಖೆ ಹಳಿ ತಪ್ಪದಂತೆ ನಾವು ಪ್ರಕರಣದ ಮೇಲ್ವಿಚಾರಣೆ  ಮಾಡಲು ಬಯಸುತ್ತೇವೆ ಎಂಬುದಾಗಿ ಅದು ಹೇಳಬೇಕಿತ್ತು.

  • ಹಿಂದೆ ಬೇರೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತನಿಖೆಯ ನಿಗಾ ವಹಿಸಿತ್ತು. ಆದರೆ ಈ ಪ್ರಕರಣದಲ್ಲಿ ಅದು ತನಿಖೆಯ ಮೇಲ್ವಿಚಾರಣೆ ಮಾಡಿಲ್ಲ.

  • ನನ್ನ ದೃಷ್ಟಿಯಲ್ಲಿ ಸುಪ್ರೀಂ ಕೋರ್ಟ್‌ ಪೂರ್ಣವಾಗಿ ತನ್ನ ಅಧಿಕಾರ ಚಲಾಯಿಸಲಿಲ್ಲ ಮತ್ತು ಪ್ರಕರಣದ ತನಿಖೆಯ ಮೇಲ್ವಿಚಾರಣೆ ಮಾಡದಿರಲು ನಿರ್ಧರಿಸಿತು. ಆದರೆ, ಅದನ್ನು ಮಾಡಬೇಕಿತ್ತು.

  • ಒಂದು ತಿಂಗಳಿನಿಂದ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದುದರಿಂದ ಪ್ರತಿಭಟನೆಗಳು ನಡೆದಿವೆ.

  • ಆರೋಪಗಳು ಗಂಭೀರವಾಗಿದ್ದು, ಸಾಕ್ಷ್ಯ ತಿರುಚಿದ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ನಿದರ್ಶನಗಳೂ ಇವೆ.

  • ಪೊಲೀಸರು ನಿಧಾನವಾಗಿ ಮುಂದುವರಿಯುತ್ತಿದ್ದಾರೆ. ಪೊಲೀಸರು ಶಾಮೀಲಾಗಿದ್ದು ಅವರಿಗೆ ಆರೋಪ  ಮತ್ತು ತನಿಖೆ ಮುಂದುವರೆಯುವುದು ಬೇಕಿಲ್ಲ.   

  • ಪೊಲೀಸರು 100 ಸಾಕ್ಷಿಗಳ ವಿಚಾರಣೆ ನಡೆಸಿದ್ದಾರೆ. 100 ಸಾಕ್ಷಿಗಳೊಂದಿಗೆ ಮಾತನಾಡುವಂಥದ್ದು ಏನಿದೆ? ಲೈಂಗಿಕ ದೌರ್ಜನ್ಯದ ಬಗ್ಗೆ ತನಿಖೆ ಮಾಡಲು ಅಲ್ಲೇನೂ ಸಾಕ್ಷಿಗಳು ಅಪಾರ ಸಂಖ್ಯೆಯಲ್ಲಿ ಇರಲಿಲ್ಲ. ಅದರಲ್ಲಿಯೂ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕ ಕುಸ್ತಿಪಟುವಿನ ಸಾಕ್ಷಿ ಇದೆ, ಪ್ರತ್ಯಕ್ಷ ಸಾಕ್ಷಿಗಳೂ ಇದ್ದಾರೆ. ಮುಚ್ಚಿದ ಬಾಗಿಲಿನ ಹಿಂದೆ ನಡೆದಿರಬಹುದಾದ ಕಿರುಕುಳದ ಬಗ್ಗೆ ಪೊಲೀಸರು ಈಗ ವೀಡಿಯೊ ಸಾಕ್ಷ್ಯ ಬೇಕು ಅನ್ನುತ್ತಿದ್ದಾರೆ. ಇದನ್ನೆಲ್ಲಾ ಮಾಡುವುದಾದರೆ ತನಿಖೆ ಏಕೆ ಬೇಕು?

  • ಪ್ರತಿಭಟನೆ ನಡೆಸುತ್ತಿದ್ದ  ದೂರುದಾರರ ವಿರುದ್ಧ ಗಲಭೆಯ ಆರೋಪ ಹೊರಿಸಲಾಗಿದೆ. ದೆಹಲಿಯ ಜಂತರ್‌ ಮಂತರ್‌ಗೆ ಬಂದ ಅಪರಾಧದ ಸಂತ್ರಸ್ತರನ್ನು ಸೆಕ್ಷನ್‌ 144 ನಂತಹ ಕಾನೂನುಗಳನ್ನು ಉಲ್ಲಂಘಿಸಿದ ಅಪರಾಧಿಗಳು ಎನ್ನಲಾಗುತ್ತದೆ. ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸುವಂತಿಲ್ಲ ಎಂದು ಅವರಿಗೆ ತಾಕೀತು ಮಾಡಲಾಗುತ್ತದೆ. ಅವರು ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಅವರು ಪೊಲೀಸರಲ್ಲಿಗೆ ಹೋಗಬೇಕೆ?

  • ಜೂನ್ 15 ರೊಳಗೆ ತನಿಖೆ ಮುಗಿಯುತ್ತದೆ ಎಂದು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ. ಅಷ್ಟರೊಳಗೆ ತನಿಖೆ ಮುಕ್ತಾಯವಾಗುತ್ತದೆ ಎಂದು ಅವರಿಗೆ ಹೇಗೆ ಗೊತ್ತಾಯಿತು? ಇದನ್ನು ಹೇಳಬೇಕಿರುವುದು ತನಿಖಾಧಿಕಾರಿಯೇ ಹೊರತು ಬೇರಾರೂ ಅಲ್ಲ. ಇದರರ್ಥ ತೆರೆಮರೆಯಲ್ಲೇನೋ ನಡೆಯುತ್ತಿದೆ.  ಇದು ಗಂಭೀರವಾದುದು. ಏಕೆಂದರೆ ತನಿಖೆಯಲ್ಲಿ ಯಾರೂ ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹೇಳಿತ್ತು. ಇದರಲ್ಲಿ ಉಳಿದವರ ವ್ಯವಹಾರ ಎಂಥದ್ದು?

  • ಅಪ್ರಾಪ್ತ ವಯಸ್ಕ ಕುಸ್ತಿಪಟುವನ್ನು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿ ಘಟನೆಯನ್ನು ಮರುಸೃಷ್ಟಿ ಮಾಡುವಂತೆ ಹೇಳಿದ್ದೇಕೆ? ಆಕೆ ಲಿಖಿತ ಹೇಳಿಕೆ ನೀಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ನೀವು ಇನ್ನೆಂಥಾ ತನಿಖೆ ನಡೆಸುತ್ತೀರಿ? ತಾನು ಹೇಳಿದ್ದನ್ನು ಸಾಬೀತುಗೊಳಿಸಬೇಕು ಎಂದು ಆಕೆಯನ್ನು ಬಲಿಪಶು ಮಾಡುವ ಕ್ರಮವಾಗಿದೆ ಇದು. ಹೀಗೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ವಿವಿಧ ಪ್ರಕರಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಇದು ಬಲಿಪಶುವನ್ನು ಮತ್ತೆ ಬಲಿಪಶುವನ್ನಾಗಿ ಮಾಡುವುದಕ್ಕಿಂತ ಕಡಿಮೆ ಏನಲ್ಲ. ಆಕೆಯ ದೈಹಿಕ ಸಮಗ್ರತೆಯನ್ನು ಉಲ್ಲಂಘಿಸಲಾಗಿದೆ.

  • ದೆಹಲಿ ಪೊಲೀಸರ ತನಿಖೆ ಆರೋಪಿ ವಿರುದ್ಧ ಮಾಡಲಾದ ಆರೋಪ ಸುಳ್ಳು. ಹಾಗೂ ಆರೋಪಿ ನಿರಪರಾಧಿ ಎಂದು ಬಿಂಬಿಸಲು ಹೊರಟಂತಿದೆ.

ವಕೀಲರಾದ ವೃಂದಾ ಗ್ರೋವರ್ ಮತ್ತು ಶಾರುಖ್ ಆಲಂ ಕೂಡ ವೆಬ್‌ನಾರ್‌ನಲ್ಲಿ ಮಾತನಾಡಿದರು.