Supreme Court, Delhi and Haryana  
ಸುದ್ದಿಗಳು

ದೆಹಲಿ ನೀರಿನ ಬಿಕ್ಕಟ್ಟು: ಮಾಧ್ಯಮ ಪ್ರಸಾರದಿಂದ ಪ್ರಭಾವಿತವಾಗದೆ ಪ್ರಕರಣ ಅಧ್ಯಯನ ಮಾಡುವುದಾಗಿ ತಿಳಿಸಿದ ಸುಪ್ರೀಂ

Bar & Bench

ತನ್ನ ಮುಂದೆ ಸಲ್ಲಿಕೆಯಾಗಿರುವ ಅರ್ಜಿಯ ಪ್ರತಿಯಲ್ಲಿ ದೋಷಗಳನ್ನು ಇನ್ನೂ ಸರಿಪಡಿಸಿಲ್ಲ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್‌ ಹಿಮಾಚಲ ಪ್ರದೇಶದಿಂದ ರಾಷ್ಟ್ರ ರಾಜಧಾನಿಗೆ ನೀರು ಸರಬರಾಜು ಮಾಡಲು ಅನುವಾಗುವಂತೆ ಹರಿಯಾಣಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಮುಂದೂಡಿತು  [ದೆಹಲಿ ಸರ್ಕಾರ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಕರಣದ ಬಗ್ಗೆ ಅತಿಶಯದ ಮಾಧ್ಯಮ ವರದಿಗಳಿದ್ದು ಮೊದಲು ಪ್ರಕರಣದ ಕಡತ ಓದುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ರಜಾಕಾಲೀನ ಪೀಠ ತಿಳಿಸಿತು. ಮಾಧ್ಯಮಗಳಲ್ಲಿ ಈ ಕುರಿತು ವ್ಯಾಪಕ ವರದಿಗಳಾಗುತ್ತಿದ್ದು, ಒಂದೊಮ್ಮೆ ನಾವು ಕಡತಗಳನ್ನು ಓದದೆ ಹೋದರೆ ಮಾಧ್ಯಮದ ವರದಿಗಳಿಂದ ಪ್ರಬಾವಿತರಾಗುವ ಸಾಧ್ಯತೆ ಇರುತ್ತದೆ ಎಂದು ನ್ಯಾ. ಮಿಶ್ರಾ ತಿಳಿಸಿದರು.

ಪ್ರಕರಣವನ್ನು ಬುಧವಾರ ಪಟ್ಟಿ ಮಾಡಲು ಸೂಚಿಸಿದ ನ್ಯಾಯಾಲಯ ಸಂಬಂಧಪಟ್ಟ ಎಲ್ಲಾ ವರದಿಗಳನ್ನು ಅಧಿಕೃತವಾಗಿ ಸಲ್ಲಿಸಲು ಸೂಚಿಸಿತು.  

ಅರ್ಜಿಯ ದೋಷಗಳನ್ನು ತೆಗೆದುಹಾಕುವಲ್ಲಿ ದೆಹಲಿ ಸರ್ಕಾರದ ವಿಫಲವಾಗಿರುವುದಕ್ಕೆ ಇದೇ ವೇಳೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಅರ್ಜಿಯಲ್ಲಿನ ದೋಷಗಳನ್ನು ತೆಗೆದುಹಾಕದ ಕಾರಣ ಪ್ರಕರಣದ ಸ್ಥಿತಿಗತಿ ವರದಿ ಮತ್ತಿತರ ಅಫಿಡವಿಟ್‌ಗಳು ದಾಖಲಾಗಿಲ್ಲ ಎಂದು ತಿಳಿಸಿತು. ನ್ಯೂನತೆಗಳನ್ನು ತೆಗೆದುಹಾಕದಿದ್ದಲ್ಲಿ ಪ್ರಕರಣವನ್ನು ವಜಾಗೊಳಿಸುವುದಾಗಿಯೂ ಎಚ್ಚರಿಕೆ ನೀಡಿತು.

ನ್ಯೂನತೆಗಳನ್ನು ತೆಗೆದುಹಾಕಲಾಗಿದೆ ಎಂದು ದೆಹಲಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಹೇಳಿದ್ದರೂ, ಉಳಿದಿರುವ ದೋಷಗಳನ್ನು ತೆಗೆದುಹಾಕಲು ಕ್ರಮಕೈಗೊಳ್ಳಬೇಕು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು. ಹಾಗೆ ಮಾಡಲಾಗುವುದು ಎಂದು ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಜೂನ್ 6ರಂದು ಪ್ರಕರಣದ ಹಿಂದಿನ ತುರ್ತನ್ನು ಗಮನಿಸಿದ ನ್ಯಾಯಾಲಯ 137 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಹಿಮಾಚಲ ಸರ್ಕಾರಕ್ಕೆ ನಿರ್ದೇಶಿಸಿತ್ತು. ನೀರು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ದೆಹಲಿ ತಲುಪುವಂತೆ ನೋಡಿಕೊಳ್ಳಬೇಕು ಎಂದು  ಹರಿಯಾಣಕ್ಕೆ ತಾಕೀತು ಮಾಡಿತ್ತು. ನೀರು ದೆಹಲಿ ತಲುಪುವ ಮೊದಲು ಹರಿಯಾಣದ ಕಾಲುವೆಯ ಮೂಲಕ ಹಾದು ಹೋಗಬೇಕಿದೆ.