AAP 
ಸುದ್ದಿಗಳು

ದೆಹಲಿ ನ್ಯಾಯಾಲಯಕ್ಕೆ ಸೇರಿದ ಜಾಗದಲ್ಲಿ ಆಪ್ ಕಚೇರಿ: ತೆರವಿಗೆ ಹೊಸ ಗಡುವು ನೀಡಿದ ಸುಪ್ರೀಂ ಕೋರ್ಟ್

Bar & Bench

ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಸೇರಿದ ಭೂಮಿಯಲ್ಲಿರುವ ಕಚೇರಿ ತೆರವುಗೊಳಿಸಲು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸುಪ್ರೀಂ ಕೋರ್ಟ್ ಸೋಮವಾರ ಹೆಚ್ಚಿನ ಸಮಯಾವಕಾಶ ನೀಡಿದೆ [ಮಲಿಕ್ ಮಝರ್ ಸುಲ್ತಾನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಎಎಪಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹೆಚ್ಚಿನ ಕಾಲಾವಕಾಶ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ರಜಾಕಾಲೀನ ಪೀಠ ಗಡುವು ವಿಸ್ತರಿಸಿತು.

ಮಾರ್ಚ್‌ನಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಜಮೀನು ತೆರವು ಮಾಡಲು ಎಎಪಿಗೆ ಸುಪ್ರೀಂ ಕೋರ್ಟ್ ಜೂನ್ 15 ರವರೆಗೆ ಕಾಲಾವಕಾಶ ನೀಡಿತ್ತು.

ವಿವಾದಿ ಜಾಗವನ್ನು ಜೂನ್ 15, 2024ರ ಒಳಗಾಗಿ ತೆರವುಗೊಳಿಸಬೇಕಿತ್ತು. ಈ ಜಾಗವನ್ನು 2020 ರಲ್ಲೇ ದೆಹಲಿ ಹೈಕೋರ್ಟ್‌ಗೆ ಹಂಚಿಕೆ ಮಾಡಲಾಗಿತ್ತು. ಹೈಕೋರ್ಟ್‌ ಕಟ್ಟಡ ವಿಸ್ತರಣೆಯಲ್ಲಿನ ವಿಳಂಬದಿಂದಾಗಿ ನ್ಯಾಯಾಲಯದ ಕಾರ್ಯಚಟುವಟಿಕೆಯು ಅಸ್ತವ್ಯಸ್ತವಾಗುತ್ತಿದ್ದು ಖರ್ಚಿನ ವಿಚಾರವೂ ಗಮನಿಸಬೇಕಾದ ಅಂಶವಾಗಿದೆ ಎಂದಿರುವ ನ್ಯಾಯಾಲಯ ಕೊನೆಯ ಅವಕಾಶವಾಗಿ ಆಗಸ್ಟ್ 10, 2024ರವರೆಗೆ ಗಡುವು ವಿಸ್ತರಿಸಿದೆ.

ದೆಹಲಿ ಹೈಕೋರ್ಟ್‌ಗೆ ಮೂಲತಃ ಹಂಚಲಾಗಿದ್ದ ಭೂಮಿಯನ್ನು 2015ರಿಂದ ಎಎಪಿ ಕಾನೂನುಬಾಹಿರವಾಗಿ  ಅತಿಕ್ರಮಿಸಿಕೊಂಡಿದೆ ಎಂದು ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಚೇರಿ ಕಟ್ಟಡ ಸ್ಥಳಾಂತರಕ್ಕಾಗಿ  ಎಎಪಿಗೆ ಜೂನ್ 15ರವರೆಗೆ ಕಾಲಾವಕಾಶ ನೀಡಿತ್ತು.

ಎಎಪಿ ಕಚೇರಿ ಕಟ್ಟಡಕ್ಕೆ ನೂತನ ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಗೆ ನಾಲ್ಕು ವಾರಗಳಲ್ಲಿ ತಿಳಿಸುವಂತೆ ಭೂಮಿ ಮತ್ತು ಅಭಿವೃದ್ಧಿ ಕಚೇರಿಗೆ ಸೂಚಿಸಿತ್ತು. ಮತ್ತೊಂದೆಡೆ ಪಕ್ಷದ ಕಚೇರಿಗೆ ಸ್ಥಳ ಒದಗಿಸುವ ಸಂಬಂಧ ತ್ವರಿತ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್‌ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.