Justices BV Nagarathna and Prashant Mishra 
ಸುದ್ದಿಗಳು

ತಜ್ಞರ ಅಭಿಪ್ರಾಯ ಕುರಿತು ಪಕ್ಷಕಾರರ ಆಕ್ಷೇಪಣೆಗೆ ಅವಕಾಶವಿಲ್ಲದೆ ಆದೇಶ: ಮತ್ತೆ ಎನ್‌ಜಿಟಿ ಕಿವಿ ಹಿಂಡಿದ ಸುಪ್ರೀಂ

“ತಜ್ಞರ ಸಮಿತಿ ವರದಿಯನ್ನು ಅವಲಂಬಿಸಲು ಎನ್‌ಜಿಟಿ ಉದ್ದೇಶಿಸಿದ್ದರೆ ಅದನ್ನು ಮೊದಲೇ ಪಕ್ಷಕಾರರಿಗೆ ತಿಳಿಸಿ ಅವರು ಚರ್ಚಿಸಲು ಇಲ್ಲವೇ ಆ ನಿರ್ಧಾರವನ್ನು ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕು” ಎಂದ ನ್ಯಾಯಾಲಯ.

Bar & Bench

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗಳು ತಜ್ಞರ ಸಮಿತಿಯ ಶಿಫಾರಸಿನ ಮೇಲೆ ನೇರ ಅವಲಂಬಿತವಾಗಿ ಆದೇಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ [ಸಿಂಗ್ರೌಲಿ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಮತ್ತು ಅಶ್ವನಿ ಕುಮಾರ್ ದುಬೆ ನಡುವಣ ಪ್ರಕರಣ].

ತಜ್ಞರು ಸೂಚಿಸಿದ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲೇ ತಾನು ಯಾರ ವಿರುದ್ಧ ನಿರ್ದೇಶನ ನೀಡಬೇಕಿದೆಯೋ ಅವರ ವಾದ ಮಂಡನೆಗೆ ಎನ್‌ಜಿಟಿ ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

“ತಜ್ಞರ ಸಮಿತಿಯ ವರದಿಯನ್ನು ಅವಲಂಬಿಸಲು ಎನ್‌ಜಿಟಿ ಉದ್ದೇಶಿಸಿದ್ದರೆ… ಅದನ್ನು ಮೊದಲೇ ಪಕ್ಷಕಾರರಿಗೆ  ತಿಳಿಸಿ ಅವರು ಚರ್ಚಿಸಲು ಇಲ್ಲವೇ ಆ ನಿರ್ಧಾರವನ್ನು ಪ್ರಶ್ನಿಸಲು ಅವಕಾಶ ದೊರೆಕಿಸಿಕೊಡಬೇಕು… ನ್ಯಾಯಮಂಡಳಿಗೆ ಸಲ್ಲಿಸಲಾದ ಅಂತಹ ವರದಿ ಕುರಿತು ತಮ್ಮ ಅವಲೋಕನ ಮತ್ತು ಹೇಳಿಕೆಗಳನ್ನು ಮಂಡಿಸಲು ಸಮಂಜಸವಾದ ಅವಕಾಶವನ್ನು ನೀಡಬೇಕು. ಅಂತಿಮ ತೀರ್ಮಾನಕ್ಕೆ ಬರುವಲ್ಲಿ ತಜ್ಞರ ಅಭಿಪ್ರಾಯ ಕೇವಲ ಸಹಾಯವನ್ನಷ್ಟೇ ಮಾಡುತ್ತದೆ ಎಂಬುದನ್ನು ಹೇಳುವ ಅಗತ್ಯವಿಲ್ಲ” ಎಂದು ಅದು ಹೇಳಿತು.  

ಹಿಮಾಚಲ ಪ್ರದೇಶದ ಕೆಲವು ಉಷ್ಣ ವಿದ್ಯುತ್‌ ಕಂಪನಿಗಳಿಗೆ ದೆಹಲಿಯ ಎನ್‌ಜಿಟಿ ಹೊರಡಿಸಿದ ನಿರ್ದೇಶನಗಳನ್ನು ಬದಿಗೆ ಸರಿಸುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಅವಲೋಕನಗಳನ್ನು ಮಾಡಿತು.

ವಾಯು ಮಾಲಿನ್ಯ ನಿಯಂತ್ರಣ ಮತ್ತು ಮೇಲ್ವಿಚಾರಣಾ ಸಾಧನಗಳ ಸ್ಥಾಪನೆ ಮತ್ತು ಹಾರುಬೂದಿಯ ಬಳಕೆ ಮತ್ತು ವಿಲೇವಾರಿ ಕ್ರಮಗಳಿಗೆ ಸಂಬಂಧಿಸಿದಂತೆ ಎನ್‌ಜಿಟಿ ತೀರ್ಪು ನೀಡಿತ್ತು. ತಜ್ಞರ ಸಮಿತಿಯ ವರದಿಯೊಂದನ್ನು ಆಧರಿಸಿ ಈ ಆದೇಶ ನೀಡಲಾಗಿದ್ದು ತಜ್ಞರ ಸಮಿತಿಯ ಅಭಿಪ್ರಾಯಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂದು ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಕಂಪೆನಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದವು.

ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ "ಪ್ರಸ್ತುತ ಪ್ರಕರಣದಲ್ಲಿ ತಜ್ಞರ ಸಮಿತಿಯ ವರದಿ ಮತ್ತು ಶಿಫಾರಸುಗಳನ್ನು ಆಧರಿಸಿ ನಿರ್ದೇಶನಗಳನ್ನು ನೀಡಲಾಗಿದ್ದು ಅಂತಹ ವಿಧಾನವು ಅಸಮರ್ಪಕವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಗಮನಾರ್ಹ ಸಂಗತಿ ಎಂದರೆ, ಪ್ರಕರಣದ ಕಕ್ಷಿದಾರರ ಅಹವಾಲುಗಳನ್ನು ಕೇಳದೆಯೇ ಸಮಿತಿ ಮತ್ತು ತಜ್ಞರ ವರದಿ ಆಧಾರದ ಮೇಲೆ ಅನೇಕ ನ್ಯಾಯಮಂಡಳಿಗಳು ಆದೇಶ ಹೊರಡಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠ ಬಲವಾದ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲ ತಿಂಗಳ ನಂತರ ಮತ್ತೆ ಈ ಘಟನೆ ನಡೆದಿದೆ.  

ಆ ಪ್ರಕರಣದಲ್ಲಿ, ಕಕ್ಷಿದಾರರನ್ನು ಕೇಳದೆ ಆದೇಶ ಹೊರಡಿಸಿದ್ದಕ್ಕಾಗಿ ಇದೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತ್ತು.