ನ್ಯಾಯಮೂರ್ತಿಗಳು ಅಥವಾ ನ್ಯಾಯಾಲಯದ ವರ್ಚಸ್ಸಿಗೆ ಧಕ್ಕೆಯುಂಟು ಮಾಡದ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿಗಾರಿಕೆ ಹೊರತುಪಡಿಸಿ ವಿಚಾರಣಾಧೀನ ಪ್ರಕರಣಗಳು ಹಾಗೂ ಅಂತಿಮ ಆದೇಶಗಳು ಮತ್ತು ತೀರ್ಪುಗಳ ಕುರಿತು ಪ್ರತಿಕ್ರಿಯಿಸುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಕೆಯಾಗಿದೆ.
ಹಲವು ವಕೀಲರು ವಿಶೇಷವಾಗಿ ಕೆಲವು ಹಿರಿಯ ವಕೀಲರು ನ್ಯಾಯಾಲಯದ "ಅಮೂಲ್ಯ ಸಮಯವನ್ನು ವ್ಯರ್ಥ" ಮಾಡುವುದರ ಜೊತೆಗೆ ಕೋರ್ಟ್ ನ ಕಾರ್ಯಚಟುವಟಿಕೆಗಳಿಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಡಾ. ಸುಭಾಷ್ ವಿಜಯರನ್ ಪಿಐಎಲ್ ಸಲ್ಲಿಸಿದ್ದಾರೆ.
ನಿರ್ದಿಷ್ಟ ರೀತಿಯಲ್ಲಿ ನ್ಯಾಯಮೂರ್ತಿಗಳು ಹಾಗೂ ಕೋರ್ಟ್ ಗಳು ಆದೇಶ ಹಾಗೂ ತೀರ್ಪು ನೀಡುತ್ತಿರುವುದಕ್ಕೆ ಕೆಲವು ವಕೀಲರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ದುರುದ್ದೇಶಪೂರಿತ ಟೀಕೆ ಮಾಡುವುದು ಹೆಚ್ಚಾಗುತ್ತಿದೆ. ಇದು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜಸ್ಥಾನ ರಾಜಕೀಯ ಪರಿಸ್ಥಿತಿ ಕುರಿತು ಅಲ್ಲಿನ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಹಿರಿಯ ವಕೀಲ ಪಿ ಚಿದಂಬರಂ ಅವರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ಬಗ್ಗೆ ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
ರಾಜಸ್ಥಾನ ವಿಧಾನಸಭಾ ಸ್ಪೀಕರ್ 19 ಬಂಡಾಯ ಶಾಸಕರಿಗೆ ಷೋಕಾಸ್ ನೋಟಿಸ್ ನೀಡಿದ್ದರು. ನೋಟಿಸ್ ನೀಡಿದ ನಂತರದ ಪ್ರಕ್ರಿಯೆ ಮುಂದುವರಿಸದಂತೆ ರಾಜಸ್ಥಾನ ಹೈಕೋರ್ಟ್ ಸ್ಪೀಕರ್ ಅವರಲ್ಲಿ ಮನವಿ ಮಾಡಿತ್ತು. ಹೈಕೋರ್ಟ್ ಆದೇಶವನ್ನು ತಡೆ ಹಿಡಿಯಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿದಂಬರಂ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ದಾಖಲಿಸಿದ್ದರು.
ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದ ಅಂತಿಮ ಆದೇಶ ಸ್ಪೀಕರ್ ಅವರಿಂದ ಹೊರಬೀಳುವವರೆಗಿನ ಪ್ರಕ್ರಿಯೆಗಳು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು 10ನೇ ಷೆಡ್ಯೂಲ್ ಉಲ್ಲೇಖಿಸಿ 1992ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಚಿದಂಬರಂ ಟ್ವೀಟ್ ಮೂಲಕ ವಿವರಿಸಿದ್ದರು.
ಚಿದಂಬರಂ ಅವರ ಈ ಟ್ವೀಟ್ ನ್ಯಾಯಮೂರ್ತಿಗಳ ಮೇಲೆ ಒತ್ತಡ ಉಂಟು ಮಾಡುವ ದುರುದ್ದೇಶ ಹೊಂದಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಕಾನೂನು ವಿಚಾರಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಆದೇಶಗಳನ್ನು ವಿಮರ್ಶಿಸುವುದು ಸದೃಢ ಪ್ರಜಾಪ್ರಭುತ್ವದ ಲಕ್ಷಣ. ದುರುದ್ದೇಶಪೂರಿತವಾಗಿ ನ್ಯಾಯಮೂರ್ತಿಗಳನ್ನು ಪ್ರಭಾವಿಸುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
“ವಿಶೇಷವಾಗಿ ಅದರಲ್ಲೂ ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿರುವ ಹೆಸರಾಂತ ವಕೀಲರು ಈ ರೀತಿಯ ಕೃತ್ಯ ಎಸಗಿದಾಗ ಪರಿಣಾಮ ವ್ಯಾಪಕವಾಗಿರುತ್ತದೆ” ಎಂದು ಅರ್ಜಿದಾರ ಡಾ. ಸುಭಾಷ್ ವಿಜಯರನ್ ಅಭಿಪ್ರಾಯಪಟ್ಟಿದ್ದಾರೆ.
“ನ್ಯಾಯಾಲಯಗಳು ಹಾಗೂ ನ್ಯಾಯಮೂರ್ತಿಗಳ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಪಪ್ರಚಾರ ಮಡೆಸುವುದರಿಂದ ನ್ಯಾಯಾಂಗದ ಘನತೆಗೆ ಧಕ್ಕೆಯಾಗುತ್ತದೆ. ಇದರಿಂದ ನ್ಯಾಯಾಂಗದ ಮೇಲೆ ಜನತೆ ಇಟ್ಟಿರುವ ನಂಬಿಕೆಗೆ ಚ್ಯುತಿಯಾಗುತ್ತದೆ. ಯಾರಿಗಾದರೂ ತಗಾದೆಗಳಿದ್ದರೆ ನಿರ್ದಿಷ್ಟ ಹಾದಿಗಳ ಮೂಲಕ ಅದನ್ನು ಪ್ರಶ್ನಿಸಬಹುದಾಗಿದೆ. ಮಾಧ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸುವುದು ಮತ್ತು ನ್ಯಾಯಮೂರ್ತಿಗಳನ್ನು ಪಕ್ಷಪಾತಿಗಳಂತೆ ಬಿಂಬಿಸುವುದು ವ್ಯವಸ್ಥೆಗಾಗಲಿ, ತೊಂದರೆಗೊಳಗಾದವರಿಗಾಗಲಿ ಒಳಿತು ಉಂಟು ಮಾಡುವುದಿಲ್ಲ. ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.