Supreme Court of India
Supreme Court of India 
ಸುದ್ದಿಗಳು

ಉಪಲೋಕಾಯುಕ್ತ ನೇಮಕ ವಿಚಾರ: ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯಲ್ಲಿನ ಆಕ್ಷೇಪವೇನು?

Bar & Bench

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಸಮ್ಮತಿ ಇಲ್ಲದೆಯೂ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಎಸ್ ಪಾಟೀಲ ಅವರನ್ನು ಉಪಲೋಕಾಯುಕ್ತರನ್ನಾಗಿ ನೇಮಕ ಮಾಡಿದ ಸಂಬಂಧ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ನೀಡಿದೆ.

ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಎಸ್ ಆರ್ ಹಿರೇಮಠ್ ಅವರು ಸಲ್ಲಿಸಿರುವ ಮೇಲ್ಮನವಿಯ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಮತ್ತು ನ್ಯಾ. ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಈ ನೋಟಿಸ್ ನೀಡಿದೆ. ಹಿರೇಮಠ್ ಪರವಾಗಿ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಹಾಗೂ ಅಮಿತ್ ಪೈ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

1984ರ ಕರ್ನಾಟಕ ಲೋಕಾಯುಕ್ತ ಕಾಯ್ದೆ, ಸೆಕ್ಷನ್ 3 (2) (ಬಿ) ಅಡಿಯಲ್ಲಿ “ಅರ್ಥಪೂರ್ಣ ಮತ್ತು ಪರಿಣಾಮಕಾರಿ ಸಮಾಲೋಚನೆ” ಯಾವುದು ಎಂಬುದು ಸುಪ್ರೀಂಕೋರ್ಟ್ ಮುಂದಿರುವ ಪ್ರಮುಖ ಪ್ರಶ್ನೆ. ಜೊತೆಗೆ ಮುಖ್ಯ ನ್ಯಾಯಮೂರ್ತಿಗಳಿಗೆ ಸಲಹೆಕಾರರ ಪೈಕಿ ಒಬ್ಬರ ಬಗ್ಗೆ ಸೂಕ್ತ ವಿವರಗಳನ್ನು ನೀಡದೇ ಇರುವುದು ನ್ಯಾಯಾಲಯ ವಿಧಿಸಿರುವ ತತ್ವಗಳಿಗೆ ವಿರುದ್ಧವಾಗಿದೆಯೇ ಎಂಬ ಪ್ರಶ್ನೆಯನ್ನೂ ಇದು ಒಡ್ಡುತ್ತದೆ ಎಂದು ಅಮಿತ್ ಪೈ ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ

· ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಅವರ ಉಪಲೋಕಾಯುಕ್ತ ಹುದ್ದೆಯಿಂದ ನಿವೃತ್ತರಾದ ಬಳಿಕ ಖಾಲಿ ಹುದ್ದೆ ಭರ್ತಿ ಮಾಡುವಂತೆ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ 2018ರಲ್ಲಿ ಕೋರಿದ್ದರು. ಹುದ್ದೆಗೆ ಯಾರನ್ನು ನೇಮಿಸುವುದು ಸೂಕ್ತ ಎಂದು ಕೋರಿ ಅಂದಿನ ನ್ಯಾ. ದಿನೇಶ್ ಮಹೇಶ್ವರಿ ಅವರಿಗೆ ಕುಮಾರಸ್ವಾಮಿ ಪತ್ರ ಬರೆದಿದ್ದರು.

· ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲಗೌಡ ಅವರ ಹೆಸರನ್ನು ಹುದ್ದೆಗೆ ಪರಿಗಣಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಸೂಚಿಸಿದರು. ಆದರೆ ಸರ್ಕಾರ ಎಂದಿಗೂ ಸಮಾಲೋಚನೆಗೆ ಮುಂದಾಗಲಿಲ್ಲ. ನ್ಯಾ. ಮಹೇಶ್ವರಿ ಅವರು ಹುದ್ದೆ ತೊರೆದ ನಂತರ 2019ರಲ್ಲಿ ನೂತನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರನ್ನು ಕೋರಿತು.

· ಮುಖ್ಯ ನ್ಯಾಯಮೂರ್ತಿ ಓಕಾ ಮತ್ತೆ ನ್ಯಾಯಮೂರ್ತಿ ಗೌಡರ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ, 2019 ರ ನವೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಓಕಾ ಅವರು ಸರ್ಕಾರದ ನಿರ್ಧಾರಕ್ಕೆ ಸಮ್ಮತಿಸದೆ ಇದ್ದರೂ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಿಸಿತು.

· ಉಪ ಲೋಕಾಯುಕ್ತರ ನೇಮಕಕ್ಕೆ ಮುಂಚಿತವಾಗಿ ಸಂಬಂಧಿತ ವಿಚಾರಗಳನ್ನು ಮುಖ್ಯ ನ್ಯಾಯಮೂರ್ತಿಗಳ ಎದುರು ಮಂಡಿಸದ ಕಾರಣ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ನೇಮಕ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಅವರೊಂದಿಗೆ "ಯಾವುದೇ ಸಮಾಲೋಚನೆ" ನಡೆದಿಲ್ಲ ಎಂದು ವಾದಿಸಲಾಯಿತು.

ನ್ಯಾಯಮೂರ್ತಿಗಳಾದ ರವಿ ಮಳಿಮಠ ಮತ್ತು ಎಂಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಈ ವರ್ಷದ ಫೆಬ್ರವರಿಯಲ್ಲಿ ‘ಸಲಹಾಕಾರರು ಪ್ರಸ್ತಾಪಿಸಿದ ಯಾವುದೇ ಹೆಸರುಗಳ ಕುರಿತಂತೆ ಯಾವುದೇ ಸಲಹಾಕಾರರನ್ನು ಕತ್ತಲೆಯಲ್ಲಿಟ್ಟಿಲ್ಲ. ಪರಿಣಾಮಕಾರಿ ಸಮಾಲೋಚನೆಯ ಭಾಗವಾಗಿಯೇ ನೇಮಕಾತಿ ನಡೆದಿದೆ ಎಂದು ಅಭಿಪ್ರಾಯಪಟ್ಟಿತ್ತು.

ಆದರೆ ಮೇಲ್ಮನವಿಯಲ್ಲಿ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

"1984 ರ ಕರ್ನಾಟಕ ಲೋಕಾಯುಕ್ತ ಕಾಯ್ದೆ, ಸೆಕ್ಷನ್ 3 (2) (ಬಿ) ನಲ್ಲಿ ಉಲ್ಲೇಖಿಸಿರುವಂತೆ ಮುಖ್ಯಮಂತ್ರಿ ಅವರು ಮುಖ್ಯ ನ್ಯಾಯಮೂರ್ತಿ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಹಾಗೂ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರೊಂದಿಗೆ ಪರಿಣಾಮಕಾರಿ ಸಮಾಲೋಚನೆ ನಡೆಸಿಲ್ಲ” ಎಂದು ತಿಳಿಸಲಾಗಿದೆ.

ಮುಂದುವರೆದು, "ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಚಲಾಯಿಸುವಾಗ, ಮುಖ್ಯ ನ್ಯಾಯಾಧೀಶರು ಸಮಾಲೋಚನೆಯಿಂದ ತೃಪ್ತರಾಗಿದ್ದಾರೆಯೇ ಎಂದು ಪರೀಕ್ಷಿಸಲು ಮಾನ್ಯ ಹೈಕೋರ್ಟನ್ನು ಕೋರಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಅರ್ಜಿಯನ್ನು ಇಲ್ಲಿ ಓದಿ:

Samaj_Parivarthan_v__Govt__of_Karnataka___Final_SLP.pdf
Preview

ಆದೇಶವನ್ನು ಇಲ್ಲಿ ಓದಿ:

Samaj_Parivartana_Samudaya_v__Government_of_Karnataka.pdf
Preview