ಸುಪ್ರೀಂ ಕೋರ್ಟ್, ಇವಿಎಂ 
ಸುದ್ದಿಗಳು

ವಿವಿಪ್ಯಾಟ್‌ನೊಂದಿಗೆ ಮತಗಳ ತಾಳೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಈಗಿನ ವಿಧಾನದಲ್ಲಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾದ ಯಾವುದಾದರೂ 5 ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದಾಖಲಾದ ಮತಗಳಿಗೆ ಸಂಬಂಧಿಸಿದಂತೆ ಮಾತ್ರ ವಿವಿಪ್ಯಾಟ್ ಪರಿಶೀಲನೆ ಮಾಡಲಾಗುತ್ತಿದೆ.

Bar & Bench

ಚುನಾವಣಾ ಫಲಿತಾಂಶಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಎಲ್ಲಾ ಇವಿಎಂ ಮತಚೀಟಿಗಳನ್ನು ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ ಚೀಟಿಯೊಂದಿಗೆ ತಾಳೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ನೀಡಿದೆ.

ಈಗಿನ ವಿಧಾನದಲ್ಲಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯಾದೃಚ್ಛಿಕವಾಗಿ ಆಯ್ಕೆಮಾಡಲಾದ ಯಾವುದಾದರೂ 5 ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದಾಖಲಾದ ಮತಗಳಿಗೆ ಸಂಬಂಧಿಸಿದಂತೆ ಮಾತ್ರ ವಿವಿಪ್ಯಾಟ್ ಪರಿಶೀಲನೆ ಮಾಡಲಾಗುತ್ತಿದೆ.

ಈ ವ್ಯವಸ್ಥೆಯ ಬದಲು ಪ್ರತಿಯೊಂದು ಇವಿಎಂ ಮತವನ್ನು ಕೂಡ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಬೇಕು ಎಂದು ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಕುಮಾರ್ ಅಗರ್‌ವಾಲ್‌ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಮತಪತ್ರವನ್ನು 'ದಾಖಲಿಸಲಾಗಿದೆ' ಎಂದು ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್ ನೀಡುವ ಚೀಟಿಗಳನ್ನು ಮತಪೆಟ್ಟಿಗೆಯಲ್ಲಿ ಹಾಕಲು ಮತದಾರರಿಗೆ ಅವಕಾಶ ನೀಡಬೇಕು ಎಂದು ಕೂಡ ಅರ್ಜಿದಾರರು ಕೋರಿದ್ದಾರೆ.

ಅನುಕ್ರಮವಾಗಿ ಅಂದರೆ ಒಂದಾದ ನಂತರ ಇನ್ನೊಂದರಂತೆ ವಿವಿಪ್ಯಾಟ್‌ ಪರಿಶೀಲನೆ ನಡೆಸುವುದನ್ನು ಕಡ್ಡಾಯಗೊಳಿಸುವ ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಬದಲಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಒಮ್ಮೆಲೇ ಪರಿಶೀಲಿಸಲು ಕೋರಿದೆ.

ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿರುವ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠ ಇವಿಎಂ ಮತ್ತು ವಿವಿಪ್ಯಾಟ್‌ಗೆ ಸಂಬಂಧಿಸಿದಂತೆ ಬಾಕಿ ಇರುವ ಉಳಿದ ಅರ್ಜಿಗಳೊಂದಿಗೆ ಈ ಅರ್ಜಿಯನ್ನು ಸೇರಿಸಿದೆ.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸುವುದರಿಂದ ಮತ್ತು ಮತ ಎಣಿಕೆಗಾಗಿ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸುವುದರಿಂದ 5-6 ಗಂಟೆಗಳಲ್ಲಿ ಸಂಪೂರ್ಣ ವಿವಿಪ್ಯಾಟ್ ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ವಾದಿಸಲಾಗಿದೆ.

ಸುಮಾರು 24 ಲಕ್ಷ ವಿವಿಪ್ಯಾಟ್‌ಗಳ ಖರೀದಿಸಲು ಸರ್ಕಾರ ಸುಮಾರು 5,000 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರೂ, ಕೇವಲ 20,000 ವಿವಿಪ್ಯಾಟ್‌ ಚೀಟಿಗಳನ್ನು ಮಾತ್ರ ಪರಿಶೀಲಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ವಿವಿಪ್ಯಾಟ್ ಮತ್ತು ಇವಿಎಂಗಳ ಬಗ್ಗೆ ತಜ್ಞರು ಹಲವಾರು ಕಳವಳಗಳನ್ನು ಎತ್ತಿದ್ದಾರೆ. ಈ ಹಿಂದೆಯೂ ಇವಿಎಂ ಮತ್ತು ವಿವಿಪ್ಯಾಟ್ ಮತ ಎಣಿಕೆಗಳ ನಡುವೆ ಗಮನಾರ್ಹ ಸಂಖ್ಯೆಯ ವ್ಯತ್ಯಾಸಗಳು ವರದಿಯಾಗಿವೆ. ಹಾಗಾಗಿ, ಎಲ್ಲಾ ವಿವಿಪ್ಯಾಟ್ ಚೀಟಿಗಳನ್ನು ನಿಖರವಾಗಿ ಎಣಿಕೆ ಮಾಡುವುದು ಅತ್ಯಗತ್ಯ ಎಂದು ಅರ್ಜಿದಾರರು ಕೋರಿದ್ದಾರೆ

ಅಲ್ಲದೆ, ಮತದಾರರು ತಮ್ಮ ವಿವಿಪ್ಯಾಟ್ ಚೀಟಿಗಳನ್ನು ಮತಪೆಟ್ಟಿಗೆಯಲ್ಲಿ ಭೌತಿಕವಾಗಿ ಹಾಕಲು ಅವಕಾಶ ನೀಡುವ ಮೂಲಕ ಇವಿಎಂನಲ್ಲಿ ತಮ್ಮ ಮತಗಳನ್ನು ನಿಖರವಾಗಿ ಲೆಕ್ಕಹಾಕಲಾಗಿದೆಯೇ ಎಂದು ಕೂಲಂಕಷವಾಗಿ ಅರಿಯಲು ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿವಿಪ್ಯಾಟ್ ಚೀಟಿಗಳನ್ನು ಇವಿಎಂಗಳೊಂದಿಗೆ ತಾಳೆ ಹಾಕುವ ವಿಚಾರ ಸದಾ ಚರ್ಚೆಗೆ ಗ್ರಾಸವಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ಒಂದು ಯಾದೃಚ್ಛಿಕ ಇವಿಎಂಅನ್ನು ಮಾತ್ರವೇ ವಿವಿಪ್ಯಾಟ್‌ನೊಂದಿಗೆ ಎಣಿಕೆ ಮಾಡುತ್ತಿದ್ದ ವಿಧಾನದ ಬದಲಿಗೆ ವಿವಿಪ್ಯಾಟ್‌ ಬಳಕೆ ಸಂಖ್ಯೆಯನ್ನು ಕನಿಷ್ಠ ಶೇ 50ರಷ್ಟು ಹೆಚ್ಚಿಸಬೇಕು ಎಂದು ಕೋರಿ 21 ವಿರೋಧ ಪಕ್ಷಗಳ ನಾಯಕರು 2019ರ ಲೋಕಸಭಾ ಚುನಾವಣೆಗೂ ಮುನ್ನ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವಿವಿಪ್ಯಾಟ್‌ ತಾಳೆ ಸಂಖ್ಯೆಯನ್ನು 1ರಿಂದ 5ಕ್ಕೆ ಹೆಚ್ಚಿಸಿತು.

ಎಲ್ಲಾ ಇವಿಎಂಗಳ ವಿವಿಪ್ಯಾಟ್ ಪರಿಶೀಲನೆ  ಕೋರಿ ಕೆಲವು ತಂತ್ರಜ್ಞರು ಸಲ್ಲಿಸಿದ್ದ ಮನವಿಯನ್ನು ಮೇ 2019 ರಲ್ಲಿ ನ್ಯಾಯಾಲಯ ವಜಾಗೊಳಿಸಿತ್ತು.

ಕಳೆದ ವರ್ಷ ಜುಲೈನಲ್ಲಿ, ದೇಶದಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಪಿಐಎಲ್ ವಿಚಾರಣೆ ವೇಳೆ ಕೆಲವೊಮ್ಮೆ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯದ ಬಗ್ಗೆ ಅತಿಯಾಗಿ ಶಂಕೆ ವ್ಯಕ್ತಪಡಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಟೀಕಿಸಿತ್ತು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ್ದ ಈ ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದೆ.