ಸಂಜಯ್ ಸಿಂಗ್ ಮತ್ತು ಸುಪ್ರೀಂ ಕೋರ್ಟ್ ಫೇಸ್ ಬುಕ್
ಸುದ್ದಿಗಳು

ಅಬಕಾರಿ ನೀತಿ ಹಗರಣ: ಆಪ್‌ ಸಂಸದ ಸಂಜಯ್ ಸಿಂಗ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಇ ಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 4, 2023ರಂದು ಇ ಡಿ ಬಂಧಿಸಿತ್ತು. ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಡಿಸೆಂಬರ್ 22, 2023ರಂದು ಹಾಗೂ ದೆಹಲಿ ಹೈಕೋರ್ಟ್ ಫೆಬ್ರವರಿ 9 ರಂದು ತಿರಸ್ಕರಿಸಿದ್ದವು.

Bar & Bench

ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ತಮ್ಮ ಬಂಧನ ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಹಾಗೂ ಸಂಸದ ಸಂಜಯ್ ಸಿಂಗ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಜಾರಿ ನಿರ್ದೇಶನಾಲಯದ (ಇ ಡಿ) ಪ್ರತಿಕ್ರಿಯೆ ಕೇಳಿದೆ.

ಸಿಂಗ್‌ ಪರವಾಗಿ ಹಿರಿಯ ನ್ಯಾಯವಾದಿ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು ಮಂಡಿಸಿದ ವಾದವನ್ನು ಇಂದು ಸಂಕ್ಷಿಪ್ತವಾಗಿ ಆಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಇ ಡಿಗೆ ನೋಟಿಸ್‌ ನೀಡಿತು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ. ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌.

ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ (ಈಗ ರದ್ದುಪಡಿಸಲಾಗಿರುವ) ದೆಹಲಿ ಅಬಕಾರಿ ನೀತಿ ರೂಪಿಸಿ ಜಾರಿಗೊಳಿಸುವಲ್ಲಿ ಸಂಜಯ್ ಸಿಂಗ್ ಅವರ ಪಾತ್ರ ಉಲ್ಲೇಖಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಅಕ್ಟೋಬರ್ 4, 2023 ರಂದು ಇ ಡಿ ಬಂಧಿಸಿತ್ತು.

ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಡಿಸೆಂಬರ್ 22, 2023ರಂದು ಹಾಗೂ ದೆಹಲಿ ಹೈಕೋರ್ಟ್ ಫೆಬ್ರವರಿ 9 ರಂದು ತಿರಸ್ಕರಿಸಿದ್ದವು. ಮನವಿ ತಿರಸ್ಕರಿಸುವ ವೇಳೆ ದೆಹಲಿ ಹೈಕೋರ್ಟ್‌, ಅರ್ಜಿಯು ಇ ಡಿಗೆ ರಾಜಕೀಯ ಉದ್ದೇಶ ಇದೆ ಎಂದು ಆಪಾದಿಸುವುದು ದೇಶದ ಚಿತ್ರಣದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿತ್ತು.

ಬಂಧನ ಮತ್ತು ಸೆರೆವಾಸ ಪ್ರಶ್ನಿಸಿ ಸಿಂಗ್‌ ಸಲ್ಲಿಸಿರುವ ಅರ್ಜಿಯ ಜೊತೆಗೆ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 5 ರಂದು ವಿಚಾರಣೆ ನಡೆಸಲಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆಮ್‌ ಆದ್ಮಿ ಪಕ್ಷದ ಮೂರನೇ ಪ್ರಮುಖ ನಾಯಕ ಸಂಜಯ್‌ ಸಿಂಗ್‌ ಆಗಿದ್ದಾರೆ. ಆಪ್‌ನ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರನ್ನು 2022ರ ನವೆಂಬರ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಬಂಧಿಸಲಾಗಿತ್ತು. ನಂತರ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಫೆಬ್ರವರಿ 2023ರಲ್ಲಿ ಬಂಧಿತರಾಗಿದ್ದರು.