ಇಡಿ, ತಮಿಳುನಾಡು ನಕ್ಷೆ ಮತ್ತು ಸುಪ್ರೀಂ ಕೋರ್ಟ್.
ಇಡಿ, ತಮಿಳುನಾಡು ನಕ್ಷೆ ಮತ್ತು ಸುಪ್ರೀಂ ಕೋರ್ಟ್. 
ಸುದ್ದಿಗಳು

ಅಂಕಿತ್ ತಿವಾರಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ಕೋರಿದ ಇ ಡಿ; ತಮಿಳುನಾಡಿಗೆ ನೋಟಿಸ್ ನೀಡಿದ ಸುಪ್ರೀಂ

Bar & Bench

ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ವಿರುದ್ಧದ ಲಂಚ ಆರೋಪಗಳ ಬಗ್ಗೆ ತಮಿಳುನಾಡು ಸರ್ಕಾರದ ತನಿಖೆಯನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ನಡುವೆ ಗುರುವಾರ ತೀವ್ರ ವಾಗ್ವಾದ ನಡೆಯಿತು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು ಇಂದು ಪ್ರಕರಣವನ್ನು ಆಲಿಸಿತು. ಅಂತಿಮವಾಗಿ ಪೀಠವು ಡಿಎಂಕೆ ಸರ್ಕಾರಕ್ಕೆ ನೋಟಿಸ್ ನೀಡಲು ನಿರ್ಧರಿಸಿತು. ಅಲ್ಲದೆ, ಎರಡು ವಾರಗಳ ನಂತರ ಈ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ಸೂಚಿಸಿತು.

ರಾಜ್ಯ ತನಿಖಾ ಸಂಸ್ಥೆಗಳ ಪಕ್ಷಪಾತ ಅಥವಾ ಇಡಿ ಮತ್ತು ಕೇಂದ್ರ ತನಿಖಾ ದಳದಂತಹ (ಸಿಬಿಐ) ಕೇಂದ್ರ ತನಿಖಾ ಸಂಸ್ಥೆಗಳ 'ಸೇಡಿನ' ಕ್ರಮಗಳ ಕುರಿತಾದ ಆತಂಕಗಳನ್ನು ನಿಭಾಯಿಸಲು ಮಾರ್ಗಸೂಚಿಗಳನ್ನು ರೂಪಿಸಬಹುದು ಎನ್ನುವ ಇಂಗಿತವನ್ನು ಇದೇ ವೇಳೆ ನ್ಯಾಯಾಲಯ ವ್ಯಕ್ತಪಡಿಸಿತು.

"ನ್ಯಾಯಯುತ ಮತ್ತು ವಸ್ತುನಿಷ್ಠ ತನಿಖೆಯು ಅಂತಿಮ ಉದ್ದೇಶವಾಗಿದ್ದು, ಯಾವುದೇ ತಪ್ಪಿತಸ್ಥ ವ್ಯಕ್ತಿಯು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು. ಇದಕ್ಕಾಗಿ ಕಾರ್ಯವಿಧಾನವನ್ನು ರೂಪಿಸಬಹುದು. ಪ್ರತ್ಯಾರೋಪಗಳ ಮುಸುಕಿನಲ್ಲಿ ಯಾವುದೇ ಆರೋಪಿಗಳು ತಪ್ಪಿಸಿಕೊಳ್ಳಬಾರದು. ಇದನ್ನು (ಮಾರ್ಗಸೂಚಿ) ನಾವು ನಂತರ ದೇಶದೆಲ್ಲೆಡೆ ವಿಸ್ತರಿಸುವ ಸಲುವಾಗಿ ಬೇರೆ ರಾಜ್ಯಗಳಿಗೂ ಅನ್ವಯಿಸಬಹುದು" ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

"ನೀವು (ಕೇಂದ್ರ ಏಜೆನ್ಸಿಗಳು) ಎಲ್ಲೆಡೆ ಅಧಿಕಾರಿಗಳನ್ನು ಹೊಂದಿದ್ದೀರಿ. ನೀವು ಸೇಡಿನ ಮನೋಭಾವ ಹೊಂದಿದ್ದೀರಿ ಎಂದು ನಾವು ಹೇಳುತ್ತಿಲ್ಲ, ಆದರೆ ಹಾಗೊಂದು ಪಕ್ಷದಲ್ಲಿ ಹೊಂದಿದ್ದರೆ, ಅದರ ಪರಿಣಾಮ ದೇಶದ ಮೇಲೆ, ನಮ್ಮ ವ್ಯವಸ್ಥೆಯ ಮೇಲೆ ಏನಾಗುತ್ತದೆ ಎಂದು ಊಹಿಸಿ. ಅದಕ್ಕಾಗಿಯೇ ತನಿಖೆ ನಡೆಸುವ ಮೊದಲು ಒಂದು ರೀತಿಯ ಪೂರ್ವ ಪರಿಶೀಲನೆಯ (ಸ್ಕ್ರೀನಿಂಗ್) ಕಾರ್ಯವಿಧಾನವನ್ನು ಜಾರಿಗೆ ತರಬೇಕು" ಎಂದು ನ್ಯಾಯಮೂರ್ತಿ ವಿಶ್ವನಾಥನ್ ಸಲಹೆ ನೀಡಿದರು.

ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿಯ (ಪಿಎಂಎಲ್ಎ) ಅಪರಾಧಗಳಿಗೆ ಸಂಬಂಧಿಸಿದಂತೆ ಅಂಕಿತ್‌ ತಿವಾರಿ ವಿರುದ್ಧದ ಕ್ರಿಮಿನಲ್‌ ದೂರು ಮತ್ತು ಎಫ್‌ಐಆರ್‌ ಹಂಚಿಕೊಳ್ಳಲು ತಮಿಳುನಾಡು ಅಸಹಕಾರ ತೋರುತ್ತಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇ ಡಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ .

ಇ ಡಿ ಅಧಿಕಾರಿ ಅಂಕಿತ್ ತಿವಾರಿ ವಿರುದ್ಧದ ಲಂಚ ಆರೋಪ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆಯೂ ಇ ಡಿ ಮನವಿ ಮಾಡಿದೆ. ಪ್ರಸ್ತುತ ಪ್ರಕರಣವನ್ನು ತಮಿಳುನಾಡು ಭ್ರಷ್ಟಾಚಾರ ನಿಗ್ರಹ ಮತ್ತು ವಿಚಕ್ಷಣಾ ನಿರ್ದೇಶನಾಲಯ (ಡಿವಿಎಸಿ) ತನಿಖೆ ನಡೆಸುತ್ತಿದೆ.

ಪೊಲೀಸರು ಮಾಹಿತಿ ಹಂಚಿಕೊಳ್ಳದ ಕಾರಣ ಇಂತಹ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮಿಳುನಾಡಿನಲ್ಲಿ ಹಣ ಅಕ್ರಮ ವರ್ಗಾವಣೆಯಿಂದ ತೊಂದರೆಗೊಳಗಾದವರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ತಾನು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವುದಾಗಿ ಇಡಿ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ ವಿ ವಿಶ್ವನಾಥನ್

ದಿಂಡಿಗಲ್‌ ವೈದ್ಯರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ತಿವಾರಿ ಅವರನ್ನು ಡಿವಿಎಸಿ ಬಂಧಿಸಿತ್ತು. ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಕಳೆದ ಡಿಸೆಂಬರ್‌ನಲ್ಲಿ ವಜಾಗೊಳಿಸಿತ್ತು.

ವೈದ್ಯರಿಗೆ ಬೆದರಿಕೆ ಹಾಕಿ ಅವರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಮುಚ್ಚಿ ಹಾಕುವುದಕ್ಕಾಗಿ ತಿವಾರಿ ರೂ 3 ಕೋಟಿಗೆ ಬೇಡಿಕೆ ಇಟ್ಟಿದ್ದ. ಬಳಿಕ ರೂ 51 ಲಕ್ಷ ನೀಡುವುದಾಗಿ ಒಪ್ಪಿಕೊಂಡಿದ್ದ ವೈದ್ಯ ಆತನಿಗೆ 20 ಲಕ್ಷ ರೂಪಾಯಿ ಪಾವತಿಸಿದ್ದರು ಎಂದು ಡಿವಿಎಸಿ ಹೇಳಿತ್ತು. ತಿವಾರಿ ಅವರನ್ನು ಡಿಸೆಂಬರ್ 1, 2023ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸದ ಎಫ್‌ಐಆರ್‌ ಒದಗಿಸದೆ, ಅವುಗಳನ್ನು ಸಾರ್ವಜನಿಕವಾಗಿ ಜಾಲತಾಣದಲ್ಲಿ ಪ್ರಕಟಿಸದೆ ತಮಿಳುನಾಡು ಸರ್ಕಾರ ಉದ್ದೇಶಪೂರ್ವಕವಾಗಿ ತಂತ್ರ ಹೆಣೆಯುತ್ತಿದೆ ಎನ್ನುವುದು ಇ ಡಿ ಆರೋಪ.

"ಪೊಲೀಸರು ಪ್ರಕರಣ ದಾಖಲಿಸಿ, ಎಫ್ಐಆರ್ ದಾಖಲಿಸಿದ ನಂತರ ಅದರ ಪ್ರತಿಯನ್ನು ಸಂಬಂಧಪಟ್ಟ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ ಅವರಿಗೆ ಕಳುಹಿಸಬೇಕು. ಎಫ್ಐಆರ್ ಅನ್ನು ನಿಗದಿತ ಜಾಲತಾಣದಲ್ಲಿ ಪ್ರಕಟಿಸಬೇಕು. ಇದರಿಂದ ಅದನ್ನು ನೋಡಲು ಬಯಸುವ ಯಾವುದೇ ವ್ಯಕ್ತಿಗೆ ಅದು ದೊರೆಯುತ್ತದೆ" ಎಂದು ಇ ಡಿ ತನ್ನ ಅರ್ಜಿಯಲ್ಲಿ ತಿಳಿಸಿದೆ.