ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೋಹನ್ ನಾಯಕ್ ಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ರಾಜ್ಯ ಸರ್ಕಾರ ಮತ್ತು ನಾಯಕ್‌ಗೆ ಜನವರಿ 12ರಂದು ನೋಟಿಸ್ ನೀಡಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.
ಗೌರಿ ಅವರನ್ನು 2017ರಲ್ಲಿ ಬೆಂಗಳೂರಿನ ಅವರ ನಿವಾಸದೆದುರು ಗುಂಡಿಕ್ಕಿ ಕೊಲ್ಲಲಾಗಿತ್ತು. ಹತ್ಯೆ ಮಾಡಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪ ಎದುರಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಸಂಪಾಜೆಯ ಮೋಹನ್ ನಾಯಕ್‌ಗೆ ಡಿಸೆಂಬರ್ 7, 2023 ರಂದು ಹೈಕೋರ್ಟ್ ಜಾಮೀನು ನೀಡಿತ್ತು.
ಈ ತೀರ್ಪನ್ನು ಗೌರಿ ಲಂಕೇಶ್ ಅವರ ಸಹೋದರಿ, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದ ಮೊದಲ ವ್ಯಕ್ತಿ ನಾಯಕ್ ಆಗಿದ್ದಾನೆ.
ನಾಯಕ್ ಪಾತ್ರದ ಬಗ್ಗೆ ಮಾತನಾಡಿದ 23 ಸಾಕ್ಷಿಗಳಲ್ಲಿ ಯಾರೊಬ್ಬರೂ ಆತ ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದ ಸಭೆಯಲ್ಲಿರಲಿಲ್ಲ ಎಂದು ಹೇಳಿರುವುದನ್ನು ಪ್ರಸ್ತಾಪಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರು ನಾಯಕ್‌ಗೆ ಜಾಮೀನು ನೀಡಿದ್ದರು.
ಬಹುತೇಕ ಸಾಕ್ಷಿಗಳು ಬೆಂಗಳೂರಿನ ಕುಂಬಳಗೋಡಿನಲ್ಲಿ ಮೋಹನ್ ನಾಯಕ್ ಮನೆ ಬಾಡಿಗೆ ಪಡೆದಿದ್ದ ಎಂದಷ್ಟೇ ಹೇಳಿದ್ದಾರೆ ಎಂಬುದಾಗಿ ಪೀಠ ಹೇಳಿತ್ತು.
ಪ್ರಕರಣದಲ್ಲಿ ನಿಜವಾದ ದಾಳಿಕೋರರಿಗೆ ಆಶ್ರಯ ನೀಡಲು ನಾಯಕ್ ಮನೆ ಬಾಡಿಗೆಗೆ ಪಡೆದಿದ್ದ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.
ಈ ಪ್ರಕರಣದಲ್ಲಿ ದಾಖಲಾದ ತಪ್ಪೊಪ್ಪಿಗೆ ಹೇಳಿಕೆಗಳಲ್ಲಿ ದೋಷಗಳಿದ್ದು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯ (ಕೋಕಾ) ಸೆಕ್ಷನ್‌ಗಳನ್ನು ಜಾರಿಗೊಳಿಸಲು ಅನುಮತಿ ನೀಡುವ ಮೊದಲು ಕೃತ್ಯ ನಡೆದಿದೆ ಎಂದು ಹೈಕೋರ್ಟ್ ಹೇಳಿತ್ತು.
ಇದಲ್ಲದೆ, ಕೋಕಾ ಅಡಿಯಲ್ಲಿ ಆರೋಪ ಸಾಬೀತಾದರೂ, ಆರೋಪಿಯ ಕೃತ್ಯ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ನಾಯಕ್ ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದಾನೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ವಿಚಾರಣೆ ಸದ್ಯಕ್ಕೇ ಪೂರ್ಣಗೊಳ್ಳುವಂತಿಲ್ಲ. ಇಂತಹ ವಿಳಂಬಕ್ಕೆ ಆರೋಪಿ ಕಾರಣವಲ್ಲ ಎಂದು ಅದು ನುಡಿದಿತ್ತು.
ಈ ಹಿನ್ನೆಲೆಯಲ್ಲಿ, ನಾಯಕ್ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೈಕೋರ್ಟ್ ಅವಕಾಶ ನೀಡಿತ್ತು. ಇದಕ್ಕೂ ಮೊದಲು ಹೈಕೋರ್ಟ್ ಆತನಿಗೆ ಸಾಮಾನ್ಯ ಜಾಮೀನು ನೀಡಲು ಎರಡು ಬಾರಿ ನಿರಾಕರಿಸಿತ್ತು.
ಹಿರಿಯ ವಕೀಲರಾದ ಹುಜೇಫಾ ಅಹ್ಮದಿ , ವಕೀಲರಾದ ಅಪರ್ಣಾ ಭಟ್, ರೋಹನ್ ಶರ್ಮಾ ಹಾಗೂ ರಶ್ಮಿ ಸಿಂಗ್ ಅವರು ಕವಿತಾ ಲಂಕೇಶ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹಾಜರಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]