Supreme Court 

 
ಸುದ್ದಿಗಳು

ಬಿಜೆಪಿ ಶಾಸಕರ ಅಮಾನತು ಪ್ರಕರಣ: ಮಹಾರಾಷ್ಟ್ರ ವಿಧಾನಸಭೆಗೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌

ಹಕ್ಕುಬಾಧ್ಯತೆಗಳ ನಿಯಮಗಳು ಸ್ಪಷ್ಟವಾಗಿರುವಾಗ ಅಮಾನತು ನಿರ್ಣಯವನ್ನು ಆ ನಿಯಮಾವಳಿಗಳ ಅನುಸಾರ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಪೀಠ.

Bar & Bench

ಹನ್ನೆರಡು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದ ಮಹಾರಾಷ್ಟ್ರ ವಿಧಾನಸಭೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಮಾಡಿದೆ [ಆಶಿಶ್‌ ಶೆಲಾರ್ ವರ್ಸಸ್‌ ಮಹಾರಾಷ್ಟ್ರ ವಿಧಾನಸಭೆ]. ಅಮಾನತುಗೊಂಡಿದ್ದ ಬಿಜೆಪಿ ಶಾಸಕ ಆಶಿಶ್ ಶೆಲಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಪೀಠ ನಡೆಸಿತು.

ಸದನದ ಹಕ್ಕುಬಾಧ್ಯತೆಗಳನ್ನು ಪಾಲಿಸುವಲ್ಲಿ ವಿಫಲವಾಗಿರುವ ಬಗ್ಗೆ ಪ್ರಶ್ನೆ ಎತ್ತಿದ ಪೀಠವು, “ಇದು ಪ್ರಮುಖವಾದ ವಿಷಯ” ಎಂದು ಅಭಿಪ್ರಾಯಪಟ್ಟಿತು. ಮುಂದುವರೆದು, “ನಿರ್ದಿಷ್ಟ ಕಾರ್ಯವಿಧಾನವನ್ನು ಹೊಂದಿದ್ದು ಆ ವಿಧಾನವನ್ನು ಅನುಸರಿಸದೆ ಹೋದರೆ ಅದನ್ನು ಶಾಸಕಾಂಗದ ಕಾರ್ಯವಿಧಾನ ಎಂದು ಕರೆಯಲಾದೀತೆ? ಹಕ್ಕುಬಾಧ್ಯತೆಗಳ ನಿಯಮಾವಳಿಗಳು ಸ್ಪಷ್ಟವಾಗಿರುವಾಗ ನಿರ್ಣಯವನ್ನು ಆ ನಿಯಮಾವಳಿಗಳ ಅನುಸಾರ ಏಕೆ ಕೈಗೊಂಡಿಲ್ಲ” ಎಂದು ಪ್ರಶ್ನಿಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ, ಸದನಗಳು ಪರಂಪರೆ ಮತ್ತು ಆಚರಣೆಗಳನ್ನು ಹೊಂದಿವೆ. ಈ ಪ್ರಕರಣದಲ್ಲಿ ಶಾಸಕರಿಗೆ ಯಾವುದೇ ನೋಟಿಸ್‌ ನೀಡಿಲ್ಲ. ಅಲ್ಲದೆ ಅಮಾನತು ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವರು ಮಂಡಿಸಿದ್ದಾರೆ. ಇದು ಶಾಸಕರೊಬ್ಬರಿಗೆ ಸದನದಲ್ಲಿ ಪಾಲ್ಗೊಳ್ಳಲು ತಮ್ಮ ಪಕ್ಷವನ್ನು ಪ್ರತಿನಿಧಿಸಲು ಇರುವ ಹಕ್ಕನ್ನು ಮೊಟಕುಗೊಳಿಸುವಂತಹ ರಾಜಕೀಯ ನಿರ್ಣಯವಾಗಿದ್ದು ದೂರಗಾಮಿ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ವಾದಿಸಿದರು.

ಮಹಾರಾಷ್ಟ್ರ ವಿಧಾನಸಭೆಯನ್ನು ಹಿರಿಯ ವಕೀಲರಾದ ದುಷ್ಯಂತ್‌ ದವೆ ಮತ್ತು ಅರ್ಯಮಾ ಸುಂದರಂ ಅವರು ಪ್ರತಿನಿಧಿಸಿದ್ದರು. ವಿಚಾರಣೆಯನ್ನು ಆಲಿಸಿದ ನ್ಯಾಯಾಲಯವು ಮಹಾರಾಷ್ಟ್ರ ವಿಧಾನಸಭೆಗೆ ನೋಟಿಸ್‌ ಜಾರಿಗೊಳಿಸಿ ಪ್ರಕರಣದ ವಿಚಾರಣೆಯನ್ನು ಜನವರಿ 11, 2022ಕ್ಕೆ ಮುಂದೂಡಿತು.