ಬಾಡಿಗೆ ತಾಯ್ತನ 
ಸುದ್ದಿಗಳು

ಮದುವೆಯಾಗದಿರಲು ನಿರ್ಧರಿಸಿದ್ದೀರಿ: ಬಾಡಿಗೆ ತಾಯ್ತನ ನಿಯಮ ಪ್ರಶ್ನಿಸಿದ್ದ 44ರ ಅವಿವಾಹಿತೆಗೆ ಸುಪ್ರೀಂ ಪ್ರತಿಕ್ರಿಯೆ

ಅವಿವಾಹಿತೆಯರು ಬಾಡಿಗೆ ತಾಯಂದಿರಾಗುವುದನ್ನು ನಿರ್ಬಂಧಿಸುವ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ- 2021ರ ಸೆಕ್ಷನ್ 2 (1) (ಎಸ್) ನ ಸಾಂವಿಧಾನಿಕತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.

Bar & Bench

ಅವಿವಾಹಿತ ಮಹಿಳೆಯರು ಬಾಡಿಗೆ ತಾಯಂದಿರಾಗುವುದನ್ನು ನಿರ್ಬಂಧಿಸುವ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ- 2021ರ ಸೆಕ್ಷನ್ 2 (1) (ಎಸ್)ನ ಸಾಂವಿಧಾನಿಕತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಮೂವತ್ತೈದರಿಂದ 45 ವರ್ಷದೊಳಗಿನ ವಿಧವೆ ಅಥವಾ ವಿಚ್ಛೇದಿತ ಭಾರತೀಯ ಮಹಿಳೆ ಮಾತ್ರ ಬಾಡಿಗೆ ತಾಯ್ತನಕ್ಕೆ "ಉದ್ದೇಶಿತ ಮಹಿಳೆ" ಎಂದು ಅರ್ಹತೆ ಪಡೆಯುತ್ತಾರೆ.

ಈ ಸೆಕ್ಷನ್‌ "ಅತ್ಯಂತ ತರ್ಕಹೀನವಾಗಿದೆಯಲ್ಲದೆ, ಕಾನೂನುಬಾಹಿರ, ತಾರತಮ್ಯದಿಂದ ಕೂಡಿದ್ದು ಸಂವಿಧಾನದ 14 ಮತ್ತು 21ನೇ ವಿಧಿಗಳಡಿ ಅರ್ಜಿದಾರರಿಗೆ ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು 44 ವರ್ಷದ ಅವಿವಾಹಿತ ಮಹಿಳೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರನ್ನೊಳಗೊಂಡ ಪೀಠ, ಮದುವೆಯ ಸಂಸ್ಥೆಯೊಳಗೆ ತಾಯಿಯಾಗುವ ನಿಯಮವಿದೆಯೇ ವಿನಾ ಅದರ ಹೊರತಾಗಿ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ನಾಗರತ್ನ ಅವರು "ವಿಜ್ಞಾನವಿಕಸನಗೊಂಡಿರಬಹುದು ಆದರೆ ಸಮಾಜ ವಿಕಸನಗೊಂಡಿಲ್ಲ ... ನಿಮ್ಮ ಜೀವನದಲ್ಲಿ ನೀವು ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ನೀವು ಮದುವೆಯಾಗದೆ ಇರಲು ನಿರ್ಧರಿಸಿದ್ದೀರಿ... ಮದುವೆಯ ಸಂಸ್ಥೆಯೊಳಗೆ ತಾಯಿಯಾಗುವುದು ಇಲ್ಲಿ (ಭಾರತದಲ್ಲಿ) ರೂಢಿಯಾಗಿದೆ. ಮದುವೆಯ ಸಂಸ್ಥೆಯ ಹೊರಗೆ ತಾಯಿಯಾಗುವುದು ರೂಢಿಯಲ್ಲ. ನಮಗೆ ಅದರ ಬಗ್ಗೆ ಕಳವಳ ಇದೆ. ದೇಶದಲ್ಲಿ ಮದುವೆಯ ಸಂಸ್ಥೆ ಉಳಿಯಬೇಕೇ ಅಥವಾ ಬೇಡವೇ? ನಾವು ಪಾಶ್ಚಾತ್ಯ ದೇಶಗಳಂತಲ್ಲ. ಮದುವೆಯ ಸಂಸ್ಥೆಯನ್ನು ರಕ್ಷಿಸಬೇಕು. ನೀವು ನಮ್ಮನ್ನು ಸಂಪ್ರದಾಯವಾದಿಗಳು ಎಂದು ಹಣೆಪಟ್ಟಿಹಚ್ಚಬಹುದು ಅದನ್ನು ನಾವು ಒಪ್ಪಲು ಸಿದ್ಧರಿದ್ದೇವೆ" ಎಂದು ಹೇಳಿದರು.

ಬಾಡಿಗೆ ತಾಯ್ತನ ನಿಯಮಾವಳಿ- 2022ರ ಸೆಕ್ಷನ್‌ 7ರ ಅಡಿಯಲ್ಲಿ ಬಾಡಿಗೆ ತಾಯ್ತನಕ್ಕೆ ಒಳಗಾಗುವ ಅವಿವಾಹಿತ ಮಹಿಳೆ ಬಾಡಿಗೆ ತಾಯಿಯಾಗಲು ತನ್ನ ಸ್ವಂತ ಅಂಡಾಣುಗಳು ಮತ್ತು ದಾನಿಯ ವೀರ್ಯಾಣುಗಳನ್ನು ಬಳಸಬೇಕೆಂದು ಮಾರ್ಚ್ 14, 2023 ರ ತಿದ್ದುಪಡಿ ಅಧಿಸೂಚನೆಯನ್ನು ವಕೀಲ ಶ್ಯಾಮಲಾಲ್ ಕುಮಾರ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಈ ಅಧಿಸೂಚನೆಗೆ ಯಾವುದೇ ತರ್ಕಬದ್ಧತೆ ಇಲ್ಲ ಮತ್ತು ಅರ್ಜಿದಾರರಿಗೆ ತಾರತಮ್ಯ ಎಸಗುತ್ತದೆ. ಅಲ್ಲದೆ ತನ್ನದೇ ಆದ ನಿಯಮ 14ಕ್ಕೂ ಅದು ವಿರುದ್ಧವಾಗಿದೆ ಎಂದು ವಾದಿಸಲಾಗಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Jaswinder Kaur vs UOI.pdf
Preview