Supreme Court 
ಸುದ್ದಿಗಳು

ತೀರ್ಪಿನಲ್ಲಿ ಆರೋಪಿಯ ಜಾತಿ ಉಲ್ಲೇಖ: ರಾಜಸ್ಥಾನ ಹೈಕೋರ್ಟ್ ಕಿವಿಹಿಂಡಿದ ಸುಪ್ರೀಂ ಕೋರ್ಟ್

ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುವಾಗ ಆರೋಪಿಯ ಜಾತಿ ಅಥವಾ ಧರ್ಮಕ್ಕೆ ಪ್ರಸ್ತುತತೆ ಇರುವುದಿಲ್ಲ ಎಂದು ಪೀಠ ತಿಳಿಸಿದೆ.

Bar & Bench

ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುವಾಗ ಆರೋಪಿಯ ಜಾತಿ ಅಥವಾ ಧರ್ಮಕ್ಕೆ ಯಾವುದೇ ಪ್ರಸ್ತುತತೆ ಇರುವುದಿಲ್ಲ ಅವುಗಳನ್ನು ತೀರ್ಪಿನಲ್ಲಿ ಎಂದಿಗೂ ಉಲ್ಲೇಖಿಸಬಾರದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ರಾಜಸ್ಥಾನ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ಪೋಕ್ಸೊ ಕಾಯಿದೆ ಪ್ರಕರಣದ ತೀರ್ಪಿನ ದಾವೆ ಶೀರ್ಷಿಕೆಯಲ್ಲಿ ಆರೋಪಿಯ ಜಾತಿ ಉಲ್ಲೇಖಿಸಿದ್ದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.  

ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುವಾಗ ಆರೋಪಿಯ ಜಾತಿ ಅಥವಾ ಧರ್ಮಕ್ಕೆ ಪ್ರಸ್ತುತತೆ ಇರುವುದಿಲ್ಲ. ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ಪ್ರಕರಣದ ತೀರ್ಪಿನ ದಾವೆ ಶೀರ್ಷಿಕೆಯಲ್ಲಿ ಆರೋಪಿಯ ಜಾತಿಯನ್ನು ಏಕೆ ಉಲ್ಲೇಖಿಸಲಾಗಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ದಾವೆ ಶೀರ್ಷಿಕೆಯಲ್ಲಿ ದಾವೆದಾರರನ್ನು ಜಾತಿ ಅಥವಾ ಧರ್ಮದ ಆಧಾರದಲ್ಲಿ ಎಂದಿಗೂ ಉಲ್ಲೇಖಿಸಬಾರದು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಪ್ರತಿವಾದಿಯಾಗಿರುವ ಅಪರಾಧಿಗೆ ನೀಡಲಾದ ಶಿಕ್ಷೆಯನ್ನು ಜೀವಾವಧಿಯಿಂದ 12 ವರ್ಷಗಳ ಸೆರೆವಾಸಕ್ಕೆ ಇಳಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿತು.

ಅಪರಾಧ ತನ್ನ ಮನಸಾಕ್ಷಿ ಅಲಗಾಡಿಸುವಂತಿದೆ ಎಂದ ಪೀಠ ಕೃತ್ಯದ ಅಗಾಧತೆ ಮತ್ತು ಸಂತ್ರಸ್ತೆಯ ವಯಸ್ಸನ್ನು ಗಮನಿಸಿ ಹೇಳಿತು. ಅಲ್ಲದೆ, ಹೈಕೋರ್ಟ್‌ ಪರಿಗಣನೆಗಳು ಅಪ್ರಸ್ತುತ ಎಂದು ತಿಳಿಸಿತು.

ಆದಾಗ್ಯೂ ಮತ್ತೆ ಜೀವಾವಧಿ ಶಿಕ್ಷೆ ವಿಧಿಸದಿರಲು ನಿರ್ಧರಿಸಿದ ಸುಪ್ರೀಂ ಕೋರ್ಟ್‌ ಹದಿನಾಲ್ಕು ವರ್ಷಗಳವರೆಗೆ ಯಾವುದೇ ವಿನಾಯಿತಿ ಇಲ್ಲದೆ ಆರೋಪಿ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತು.

ಸಂತ್ರಸ್ತೆಗೆ ನೀಡಲಾದ ಪರಿಹಾರದ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ ಪೀಠ ಸಂತ್ರಸ್ತ ಬಾಲಕಿಯರ ಪುನರ್‌ವಸತಿ ಎಂಬುದು ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಭಾಗವಾಗಬೇಕು. ಕಲ್ಯಾಣ ರಾಜ್ಯವಾಗಿ ಅದನ್ನು ಸಾಧ್ಯವಾಗಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿತು.