Justice Ajay Rastogi and Justice Bela Trivedi, Supreme Court 
ಸುದ್ದಿಗಳು

ಸ್ಥಳೀಯ ಭಾಷೆಯಲ್ಲಿ ನುಡಿದ ಸಾಕ್ಷ್ಯವನ್ನು ವಿಚಾರಣಾ ನ್ಯಾಯಾಲಯ ಇಂಗ್ಲಿಷ್‌ನಲ್ಲಷ್ಟೇ ದಾಖಲಿಸಬಾರದು: ಸುಪ್ರೀಂ ಕೋರ್ಟ್‌

ಸಾಕ್ಷಿಯ ಭಾಷೆಯಲ್ಲೇ ಸಾಕ್ಷ್ಯವನ್ನು ದಾಖಲಿಸಿದಾಗ ಮಾತ್ರ ಸಾಕ್ಷ್ಯದ ಗುಣಮಟ್ಟವನ್ನು ಅತ್ಯುತ್ತಮವಾಗಿ ಗ್ರಹಿಸಬಹುದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಸಾಕ್ಷಿಗಳು ತಮ್ಮದೇ ಆದ ಭಾಷೆಯಲ್ಲಿ ಸಾಕ್ಷ್ಯ ನುಡಿದಾಗಲೂ ಕೆಲ ವಿಚಾರಣಾ ನ್ಯಾಯಾಲಯಗಳು ಅದನ್ನು ಇಂಗ್ಲಿಷ್‌ನಲ್ಲಷ್ಟೇ ದಾಖಲಿಸಿಕೊಳ್ಳುತ್ತಿರುವ ರೂಢಿಯ ಬಗ್ಗೆ ಸುಪ್ರೀಂ ಕೋರ್ಟ್‌ ಸೋಮವಾರ ಅಸಮ್ಮತಿ ಸೂಚಿಸಿದೆ. [ನಯಮ್ ಅಹ್ಮದ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಸಾಕ್ಷಿಯು ನುಡಿಯುವ ಸಾಕ್ಷ್ಯವನ್ನು ಅವರದೇ ಭಾಷೆಯಲ್ಲಿ ಯಥಾವತ್‌ ದಾಖಲಿಸಿಕೊಳ್ಳಬೇಕು. ನಂತರ ಅದನ್ನು ನ್ಯಾಯಾಲಯದ ಭಾಷೆಗೆ ತರ್ಜುಮೆ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಅಜಯ್‌ ರಾಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿತು.

"ಸಾಕ್ಷಿ ನ್ಯಾಯಾಲಯದ ಭಾಷೆಯಲ್ಲಿ ಅಥವಾ ಆತನ ಇಲ್ಲವೇ ಆಕೆಯ ಸ್ವಂತ ಭಾಷೆಯಲ್ಲಿ ಸಾಕ್ಷ್ಯ ನುಡಿದಾಗ ಅದನ್ನು ಕೇವಲ ಇಂಗ್ಲಿಷ್‌ ಭಾಷೆಗೆ ಅನುವಾದಿಸಿ ದಾಖಲಿಸಿಕೊಳ್ಳಲು ಅನುಮತಿ ನೀಡುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಸಾಕ್ಷಿಯ ಮೂಲಭಾಷೆಯಲ್ಲಿರುವ ಮಾಹಿತಿ ಆತ ಏನು ಹೇಳಿದ್ದಾನೆ ಎಂಬ ಕುರಿತು ಉತ್ತಮ ಒಳನೋಟ ನೀಡುತ್ತದೆ ಎಂದಿರುವ ಪೀಠ “ಸಾಕ್ಷಿಯ ಭಾಷೆಯಲ್ಲಿಯೇ ಸಾಕ್ಷ್ಯ ದಾಖಲಾದಾಗ ಮಾತ್ರ ಆತ ನುಡಿದಿರುವ ಸಾಕ್ಷ್ಯ ಮತ್ತು ನ್ಯಾಯಾಲಯದಲ್ಲಿ ಸಾಕ್ಷಿಯ ವರ್ತನೆಯನ್ನು ಅತ್ಯುತ್ತಮ ರೀತಿಯಲ್ಲಿ ಗ್ರಹಿಸಬಹುದು. ಹೀಗಾಗಿ ನಿಖರತೆಯ ಪ್ರಶ್ನೆ ಬಂದಾಗ ಸಾಕ್ಷಿಯ ಮೂಲಭಾಷೆಯಲ್ಲಿರುವ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕೆ ವಿನಾ ನ್ಯಾಯಾಧೀಶರು ಸಿದ್ಧಪಡಿಸಿದ ಇಂಗ್ಲಿಷ್‌ಗೆ ಅನುವಾದಿತವಾದ ಜ್ಞಾಪನಾಪತ್ರವನ್ನಲ್ಲ” ಎಂಬುದಾಗಿ ವಿವರಿಸಿತು.

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿತು. ಇದೇ ವೇಳೆ ಪೀಠ, ಮದುವೆಯಾಗುವುದಾಗಿ ನೀಡುವ ಪ್ರತಿಯೊಂದು ಭರವಸೆಯ ಉಲ್ಲಂಘನೆಯೂ ಸುಳ್ಳು ಭರವಸೆ ಅಥವಾ ಐಪಿಸಿ ಸೆಕ್ಷನ್‌ 376ರ ಪ್ರಕಾರ "ಅತ್ಯಾಚಾರ" ಆಗವುದಿಲ್ಲ ಎಂದು ತಿಳಿಸಿ ಮೇಲ್ಮನವಿದಾರನನ್ನು ಖುಲಾಸೆಗೊಳಿಸಿತು.

ಪ್ರಕರಣದಲ್ಲಿ ಸಂತ್ರಸ್ತೆ ತನ್ನ ಭಾಷೆಯಲ್ಲಿ ಸಾಕ್ಷ್ಯ ನುಡಿದಿದ್ದರೂ ಅದನ್ನು ಇಂಗ್ಲಿಷ್‌ನಲ್ಲಿ ದಾಖಲಿಸಿರುವುದನ್ನು ನ್ಯಾಯಾಲಯ ಗಮನಿಸಿತು. ಇಂತಹ ಘಟನೆಗಳು ಬೇರೆ ಪ್ರಕರಣಗಳಲ್ಲಿಯೂ ಮರುಕಳಿಸಿರುವುದರಿಂದ ನ್ಯಾಯಾಲಯ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿತು.