Supreme Court
Supreme Court 
ಸುದ್ದಿಗಳು

ಈ ವರ್ಷದಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿರೀಕ್ಷೆಗಳೇನು?

Bar & Bench

ಚಳಿಗಾಲದ ಬಿಡುವಿನ ಬಳಿಕ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ ಇಂದಿನಿಂದ ಕಾರ್ಯಚಟುವಟಿಕೆ ಆರಂಭಿಸುತ್ತಿದೆ. ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ನ್ಯಾಯಾಂಗದ ಇತಿಹಾಸದಲ್ಲೇ ಇದೊಂದು ಅನಿಶ್ಚಿತ ವರ್ಷವಾಗಿದ್ದು, ಸಾಂವಿಧಾನಿಕವಾಗಿ ಅತ್ಯಂತ ಮಹತ್ವದ ಪ್ರಕರಣಗಳೂ ಸೇರಿದಂತೆ ನ್ಯಾಯಾಲಯದ ಚಟುವಟಿಕೆಗಳ ಮೆಲೆ ಇದೆಲ್ಲದರ ಗಾಢ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ಕಳೆದ ಮಾರ್ಚ್‌ನಲ್ಲಿ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದೆ. 'ಜೀವನ' ಮತ್ತು 'ಸ್ವಾತಂತ್ರ್ಯಕ್ಕೆ' ಸಂಬಂಧಿಸಿದ ಪ್ರಕರಣಗಳ ವಿಚಾರಣೆಯಲ್ಲಿ ಪ್ರಶಂಸನೀಯ ಕೆಲಸ ಮಾಡಿರುವ ನ್ಯಾಯಾಲಯವು ದೂರಗಾಮಿ ಪರಿಣಾಮ ಬೀರುವ ಪ್ರಮುಖ ಕಾನೂನಾತ್ಮಕ ಪ್ರಕರಣಗಳ ವಿಚಾರಣೆಗಳನ್ನು ಉದ್ದೇಶರಹಿತವಾಗಿ ಬದಿಗೆ ಸರಿಸಿದಂತಿದೆ.

ಸುಪ್ರೀಂ ಕೋರ್ಟ್‌ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಗಳನ್ನು ನಂಬುವುದಾದರೆ 2021ರಲ್ಲೂ ವರ್ಚುವಲ್‌ ನ್ಯಾಯಾಲಯ ವ್ಯವಸ್ಥೆ ಮುಂದುವರಿಯುವ ಸಾಧ್ಯತೆ ಇದೆ ಅಥವಾ ಕನಿಷ್ಠ ಪಕ್ಷ ಕೋವಿಡ್‌ ಲಸಿಕೆ ಗುರುತರ ಪ್ರಮಾಣದಲ್ಲಿ ಜನತೆಯ ಮೇಲೆ ಪರಿಣಾಮ ಬೀರುವವರೆಗೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ಮೂಲಗಳು ತಿಳಿಸಿವೆ.

“ನಿರ್ದಿಷ್ಟ ಪ್ರಕರಣಗಳ ವಿಚಾರಣೆ ನಡೆಸಲು ನಾವು ಭೌತಿಕ ನ್ಯಾಯಾಲಯ ಆರಂಭಿಸಿದೆವು. ಆದರೆ, ಪ್ರಕರಣಗಳ ಸಂಖ್ಯೆ ಹೆಚ್ಚಾದ್ದರಿಂದ ಅದು ಯಶಸ್ವಿಯಾಗಲಿಲ್ಲ. ಅನೇಕ ನ್ಯಾಯಮೂರ್ತಿಗಳು ಹಿರಿಯರ ವಿಭಾಗದಲ್ಲಿರುವುದರಿಂದ ಉಚಿತವಾಗಿ ಲಸಿಕೆ ದೊರೆಯುವವರೆಗೆ ವರ್ಚುವಲ್‌ ನ್ಯಾಯಾಲಯಗಳು ಮುಂದುವರಿಯಲಿವೆ. ” ಎಂದು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯಲ್ಲಿ ಇರುವ ಅಧಿಕಾರಿಯೊಬ್ಬರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಸಕ್ತ ವರ್ಷ ನಡೆಯಲಿರುವ ಪ್ರಮುಖ ಬೆಳವಣಿಗೆಗಳು ಇಂತಿವೆ:

  • ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ (ಏಪ್ರಿಲ್‌ 23, 2021), ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ (ಮಾರ್ಚ್‌ 13, 2021), ಅಶೋಕ್‌ ಭೂಷಣ್‌ (ಜುಲೈ 4, 2021), ರೋಹಿಂಟನ್‌ ಎಫ್‌ ನಾರಿಮನ್‌ (ಆಗಸ್ಟ್‌ 12, 2021) ಮತ್ತು ನವೀನ್‌ ಸಿನ್ಹಾ (ಆಗಸ್ಟ್‌ 18, 2021) ಪ್ರಸಕ್ತ ವರ್ಷದಲ್ಲಿ ನಿವೃತ್ತರಾಗಲಿದ್ದಾರೆ.

  • ಸುಪ್ರೀಂ ಕೋರ್ಟ್‌ನಲ್ಲಿ 34 ಅನುಮೋದಿತ ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯ 30 ನ್ಯಾಯಮೂರ್ತಿಗಳಿದ್ದಾರೆ. ನ್ಯಾ. ಇಂದೂ ಮಲ್ಹೋತ್ರಾ ನಿವೃತ್ತರಾದ ಬಳಿಕ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡುವವರೆಗೆ ನ್ಯಾ. ಇಂದಿರಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನ ಏಕೈಕ ನ್ಯಾಯಮೂರ್ತಿಯಾಗಿರಲಿದ್ದಾರೆ.

  • ಸಂಪ್ರದಾಯ ಮುಂದುವರಿದರೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾ. ಎನ್‌ ವಿ ರಮಣ ಅವರು ಎಸ್‌ ಎ ಬೊಬ್ಡೆ ನಿವೃತ್ತರಾದ ಬಳಿಕ ಸಿಜೆಐ ಆಗಲಿದ್ದಾರೆ. ಸದ್ಯ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ನ್ಯಾ. ರಮಣ ವಿರುದ್ಧ ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದು, ಅವೆಲ್ಲವನ್ನೂ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದಾರೆ.

  • ಹಿಂದಿನ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅನ್ವಯ ವಿಶೇಷ ಸ್ಥಾನಮಾನ ಕಲ್ಪಿಸಿದ್ದನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯು ಕಳೆದ ಆಗಸ್ಟ್‌ನಿಂದ ವಿಚಾರಣೆಗೆ ಬಾಕಿ ಇವೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ 23 ಅರ್ಜಿಗಳನ್ನು ಸಲ್ಲಿಸಲಾಗಿದೆ.

  • ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯಿದೆ- 2019 ಪ್ರಶ್ನಿಸಿ 150ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಡಿಸೆಂಬರ್‌ 18ರಂದು ನ್ಯಾಯಾಲಯವು ಮೋದಿ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಇದರ ವಿಚಾರಣೆಯು ನಡೆಯುವ ಸಾಧ್ಯತೆ ಇದೆ.

  • ನಂಬಿಕೆ ವರ್ಸಸ್‌ ಹಕ್ಕುಗಳು: ಶಬರಿಮಲ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಮತ್ತು ಇತರೆ ಲಿಂಗ ಸಂಬಂಧಿತ ಪ್ರಶ್ನೆಗಳನ್ನು ಒಳಗೊಂಡ ಪ್ರಕರಣದ ವಿಚಾರಣೆ ಕಳೆದ ಮಾರ್ಚ್‌ನಲ್ಲಿ ನಡೆಯಬೇಕಿತ್ತು. ಇದರ ಜೊತೆಗೆ ಮುಸ್ಲಿಂ, ಪಾರ್ಸಿ ಮತ್ತು ಹಿಂದೂ ಮಹಿಳೆಯರು ವಿವಿಧ ಧಾರ್ಮಿಕ ಕೇಂದ್ರಗಳಿಗೆ ಪ್ರವೇಶಿಸುವ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

  • ಹಣಕಾಸು ಮಸೂದೆಯ ರೂಪದಲ್ಲಿ ಸಂಸತ್‌ನಲ್ಲಿ ಕೇಂದ್ರ ಸರ್ಕಾರವು ವಿವಿಧ ವಿಧೇಯಕಗಳ ಅನುಮೋದನೆಗೆ ಮುಂದಾಗುತ್ತಿರುವ ಪ್ರಕರಣದ ವಿಚಾರಣೆಯೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

  • ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಕೆನೆಪದರ ತತ್ಚ ಅನ್ವಯಿಸುವಿಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಬೇಕಿದೆ.

  • ಮಾಹಿತಿ ಹಕ್ಕು ಕಾಯಿದೆಗೆ (ಆರ್‌ಟಿಐ) ತರಲಾಗಿರುವ ಸಾಂವಿಧಾನಿಕ ಸಿಂಧುತ್ವ-2019 ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸಂಸದ ಜೈರಾಂ ರಮೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

  • ಸಂವಿಧಾನ ತಿದ್ದುಪಡಿ ಕಾಯಿದೆ (103ನೇ ತಿದ್ದುಪಡಿ) ಜಾರಿ ಮಾಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲುಎಸ್‌) ಕಲ್ಪಿಸಿರುವ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನಿರ್ಧರಿಸಲಿದೆ.

  • ದಿವಾಳಿ ಸಂಹಿತೆಯ (ಐಬಿಸಿ) ನಿಬಂಧನೆಗಳನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸಲಿದೆ.

  • ಕೃಷಿಕರ ವ್ಯಾಪಾರ ಮತ್ತು ವಾಣಿಜ್ಯ (ಕೃಷಿ ಮತ್ತು ಪ್ರಚಾರ) ಕಾಯ್ದೆ, ಕೃಷಿಕರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ ಒಪ್ಪಂದ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 8 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ನಡೆಸಬೇಕಿದೆ.

  • ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಪೀಠದ ಮುಂದೆ ಚುನಾವಣಾ ಬಾಂಡ್‌ಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನೆಸಿ ಅರ್ಜಿ ಸಲ್ಲಿಸಲಾಗಿದೆ.

  • ಆರ್‌ಬಿಐ ಸಾಲ ಮೊರಟೊರಿಯಂ ಮತ್ತು ಟಾಟಾ ವರ್ಸಸ್‌ ಮಿಸ್ತ್ರಿ ವಿರುದ್ಧದ ಪ್ರಕರಣದ ಮಹತ್ವದ ತೀರ್ಪುಗಳು ಸಿಜೆಐ ಎಸ್‌ ಎ ಬೊಬ್ಡೆ ಅವರು ನಿವೃತ್ತರಾಗುವುದರ ಒಳಗೆ ಹೊರಬೀಳುವ ಸಾಧ್ಯತೆ ಇವೆ.