Justices Ashok Bhushan, R Subhash Reddy, MR Shah 
ಸುದ್ದಿಗಳು

ಮಹಿಳೆಯರ ಹಕ್ಕುಗಳ ರಕ್ಷಣೆಯಲ್ಲಿ ಸಮಾಜದ ಏಳಿಗೆ: ಕೂಡು ವಸತಿಯಲ್ಲಿರುವ ಮಹಿಳಾ ಹಕ್ಕುಗಳ ಕುರಿತು ಸುಪ್ರೀಂ ವ್ಯಾಖ್ಯಾನ

ಮನೆಯು ಅತ್ತೆಗೆ ಸೇರಿದ್ದರೆ ಅದರಲ್ಲಿ ಪತಿಗೆ ಅಧಿಕಾರವಿರುವುದಿಲ್ಲ. ಆಗ ಮನೆಯಲ್ಲಿ ವಾಸಿಸುವ ಹಕ್ಕನ್ನು ಪತ್ನಿ ಪ್ರತಿಪಾದಿಸುವ ಹಾಗಿಲ್ಲ ಎಂದಿದ್ದ ಎಸ್ ಆರ್ ಬಾತ್ರಾ ಪ್ರಕರಣದಲ್ಲಿ ಸುಪ್ರೀಂ ತೀರ್ಪನ್ನು ತ್ರಿಸದಸ್ಯ ಪೀಠ ತಳ್ಳಿಹಾಕಿದೆ.

Bar & Bench

ಕೌಟುಂಬಿಕ ದೌರ್ಜ್ಯನದಿಂದ ಮಹಿಳೆಯರಿಗೆ ಸಂರಕ್ಷಣೆ ಕಾಯಿದೆ-2005 ವ್ಯಾಖ್ಯಾನ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಕಾಯಿದೆಯ ಸೆಕ್ಷನ್ 2(s) ಪ್ರಕಾರ ಕೂಡು ವಸತಿ (ಶೇರ್ಡ್ ಹೌಸ್‌ಹೋಲ್ಡ್) ಅಂದರೆ ಪತಿಯು ಸದಸ್ಯರಾಗಿರುವ ಅಥವಾ ಸಂತ್ರಸ್ತೆಯ ಪತಿಯು ಪಾಲು ಹೊಂದಿರುವ ಕೌಟುಂಬಿಕ ವಸತಿ (ಹೌಸ್‌ಹೋಲ್ಡ್) ಎಂದು ಮಾತ್ರವೇ ಅಲ್ಲ ಎಂದು ಪೀಠವು ಹೇಳಿದೆ (ಸತೀಶ್‌ ಚಂದರ್‌ ಅಹುಜಾ v. ಸ್ನೇಹಾ ಅಜುಹಾ). ಆ ಮೂಲಕ ಕೂಡು ವಸತಿಯ ಅರ್ಥವನ್ನು ಮಿತಿಗೊಳಿಸಿದ್ದ ವ್ಯಾಖ್ಯಾನವನ್ನು ಬದಿಗೆ ಸರಿಸಿದೆ.

"ಸೆಕ್ಷನ್‌ 2(s)ನಲ್ಲಿ ನೀಡಲಾಗಿರುವ ಕೂಡು ವಸತಿಯ ಅರ್ಥವ್ಯಾಖ್ಯಾನವನ್ನು ಪತಿಯು ಸದಸ್ಯರಾಗಿರುವ ಅಥವಾ ಸಂತ್ರಸ್ತೆಯ ಪತಿಯು ಪಾಲು ಹೊಂದಿರುವ ಕೂಡು ಕುಟುಂಬದ ಕೌಟುಂಬಿಕ ವಸತಿ ಎಂದು ಮಾತ್ರವೇ ಅರ್ಥೈಸಿಕೊಳ್ಳುವಂತೆ ಓದಿಕೊಳ್ಳಬಾರದು," ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಸಂತ್ರಸ್ತೆಯ ಮಾವ ಸಲ್ಲಿಸಿರುವ ಅರ್ಜಿಯಲ್ಲಿ ಸ್ವತ್ತಿನ ಮಾಲೀಕತ್ವ ಕೇವಲ ತಮ್ಮದೇ ಆಗಿದ್ದು , ಅದು 'ಕೂಡು ವಸತಿ' ಅಲ್ಲ. ಈ ಸ್ವತ್ತಿನಲ್ಲಿ ಪುತ್ರನಿಗೆ ಯಾವುದೇ ಅಧಿಕಾರವಿಲ್ಲ ಎಂದು ಮಾವ ತಗಾದೆ ತೆಗೆದಿರುವ ಮನವಿಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಂ ಆರ್ ಶಾ ಮತ್ತು ಸುಭಾಷ್ ರೆಡ್ಡಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ವಿಚಾರಣೆಗೆ ಪರಿಗಣಿಸಿತ್ತು.

ಮೇಲ್ಮನವಿದಾರರಾದ ಸಂತ್ರಸ್ತೆಯ ಮಾವ 1983ರಲ್ಲಿ ಮನೆ ಖರೀದಿಸಿದ್ದು, 1995ರಲ್ಲಿ ಪುತ್ರ ವಿವಾಹವಾಗಿ ಅದೇ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. 2014ರಲ್ಲಿ ಪತ್ನಿ ಹಿಂಸೆ ನೀಡುತ್ತಿದ್ದಾಳೆ ಎಂದು ಆರೋಪಿಸಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2015ರಲ್ಲಿ ಆತನ ಪತ್ನಿಯು ಕೌಟುಂಬಿಕ ದೌರ್ಜನ್ಯ ಕಾಯಿದೆ ಅಡಿ ಪತಿ, ಮಾವ ಹಾಗೂ ಅತ್ತೆಯ ವಿರುದ್ಧ ದೂರು ದಾಖಲಿಸಿದ್ದರು.

ಸೊಸೆ ನೀಡುತ್ತಿರುವ ಕಿರುಕುಳದಿಂದ ತಾನು ಮತ್ತು ತನ್ನ ಪತ್ನಿ ಬೇಸತ್ತಿದ್ದು, ಸೊಸೆಯ ಪತಿ/ಮಗ ಜೀವಂತವಾಗಿರುವಾಗ ಆಕೆಯ ಜವಾಬ್ದಾರಿ ನೋಡಿಕೊಳ್ಳುವುದು ತನ್ನ ಕರ್ತವ್ಯವಲ್ಲ ಎಂದು ವಿಚಾರಣಾಧೀನ ನ್ಯಾಯಾಲಯದಲ್ಲಿ ಮಾವ ಪ್ರತಿಪಾದಿಸಿದ್ದರು.

ಕೂಡು ವಸತಿ ಆಗಿರುವುದರಿಂದ ಅಲ್ಲಿಂದ ತನ್ನನ್ನು ಹೊರಹಾಕಲಾಗದು. ಇದರಲ್ಲಿ ವಾಸಿಸುವ ಹಕ್ಕು ತನಗೂ ಇದೆ ಎಂದು ಸೊಸೆ ವಾದಿಸಿದ್ದರು. ಆದರೆ, 2019ರ ಏಪ್ರಿಲ್ ನಲ್ಲಿ ವಿಚಾರಣಾಧೀನ ನ್ಯಾಯಾಲಯವು ಸ್ವತ್ತನ್ನು ಮೇಲ್ಮನವಿದಾರರು/ಮಾವ ಅವರಿಗೆ ಬಿಟ್ಟುಕೊಡುವಂತೆ ಸೊಸೆಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಬದಿಗಿಟ್ಟು, ಹೊಸ ತೀರ್ಪು ನೀಡುವಂತೆ 2019ರ ಡಿಸೆಂಬರ್ ನಲ್ಲಿ ದೆಹಲಿ ಹೈಕೋರ್ಟ್ ಪ್ರಕರಣವನ್ನು ಮರಳಿಸಿತ್ತು. ಪತಿಯನ್ನೂ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಬೇಕು ಎಂಬುದನ್ನು ಹೈಕೋರ್ಟ್ ಪರಿಗಣಿಸಿತ್ತು.

ಈ ಹಿನ್ನೆಲೆಯಲ್ಲಿ ಮಾವ ಇದನ್ನು ಪ್ರಶ್ನಿಸಿ ಹಾಗೂ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುವಂತೆ ಕೋರಿ ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತಮ್ಮ ಮನವಿಗೆ ಪೂರಕವಾಗಿ ಎಸ್‌ ಆರ್ ಬಾತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿದ್ದ ಎಸ್ ಬಿ ಸಿನ್ಹಾ ಮತ್ತು ಮಾರ್ಕಂಡೇಯ ಕಾಟ್ಜು ಅವರಿದ್ದ ವಿಭಾಗೀಯ ಪೀಠವು ಮನೆಯು ಅತ್ತೆಗೆ ಸೇರಿದ್ದರೆ ಅದು ಪತಿಗೆ ದಕ್ಕುವುದಿಲ್ಲ. ಈ ಹಿನ್ನೆಲೆಯಲ್ಲಿ ಪತ್ನಿ ಆ ನಿವಾಸದಲ್ಲಿ ವಾಸಿಸುವ ಹಕ್ಕು ಪ್ರತಿಪಾದಿಸಲಾಗದು ಎಂದು ನೀಡಿದ್ದ ತೀರ್ಪನ್ನು ಆಧರಿಸಿ ಮಾವ ಸುಪ್ರೀಂ ಕೋರ್ಟ್ ನಲ್ಲಿ ತಗಾದೆ ತೆಗೆದಿದ್ದರು.

ಎಸ್ ಆರ್‌ ಬಾತ್ರಾ ಪ್ರಕರಣವು "ಸರಿಯಾಗಿ ಕಾನೂನನ್ನು ಬಿಡಿಸಿಲ್ಲ", 2005ರ ಕಾಯಿದೆಯ ಸೆಕ್ಷನ್‌ 2(1)(s) ಅನ್ನು ಸೂಕ್ತವಾಗಿ ಅರ್ಥೈಸಿಲ್ಲ ಎಂದಿರುವ ಪೀಠವು, ಆದೇಶದಲ್ಲಿ ಹೀಗೆ ಹೇಳಿದೆ:

"ಸೆಕ್ಷನ್‌ 2(s)ನಲ್ಲಿ ನೀಡಲಾಗಿರುವ ಕೂಡು ವಸತಿಯ ಅರ್ಥವ್ಯಾಖ್ಯಾನವನ್ನು ಪತಿಯು ಸದಸ್ಯರಾಗಿರುವ ಅಥವಾ ಸಂತ್ರಸ್ತೆಯ ಪತಿಯು ಪಾಲು ಹೊಂದಿರುವ ಕೂಡು ಕುಟುಂಬದ ಕೌಟುಂಬಿಕ ವಸತಿ ಎಂದು ಮಾತ್ರವೇ ಅರ್ಥೈಸಿಕೊಳ್ಳುವಂತೆ ಓದಿಕೊಳ್ಳಬಾರದು. 2005ರ ಕಾಯಿದೆಯ ಸೆಕ್ಷನ್ 2(1)(s) ಅನ್ನು ಎಸ್‌ ಆರ್ ಬಾತ್ರಾ ವರ್ಸಸ್ ತರುಣಾ ಬಾತ್ರಾ (ಸುಪ್ರಾ) ಪ್ರಕರಣದ ತೀರ್ಪಿನಲ್ಲಿ ಸರಿಯಾದ ರೀತಿಯಲ್ಲಿ ಅರ್ಥೈಸಲಾಗಿಲ್ಲ. ಅಲ್ಲದೇ ಆ ತೀರ್ಪಿನಲ್ಲಿ ಸರಿಯಾದ ರೀತಿಯಲ್ಲಿ ಕಾನೂನು ಬಿಡಿಸಿಲ್ಲ,” ಎಂದಿದೆ.

ಮುಂದುವರೆದು ನ್ಯಾಯಪೀಠವು ತನ್ನ ಆದೇಶದಲ್ಲಿ, “ಕೂಡು ವಸತಿಯು ಸೆಕ್ಷನ್ 2(s)ರ ಪ್ರಕಾರ ಸಂತ್ರಸ್ತೆ ದೂರು ನೀಡುವ ಸಂದರ್ಭದಲ್ಲಿ ನೆಲೆಸಿದ್ದ “ಕೂಡು ವಸತಿ”ಯಾಗಿರುತ್ತದೆ ಅಥವಾ ಇತ್ತೀಚೆಗೆ ಆಕೆಯನ್ನು ಹೊರಗಿಟ್ಟಿರುವ ಅಥವಾ ತಾತ್ಕಾಲಿಕವಾಗಿ ಗೈರಾಗಿರುವ ಸ್ಥಳವಾಗಿರುತ್ತದೆ ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯವಾಗಿದೆ” ಎಂದು ಹೇಳಿದೆ.

ಅರ್ಜಿಯಲ್ಲಿ ಎತ್ತಿರುವ ಹಲವು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡುವುದಕ್ಕೂ ಮುನ್ನ ಪೀಠವು “ಮಹಿಳೆಯರ ಹಕ್ಕುಗಳ ಸಂರಕ್ಷಣೆ ಮತ್ತು ಉತ್ತೇಜನೆಯಲ್ಲಿ ಯಾವುದೇ ಸಮಾಜದ ಏಳಿಗೆ ಇದೆ” ಎಂದು ಹೇಳಿದೆ.

ಭಾರತದಲ್ಲಿ ಮಹಿಳೆಯರ ದಯನೀಯ ಸ್ಥಿತಿ ಮತ್ತು ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಏಕೆ ವರದಿಯಾಗುತ್ತಿಲ್ಲ ಎಂಬುದರ ಬಗ್ಗೆ ಪೀಠವು ಒತ್ತಿ ಹೇಳಿದೆ. “ದೇಶದಲ್ಲಿ ಕೌಟುಂಬಿಕ ದೌರ್ಜನ್ಯ ಮಹಿಳೆಯರ ಮೇಲೆ ಒಂದಲ್ಲಾ ಒಂದು ವಿಧದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಈ ಪೈಶಾಚಿಕ ಕೃತ್ಯ ಅತ್ಯಂತ ಕಡಿಮೆಯಾಗಿ ವರದಿಯಾಗುತ್ತಿದೆ. ತನ್ನ ಮೇಲಿನ ಎಂದೂ ಮುಗಿಯದ ದೌರ್ಜನ್ಯ ಮತ್ತು ತಾರತಮ್ಯವನ್ನು ಮಹಿಳೆ, ಪುತ್ರಿ, ಸಹೋದರಿ, ಪತ್ನಿ, ತಾಯಿಯು ವಿಧಿಯ ಮೇಲೆ ಹಾಕಿ ಮೌನವಾಗುತ್ತಾಳೆ” ಎಂದು ಪೀಠ ಹೇಳಿದೆ.

“ಪ್ರತೀಕಾರ ತೆಗೆದುಕೊಳ್ಳಲು ಬಯಸದ ಮಹಿಳೆ ಒಂದುಕಡೆ, ಈ ಕೃತ್ಯಗಳನ್ನು ನಿಯಂತ್ರಿಸಲು ಸೂಕ್ತ ಕಾನೂನುಗಳು ಇಲ್ಲದಿರುವುದು ಮತ್ತೊಂದು ಕಡೆ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳ ಬಗ್ಗೆ ತಿಳಿವಳಿಕೆ ಇಲ್ಲದಿರುವುದು ಮತ್ತು ಮಹಿಳೆಯರ ಬಗ್ಗೆ ಸಮಾಜ ತಳೆಯುವ ನಿಲುವು ಅವರನ್ನು ಮತ್ತಷ್ಟು ದುರ್ಬಲವಾಗಿಸಿದೆ. ದೇಶದಲ್ಲಿ ಪತ್ನಿಯು ಪತಿಯ ಅಧೀನಕ್ಕೆ ಒಳಪಟ್ಟಿರುವುದಲ್ಲದೇ ಆತನ ಸಂಬಂಧಿಕರ ಹಿಡಿತದಲ್ಲಿ ಸಿಲುಕಿಕೊಂಡಿರುವುದರಿಂದ ಸಮಾಜದಲ್ಲಿ ಕಳಂಕ ಅಂಟಿಕೊಳ್ಳುತ್ತದೆ ಎಂಬ ಭಾವನೆ ಮತ್ತು ಮಹಿಳೆಯರ ಮನೋಭಾವದಿಂದಾಗಿ ಸಾಕಷ್ಟು ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿಲ್ಲ” ಎಂದು ಹೇಳಿದೆ.