Free speech, Supreme Court 
ಸುದ್ದಿಗಳು

[ಆನ್‌ಲೈನ್‌ ನಿಯಂತ್ರಣ] ವಯೋಮಾನ ದೃಢೀಕರಣಕ್ಕೆ ಆಧಾರ್‌ ಬಳಸಿ, ಸ್ವಾಯತ್ತ ನಿಯಂತ್ರಣಾ ಸಂಸ್ಥೆ ರಚಿಸಿ: ಸುಪ್ರೀಂ ಸಲಹೆ

ಅಲ್ಲದೆ, ಆನ್‌ಲೈನ್‌ ವಸ್ತುವಿಷಯಗಳಿಗೆ ಸಂಬಂಧಿಸಿದ ಪ್ರಸಕ್ತ ಸನ್ನಿವೇಶ ನಿಯಂತ್ರಿಸಲು ಸ್ವಯಂವೇದ್ಯವಾದ ಸಂಸ್ಥೆಗಳಿಂದ ಸಾಧ್ಯವಿಲ್ಲ. ಇದಕ್ಕಾಗಿ ಪ್ರತ್ಯೇಕವಾದ, ಬಾಹ್ಯ ಪ್ರಭಾವಗಳಿಂದ ಮುಕ್ತವಾದ ಸ್ವಾಯತ್ತ ನಿಯಂತ್ರಣಾ ಸಂಸ್ಥೆಯೊಂದರ ಅಗತ್ಯವಿದೆ

Bar & Bench

ಆನ್‌ಲೈನ್‌ನಲ್ಲಿ ಆಶ್ಲೀಲ ತಾಣಗಳ ಬಳಕೆಗೂ ಮುನ್ನ ಆಧಾರ್‌ ಬಳಕೆಯ ಮೂಲಕ ಕಡ್ಡಾಯವಾಗಿ ವಯೋಮಾನ ದೃಢೀಕರಣ ಪಡಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಸಾಮಾನ್ಯವಾಗಿ ಅಶ್ಲೀಲ ಜಾಲತಾಣಗಳನ್ನು ಪ್ರವೇಶಿಸುವುದಕ್ಕೂ ಮುನ್ನ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತದೆಯಾದರೂ, ಇದರ ಜೊತೆಗೆ ಹೆಚ್ಚುವರಿಯಾಗಿ ವಯೋಮಾನ ದೃಢೀಕರಣವನ್ನು ಅಳವಡಿಸಬಹುದು ಎಂದು ಸಿಜೆಐ ಸೂರ್ಯಕಾಂತ್‌ ಅಭಿಪ್ರಾಯಪಟ್ಟರು.

ವಯಸ್ಕ ಆನ್‌ಲೈನ್‌ ಕಾರ್ಯಕ್ರಮವೊಂದರಲ್ಲಿ ತಮ್ಮ ಹೇಳಿಕೆಗಳ ಮೂಲಕ ವಿವಾದ ಹುಟ್ಟುಹಾಕಿದ್ದ ಕಾರಣಕ್ಕೆ ದಾಖಲಾಗಿದ್ದ ಪ್ರಕರಣಗಳನ್ನು ರದ್ದುಪಡಿಸಲು ಕೋರಿ ಯೂಟ್ಯೂಬರ್‌ಗಳು, ಪಾಡ್‌ಕಾಸ್ಟರ್‌ಗಳು, ಹಾಸ್ಯಗಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್‌ ಹಾಗೂ ನ್ಯಾ. ಜೊಯಮಲ್ಯ ಬಾಗ್ಚಿ ಅವರ ನೇತೃತ್ವದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಇಂದಿನ ವಿಚಾರಣೆ ವೇಳೆ ನ್ಯಾಯಾಲಯವು ಆನ್‌ಲೈನ್‌ ವಸ್ತುವಿಷಯಗಳನ್ನು ನಿಯಂತ್ರಿಸಲು ಸ್ವಾಯತ್ತವಾದ ಸಂಸ್ಥೆಯೊಂದನ್ನು ರಚಿಸಬೇಕಾದ ಅಗತ್ಯವಿದೆ ಎನ್ನುವ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿತು. ಆ ಮೂಲಕ ಯಾವ ವಸ್ತು-ವಿಷಯದ ಕಾರ್ಯಕ್ರಮಗಳನ್ನು ಅನುಮತಿಸಬಹುದು ಎನ್ನುವ ಬಗ್ಗೆ ನಿರ್ಧರಿಸಬಹುದು ಎಂದು ತಿಳಿಸಿದರು.

ವಿಚಾರಣೆ ವೇಳೆ ಸಿಜೆಐ ಕಾಂತ್‌ ಅವರು, "ನೋಡಿ ಸಮಸ್ಯೆ ಏನೆಂದರೆ, ಎಚ್ಚರಿಕೆಯ ಸಂದೇಶ ತೋರಿಸಿದ ಬೆನ್ನಿಗೇ ಕಾರ್ಯಕ್ರಮವು ಆರಂಭವಾಗಿ ಬಿಡುತ್ತದೆ. ನೀವು ನೋಡಬೇಕೇ, ನೋಡಬಾರದೇ ಎಂದು ನಿರ್ಧರಿಸುವುದಕ್ಕೂ ಮುನ್ನವೇ ಕಾರ್ಯಕ್ರಮ ಶುರುವಾಗಿರುತ್ತದೆ. ಕೆಲ ಸೆಕೆಂಡುಗಳು ಮಾತ್ರವೇ ಎಚ್ಚರಿಕೆ ಸಂದೇಶವಿರುತ್ತದೆ... ಬಹುಶಃ ಅದರ ನಂತರ ಆಧಾರ್‌ ಕಾರ್ಡ್‌ (ವಯೋಮಾನ ದೃಢೀಕರಣಕ್ಕೆ) ಮುಂತಾದ ಏನನ್ನಾದರೂ ಕೇಳುವಂತಹ ಪ್ರಕ್ರಿಯೆ ಇರಬೇಕು. ಆ ಮೂಲಕ ವಯೋಮಾನವನ್ನು ದೃಢೀಕರಿಸಿಕೊಳ್ಳಬಹುದು, ತದನಂತರವಷ್ಟೇ ಕಾರ್ಯಕ್ರಮ ಆರಂಭವಾಗಬೇಕು. ಇದೆಲ್ಲವೂ ಉದಾಹರಣಾತ್ಮಕ ಸಲಹೆಗಳು ಮಾತ್ರವೇ ಆಗಿವೆ.. ವಿವಿಧ ಪರಿಣತರು, ತಜ್ಞರು ಸೇರಿ ಈ ಕುರಿತು ನಿಯಮಗಳನ್ನು ರೂಪಿಸಬಹುದು," ಎನ್ನುವ ಅಭಿಪ್ರಾಯ ನೀಡಿದರು.

ಅಲ್ಲದೆ, ಆನ್‌ಲೈನ್‌ ವಸ್ತುವಿಷಯಗಳಿಗೆ ಸಂಬಂಧಿಸಿದಂತೆ ಪ್ರಸಕ್ತ ಸನ್ನಿವೇಶವನ್ನು ನಿಯಂತ್ರಿಸಲು ಸ್ವಯಂವೇದ್ಯವಾದ ಸಂಸ್ಥೆಗಳಿಂದ ಸಾಧ್ಯವಿಲ್ಲ. ಇದಕ್ಕಾಗಿ ಪ್ರತ್ಯೇಕವಾದ, ಬಾಹ್ಯ ಪ್ರಭಾವಗಳಿಂದ ಮುಕ್ತವಾದ ಸ್ವಾಯತ್ತ ನಿಯಂತ್ರಣಾ ಸಂಸ್ಥೆಯೊಂದರ ಅಗತ್ಯವಿದೆ ಎಂದು ನ್ಯಾಯಪೀಠವು ತಿಳಿಸಿತು.

ಅಲ್ಲದೆ ನ್ಯಾಯಾಲಯವು, ನಿಯಂತ್ರಣ ಹಾಗೂ ಮೂಲಭೂತ ಹಕ್ಕುಗಳ ನಡುವೆ ಸಮತೋಲನವನ್ನು ಸಾಧಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿತು. "ಯಾರನ್ನೇ ಆದರೂ ಸಂಪೂರ್ಣವಾಗಿ ನಿರ್ಬಂಧಿಸುವಂತಹ ಆದೇಶಗಳನ್ನು (ಗ್ಯಾಗ್‌) ತಾನು ಒಪ್ಪುವುದಿಲ್ಲ," ಎಂದು ಸ್ಪಷ್ಟಪಡಿಸಿತು.

ಸಮಯ್ ರೈನಾ ಅವರ ಇಂಡಿಯಾ ಹ್ಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಸಂಚಿಕೆಯಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲಹಾಬಾದಿಯಾ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಕೋರಿ ಅಲಾಹಾಬಾದಿಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ಅಲಾಹಾಬಾದಿಯಾ ಅರ್ಜಿಯ ಜೊತೆಗೆ, ಕ್ಯೂರ್‌ ಎಸ್‌ಎಂಎ (ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ) ಇಂಡಿಯಾ ಫೌಂಡೇಷನ್‌ ಸಲ್ಲಿಸಿದ್ದ ಅರ್ಜಿಯನ್ನೂ ಆಲಿಸಲಾಯಿತು. ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಯ ಚಿಕಿತ್ಸೆಗೆ ತಗಲುವ ದುಬಾರಿ ವೆಚ್ಚದ ಬಗ್ಗೆ ರೈನಾ ಅಸಂವೇದನಾಶೀಲ ಹೇಳಿಕೆಗಳನ್ನು ನೀಡಿದ್ದಾರೆ ಎಂದು ರೈನಾ ವಿರುದ್ಧ ಸಂಸ್ಥೆಯು ಆರೋಪಿಸಿದೆ. ಅಲ್ಲದೆ, ಇದೇ ಶೋನಲ್ಲಿ ಪಾಲ್ಗೊಂಡಿದ್ದ ಇತರ ಕೆಲ ಹಾಸ್ಯನಟರೂ ಸಹ ಇದೇ ಬಗೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ.

ವಿಚಾರಣೆ ವೇಳೆ ನ್ಯಾಯಾಲಯವು, ಮತ್ತೊಬ್ಬರನ್ನು ಕೀಳಾಗಿ ಕಾಣುವಂತಹ, ಅಂಗವೈಕಲ್ಯವನ್ನು ಅವಹೇಳನ ಮಾಡುವಂತಹ ಚಟುವಟಿಕೆಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತಹ ಕಠಿಣ ಕಾನೂನಿನ ಅಗತ್ಯತೆಯ ಬಗ್ಗೆಯೂ ನ್ಯಾಯಾಲಯವು ಸರ್ಕಾರಕ್ಕೆ ತಿಳಿಸಿತು.

"ನೀವೇಕೆ ಎಸ್‌ಸಿ, ಎಸ್‌ಟಿ ಕಾಯಿದೆಯ ಮಾದರಿಯಲ್ಲಿಯೇ ಕಠಿಣವಾದ ಕಾಯಿದೆಯೊಂದನ್ನು ಅವರನ್ನು (ವಿಕಲಚೇತನರನ್ನು) ಅವಹೇಳನ ಮಾಡುವುದನ್ನು ತಡೆಯಲು ತರಬಾರದು," ಎಂದು ಸಿಜೆಐ ಸೂರ್ಯಕಾಂತ್‌ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸಹಮತಿಸಿದ ಮೆಹ್ತಾ ಅವರು, ಮತ್ತೊಬ್ಬರ ಘನತೆಯನ್ನು ಕುಗ್ಗಿಸುವಂತಹ ಹಾಸ್ಯ ಸಲ್ಲದು ಎಂದರು.

ಪ್ರಕರಣವನ್ನು ನಾಲ್ಕು ವಾರಗಳ ನಂತರ ಮತ್ತೆ ವಿಚಾರಣೆಗೆ ಪಟ್ಟಿಯಾಗಲಿದೆ.